ರಾಜ್ಯಕ್ಕೆ ಸೇರಿದ ಕೆಲ ಪ್ರದೇಶಗಳು ತಮಿಳುನಾಡು, ಮಹಾರಾಷ್ಟ್ರದಲ್ಲಿವೆ. ನಮ್ಮ ನದಿಗಳ ನೀರು ನಮ್ಮದಾಗಿ ಉಳಿದಿಲ್ಲ. ಕೊಡಗಿನಲ್ಲಿ ಹುಟ್ಟುವ ಕಾವೇರಿ ನೀರಿಗೆ ತಮಿಳುನಾಡಿನ ಯಜಮಾನಿಕೆ ಇದೆ. ಬೆಳಗಾವಿ ಜಿಲ್ಲೆಯಲ್ಲಿ ಹುಟ್ಟುವ ಮಹದಾಯಿ ನೀರನ್ನು ಬೆಳಗಾವಿ ನಗರಕ್ಕೆ ಕುಡಿಯಲು ಬಳಸಿಕೊಳ್ಳಲು ನಮಗೆ ಯೋಗ್ಯತೆ ಇಲ್ಲದಂತಾಗಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಹೊಸ ಕನ್ನಡ ನಾಡು ಉದಯವಾಗಿ 70 ವರ್ಷ ಕಳೆದರೂ ಸಹ ಇಂದಿಗೂ ಅನೇಕ ಸಮಸ್ಯೆ ಬಗೆ ಹರಿದಿಲ್ಲ. ರಾಜಧಾನಿ ಬೆಂಗಳೂರು ಕನ್ನಡಿಗರದ್ದಾಗಿ ಉಳಿದಿಲ್ಲ. ಬೆಂಗಳೂರಿನ ಕೆಲ ಪ್ರದೇಶಗಳಲ್ಲಿ ಕನ್ನಡ ಮಾತನಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತುರುವೆಕೆರೆ ರಾಜ್ಯ ಹ್ಯಾಂಡ್‌ಬಾಲ್ ಸಂಸ್ಥೆ ಉಪಾಧ್ಯಕ್ಷ ಹಾಗೂ ನಿವೃತ್ತ ಪ್ರಾಂಶುಪಾಲ ಪ್ರೊ.ಕೆ.ಪುಟ್ಟರಂಗಪ್ಪ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ಶ್ರೀಸೌಮ್ಯಕೇಶವಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ತಾಲೂಕು ಆಡಳಿತದಿಂದ ಭಾನುವಾರ ಆಯೋಜಿಸಿದ್ದ 71ನೇ ಕನ್ನಡ ರಾಜ್ಯೋತ್ಸವದಲ್ಲಿ ಪ್ರಧಾನ ಭಾಷಣ ಮಾತನಾಡಿದ ಅವರು, ರಾಜ್ಯಕ್ಕೆ ಸೇರಿದ ಕೆಲ ಪ್ರದೇಶಗಳು ತಮಿಳುನಾಡು, ಮಹಾರಾಷ್ಟ್ರದಲ್ಲಿವೆ. ನಮ್ಮ ನದಿಗಳ ನೀರು ನಮ್ಮದಾಗಿ ಉಳಿದಿಲ್ಲ. ಕೊಡಗಿನಲ್ಲಿ ಹುಟ್ಟುವ ಕಾವೇರಿ ನೀರಿಗೆ ತಮಿಳುನಾಡಿನ ಯಜಮಾನಿಕೆ ಇದೆ. ಬೆಳಗಾವಿ ಜಿಲ್ಲೆಯಲ್ಲಿ ಹುಟ್ಟುವ ಮಹದಾಯಿ ನೀರನ್ನು ಬೆಳಗಾವಿ ನಗರಕ್ಕೆ ಕುಡಿಯಲು ಬಳಸಿಕೊಳ್ಳಲು ನಮಗೆ ಯೋಗ್ಯತೆ ಇಲ್ಲದಂತಾಗಿದೆ ಎಂದರು.

ವಿಶ್ವದ ಅತಿ ಹೆಚ್ಚು ಮಾತನಾಡುವ ಭಾಷೆಗಳಲ್ಲಿ ಕನ್ನಡ ಭಾಷೆ 27ನೇ ಸ್ಥಾನ ಪಡೆದಿದ್ದೇವೆ ಎಂದು ನಾವು ಪತ್ರಿಕೆಗಳ ಮೇಲೆ ಹೆಮ್ಮೆಪಟ್ಟುಕೊಳ್ಳಬೇಕೇ ವಿನಃ ನಮ್ಮ ಭಾಷೆಗೆ ಇನ್ನೂ ಕೂಡ ರಕ್ಷಣೆ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕನ್ನಡದ ರಕ್ಷಣೆಗೆ ರಾಜ್ಯ ಸರ್ಕಾರ ಕನ್ನಡ ಕಾವಲು ಸಮಿತಿ ನೇಮಕ ಮಾಡಿರುವುದು ಎಂತಹ ವಿಪರ್ಯಾಸವೆಂಬುದನ್ನು ಪ್ರತಿಯೊಬ್ಬರೂ ಅರ್ಥೈಸಿಕೊಳ್ಳಬೇಕು ಎಂದರು.

ರಾಷ್ಟ್ರ ಹಾಗೂ ನಾಡ ಧ್ವಜಾರೋಹಣ ನೆರವೇರಿಸಿದ ತಹಸೀಲ್ದಾರ್ ಲೆಫ್ಟಿನೆಂಟ್ ಜನರಲ್ ಡಾ.ಅಶೋಕ್ ಮಾತನಾಡಿ, ಕನ್ನಡ ಭಾಷೆ ಕೇವಲ ಒಂದು ಭಾಷೆಯಲ್ಲ ಅದೊಂದು ಅಸ್ಮಿತೆ. ಕನ್ನಡದ ಹಿರಿಮೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಪರಿಚಯಿಸುವ ಕೆಲಸ ಪ್ರತಿಯೊಬ್ಬರಿಂದಲೂ ಆಗಬೇಕು ಎಂದರು.

ಸಮಾರಂಭದ ವೇದಿಕೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 5 ಮಂದಿ ಸಾಧಕರನ್ನು ತಾಲೂಕು ಆಡಳಿತದ ವತಿಯಿಂದ ಸನ್ಮಾನಿಸಲಾಯಿತು. ನಂತರ ಪಟ್ಟಣದ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ, ಮಾದರಿ ಬಾಲಿಕಾ ಪ್ರೌಢಶಾಲೆ ಸೇರಿದಂತೆ ವಿವಿಧ ಶಾಲಾ ಮಕ್ಕಳು ನಾಡು ನುಡಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಕಾರ್ಯಕ್ರಮಕ್ಕೂ ಮುನ್ನ ಕನ್ನಡಾಂಬೆಯ ಭಾವಚಿತ್ರವನ್ನು ಅಲಂಕರಿಸಿದ ತೆರದ ವಾಹನದಲ್ಲಿರಿಸಿ ತಾಲೂಕು ಆಡಳಿತ ಸೌಧದಿಂದ ಶ್ರೀಸೌಮ್ಯಕೇಶವಸ್ವಾಮಿ ದೇವಸ್ಥಾನದ ವರೆಗೆ ಮೆರವಣಿಗೆ ನಡೆಸಲಾಯಿತು.

ಸಮಾರಂಭದಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜೆ.ವೈ.ಮಂಜುನಾಥ್, ತಾಪಂ ಇಒ ಬಿ.ಎಸ್.ಸತೀಶ್, ಡಿವೈಎಸ್‌ಪಿ ಬಿ.ಚಲುವರಾಜು, ಪುರಸಭೆ ಮುಖ್ಯಾಧಿಕಾರಿ ವೀಣಾ, ಬಿಇಒ ಎಸ್.ಆರ್.ಲೋಕೇಶ್, ಬಿಆರ್‌ಪಿ ಕೆ.ರವೀಶ್, ಸಿಡಿಪಿಒ ಕೃಷ್ಣಮೂರ್ತಿ, ತಾಲೂಕು ಆರೋಗ್ಯಾಧಿಕಾರಿ ಡಾ.ನಾರಾಯಣ, ಪಟ್ಟಣ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಎಚ್.ಎಂ.ಶಿವಕುಮಾರ್, ಕನ್ನಡ ಸಂಘದ ಎನ್.ನಟರಾಜು ಸೇರಿದಂತೆ ಹಲವರು ಇದ್ದರು.