ಸಾರಾಂಶ
ಬೋಧಕೇತರ ನೌಕರರಿಗೂ ಯುಜಿಸಿ ವೇತನ ನೀಡಬೇಕು, ಹೊಸ ಪಿಂಚಿಣಿ ಯೋಜನೆ ರದ್ದುಪಡಿಸಿ ಹಳೆ ಪಿಂಚಣಿ ಯೋಜನೆ ಮರು ಜಾರಿಗೊಳಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರವನ್ನು ಒತ್ತಾಯಿಸಿ ಬೆಂಗಳೂರು ವಿವಿಯ ಬೋಧಕೇತರರ ಸಿಬ್ಬಂದಿ ಗುರುವಾರ ವಿವಿಯ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಬೋಧಕೇತರ ನೌಕರರಿಗೂ ಯುಜಿಸಿ ವೇತನ ನೀಡಬೇಕು, ಹೊಸ ಪಿಂಚಿಣಿ ಯೋಜನೆ ರದ್ದುಪಡಿಸಿ ಹಳೆ ಪಿಂಚಣಿ ಯೋಜನೆ ಮರು ಜಾರಿಗೊಳಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರವನ್ನು ಒತ್ತಾಯಿಸಿ ಬೆಂಗಳೂರು ವಿವಿಯ ಬೋಧಕೇತರರ ಸಿಬ್ಬಂದಿ ಗುರುವಾರ ವಿವಿಯ ಆವರಣದಲ್ಲಿ ಪ್ರತಿಭಟನೆ ನಡೆಸಿದರು.ಅಖಿಲ ಭಾರತ ವಿವಿ ಶಿಕ್ಷಕೇತರ ನೌಕರರ ಒಕ್ಕೂಟ ತಮ್ಮ ಬೇಡಿಕೆಗಳ ಈಡೇರಿಕೆಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಕರೆ ನೀಡಿದ್ದ ‘ಬೇಡಿಕೆ ದಿನಾಚರಣೆ’ ಅಂಗವಾಗಿ ಜ್ಞಾನಭಾರತಿ ಕ್ಯಾಂಪಸ್‌ನ ಆಡಳಿತ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಬೋಧಕೇತರ ನೌಕರರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದಿರುವ ಬೇಡಿಕೆ ಪತ್ರವನ್ನು ಕುಲಪತಿ ಡಾ.ಜಯಕರ ಮೂಲಕ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದರು.
ದೇಶದ ಎಲ್ಲ ವಿವಿಗಳಲ್ಲೂ ಕಾರ್ಯನಿರ್ವಹಿಸುತ್ತಿರುವ ಬೋಧಕೇತರ ನೌಕರರಿಗೂ ಬೋಧಕ ಸಿಬ್ಬಂದಿಗೆ ನೀಡುತ್ತಿರುವಂತೆ ಯುಜಿಸಿ ವೇತನ ನೀಡಬೇಕು. ದೇಶದ ಒಟ್ಟು ಜಿಡಿಪಿಯ ಶೇ.6ರಷ್ಟು ಅನುದಾನವನ್ನು ಸಾರ್ವಜನಿಕ ವಿವಿಗಳ ಅಭಿವೃದ್ಧಿಗೆ ಪ್ರತಿ ವರ್ಷ ಒದಗಿಸಬೇಕು. ನೂತನ ಪಿಂಚಣಿ ಯೋಜನೆಯು ನೌಕರ ಸ್ನೇಹಿಯಾಗಿಲ್ಲ. ಹಾಗಾಗಿ ಅದನ್ನು ರದ್ದುಪಡಿಸಿ ಹಳೆ ಪಿಂಚಣಿ ಯೋಜನೆ ಮರು ಜಾರಿಗೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು. ಸಂಘದ ಅಧ್ಯಕ್ಷ ಪಿ.ಶಿವಪ್ಪ, ಉಪಾಧ್ಯಕ್ಷ ಶಿವಣ್ಣ, ಪ್ರಧಾನ ಕಾರ್ಯದರ್ಶಿ ಯೋಗೇಶ್ ಮತ್ತಿತರ ಪದಾಧಿಕಾರಿಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.