ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ದಾಂಪತ್ಯದ ಜ್ಯೋತಿ ಬೆಳಗಳು ಪ್ರೀತಿಯೆಂಬ ತೈಲವ ಬಳಕೆ ಮಾಡುವುದು ಅಗತ್ಯವೆಂದು ಬಸವ ಮುರುಘೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿ ಭಾನುವಾರ ನಡೆದ 35ನೇ ವರ್ಷದ ಹತ್ತನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಆರು ಜೋಡಿಗಳ ವಿವಾಹ ನೆರವೇರಿಸಿ ಮಾತನಾಡಿದ ಶ್ರೀಗಳು, ಮದುವೆ ಎಂಬುದು ಕೇವಲ ವ್ಯವಹಾರಿಕವಲ್ಲ. ಎರಡು ಸಂಬಂಧಗಳನ್ನು ಒಟ್ಟುಗೂಡಿಸುವುದಾಗಿದೆ ಎಂದರು.
ಬಸವಣ್ಣನವರು ಹೇಳುವಂತೆ ಸತಿಪತಿ ಒಂದಾಗಿ ನಡೆದರೆ ಸಂಸ್ಕಾರವಂತರಾಗುತ್ತಾರೆ. ಗಂಡ-ಹೆಂಡತಿಯರು ಜ್ಞಾನದ ಜ್ಯೋತಿಯಾಗಿ ಬೆಳಗಬೇಕು. ಅದಕ್ಕೆ ಪ್ರೀತಿಯೆಂಬ ತೈಲವನ್ನು ಹಾಕಿದರೆ ಮಾತ್ರ ಬೆಳಕು ಚೆಲ್ಲುತ್ತದೆ. ಇದು ದುಬಾರಿ ಕಾಲವಾಗಿದ್ದು ಬಡವರು ಮದುವೆ ಮಾಡುವುದು ಕಷ್ಟವಾಗಿದೆ. ಹಾಗಾಗಿ ಇಂಥವರಿಗೆ ಶ್ರೀಮಠವು ಸಾಮೂಹಿಕ ಕಲ್ಯಾಣದ ಮೂಲಕ ಸಹಕಾರಿಯಾಗಿದೆ ಎಂದರು.ವಧುವರರು ತಂದೆ-ತಾಯಿಗಳೇ ಕುಲದೈವ ಎಂದು ಭಾವಿಸಬೇಕು. ಸಮಾಜದಲ್ಲಿ ಮದುವೆ ಮಾಡುವುದು ತುಂಬಾ ಕಷ್ಟ. ಶ್ರೀಮಠದಲ್ಲಿ 30ಸಾವಿರಕ್ಕು ಹೆಚ್ಚು ಸರಳ ವಿವಾಹಗಳು ನೆರವೇರಿವೆ. ನವ ವಧು-ವರರು ಬಸವಾದಿ ಪ್ರಮಥರ ಆಶಯದಂತೆ ಸತ್ಯಶುದ್ಧ ಕಾಯಕ ಮಾಡುತ್ತ ಸರಳವಾದ ಜೀವನ ಮಾಡಬೇಕು. ನಮ್ಮ ಕಾಯಕವನ್ನು ನಾವು ನಿರ್ವಹಿಸುತ್ತ ನೆಮ್ಮದಿಯನ್ನು ಕಾಣಬೇಕು. ಮರ್ಯಾದೆ, ಮಾತಿಗೆ ಅಂಜಿ ಕೆಲವರು ಸಾಲ ಮಾಡಿ ಮದುವೆ ಮಾಡಿ ಬದುಕನ್ನು ಸಾಲದ ಕೂಪಕ್ಕೆ ಈಡುಮಾಡುತ್ತಾರೆ. ಸರಳವಾಗಿ ಬದುಕುವುದು, ಸಹಜ ವರ್ತನೆ ನಿಮ್ಮೆಲ್ಲರದಾಗಿರಲಿ ಎಂದು ಹರಸಿದರು.
ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮಿಗಳು ಮಾತನಾಡಿ, ಮದುವೆ ಅಂದರೆ ಗಲಾಟೆ, ಗದ್ದಲ, ಆಡಂಬರ, ದುಂದುವೆಚ್ಚ, ವೈಭವದ ಭೋಜನಾದಿಗಳನ್ನು ಮಾಡುವುದನ್ನು ನಾವು ಕಾಣುತ್ತೇವೆ. ಆದರೆ ಮುರುಘಾಮಠದಲ್ಲಿ ನಡೆಯುವ ಸಾಮೂಹಿಕ ಕಲ್ಯಾಣ ಮಹೋತ್ಸವವು ಅತ್ಯಂತ ಸರಳವಾಗಿ, ಜಾತಿ, ವರ್ಣ, ವರ್ಗಭೇದ ರಹಿತವಾಗಿ ಒಂದೇ ವೇದಿಕೆಯಲ್ಲಿ ಅತ್ಯಂತ ಸರಳವಾಗಿ ನೆರವೇರುತ್ತಿವೆ. ಈ ಭಾಗದ ಬಡಜನರಿಗೆ ಉಪಯುಕ್ತ ಕಾರ‍್ಯಕ್ರಮವಾಗಿದೆ. ಇಲ್ಲಿ ಮದುವೆ ಮಾಡುವುದರೊಂದಿಗೆ ಸತಿ ಪತಿಗಳಾದವರು ಮುಂದಿನ ದಾಂಪತ್ಯ ಜೀವನವನ್ನು ಸಾಮಾಜಿಕ ಮೌಲ್ಯಗಳೊಟ್ಟಿಗೆ ನಡೆಸುವತ್ತ ಮಾರ್ಗದರ್ಶನವನ್ನು ಪಡೆಯುತ್ತಾರೆ ಎಂದರು.ನಿಪ್ಪಾಣಿಯ ಶ್ರೀ ಬಸವ ಮಲ್ಲಿಕಾರ್ಜುನ ಸ್ವಾಮಿಗಳು ಮಾತನಾಡಿ, ಮುರುಘಾಮಠವು ನಾಡಿನಲ್ಲಿ ತ್ರಿವಿಧ ದಾಸೋಹಕ್ಕೆ ಹೆಸರುವಾಸಿಯಾಗಿದೆ. ಮಠದಲ್ಲಿ ಅನ್ನದಾಸೋಹ ನಿರಂತರವಾಗಿ ನಡೆದಿದೆ. ಅಂತೆಯೇ ಜ್ಞಾನದಾಸೋಹ ಕೂಡಾ ಸಾರ್ವಕಾಲಿಕವಾಗಿದೆ. ಈ ರೀತಿಯ ಕಾರ್ಯಗಳ ಮೂಲಕ ಮರುಘಾಮಠ ಅರಿವನ್ನು ನೀಡುತ್ತಿದೆ. ಈ ಕಾರ್ಯಕ್ರಮದಲ್ಲಿ ವಿವಾಹವಾಗುತ್ತಿರುವ ನವಜೋಡಿಗಳ ಜೀವನ ಸುಖಕರವಾಗಿರಲಿ. ಅವರ ಮಕ್ಕಳಿಗೆ ಉತ್ತಮ ಸಂಸ್ಕಾರಗಳನ್ನು ಕೊಡಲಿ ಎಂದರು.
ಇದೇ ಸಂದರ್ಭದಲ್ಲಿ ದಾವಣಗೆರೆಯ ರಂಗಭೂಮಿ ಕಲಾವಿದೆ ಜಿ.ಉಮಾಶ್ರೀ ಅವರನ್ನು ಸನ್ಮಾನಿಸಲಾಯಿತು. ಜಮುರಾ ಕಲಾವಿದರು ಪ್ರಾರ್ಥಿಸಿದರು. ಗಿರೀಶಾಚಾರ್ ಸ್ವಾಗತಿಸಿದರು. ನಿವೃತ್ತ ಪ್ರಾಚಾರ್ಯ ಟಿ.ಪಿ. ಜ್ಞಾನಮೂರ್ತಿ ನಿರೂಪಿಸಿದರು.