ಕೋರ್ಟ್ ಅನುಮತಿಸಿದರಷ್ಟೇ ಹಳೇಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್: ಸಿದ್ದರಾಮಯ್ಯ

| Published : Oct 14 2024, 01:18 AM IST

ಕೋರ್ಟ್ ಅನುಮತಿಸಿದರಷ್ಟೇ ಹಳೇಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್: ಸಿದ್ದರಾಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ನಡೆದ ಹಳೇ ಹುಬ್ಬಳ್ಳಿ ಗಲಭೆಯ ವಿಷಯದಲ್ಲಿ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂಬ ಕಾರಣಕ್ಕೆ ಈ ಪ್ರಕರಣ ಹಿಂಪಡೆಯಲು ಸಚಿವ ಸಂಪುಟ ನಿರ್ಧರಿಸಿದೆ. ಕೋರ್ಟ್‌ ಅನುಮತಿ ನೀಡಿದರೆ ಮಾತ್ರ ಪ್ರಕರಣ ಹಿಂಪಡೆಯಲು ಸಾಧ್ಯವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಹುಬ್ಬಳ್ಳಿ: ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ನಡೆದ ಹಳೇ ಹುಬ್ಬಳ್ಳಿ ಗಲಭೆಯ ವಿಷಯದಲ್ಲಿ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂಬ ಕಾರಣಕ್ಕೆ ಈ ಪ್ರಕರಣ ಹಿಂಪಡೆಯಲು ಸಚಿವ ಸಂಪುಟ ನಿರ್ಧರಿಸಿದೆ. ಕೋರ್ಟ್‌ ಅನುಮತಿ ನೀಡಿದರೆ ಮಾತ್ರ ಪ್ರಕರಣ ಹಿಂಪಡೆಯಲು ಸಾಧ್ಯವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದ ವಿಮಾನ ನಿಲ್ದಾಣದಲ್ಲಿ ಭಾನುವಾರ ಮಾತನಾಡಿ, ಉದ್ದೇಶಪೂರ್ವಕವಾಗಿ, ಸುಳ್ಳು ಪ್ರಕರಣಗಳು, ಹೋರಾಟಗಳಿಗೆ ಸಂಬಂಧಿಸಿ ಪ್ರಕರಣಗಳನ್ನು ದಾಖಲಿಸಿದ್ದರೆ, ಅವುಗಳನ್ನು ಪರಿಶೀಲಿಸುವುದಕ್ಕಾಗಿಯೇ ಸಂಪುಟ ಉಪಸಮಿತಿ ರಚಿಸಲಾಗುತ್ತದೆ. ಇದು ಎಲ್ಲ ಸರ್ಕಾರದಲ್ಲೂ ಅಸ್ತಿತ್ವದಲ್ಲಿರುತ್ತದೆ ಎಂದರು.

ಹೊಸದೇನಲ್ಲ: ಹಳೇಹುಬ್ಬಳ್ಳಿ ಗಲಭೆ ಪ್ರಕರಣವನ್ನು ಪರಿಶೀಲಿಸಿದ ಸಮಿತಿಯು ಅದು ಸುಳ್ಳು ಪ್ರಕರಣ ಎಂದು ತಿಳಿಸಿತ್ತು. ಆ ವರದಿಯು ಸಚಿವ ಸಂಪುಟಕ್ಕೆ ಬಂದಿದ್ದು, ನಾವೆಲ್ಲರೂ ಅದನ್ನು ಒಪ್ಪಿಕೊಂಡಿದ್ದೇವೆ. ಬಿಜೆಪಿ ಆಡಳಿತವಿದ್ದಾಗಲೂ ಅನೇಕ ಅಪರೂಪದ ಪ್ರಕರಣಗಳನ್ನು ಹಿಂಪಡೆದಿತ್ತು. ಇದು ಹೊಸದೇನಲ್ಲ ಎಂದು ಸಮರ್ಥಿಸಿಕೊಂಡರು. ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿರುವ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಬಿಜೆಪಿಯು ಸುಳ್ಳು ವಿಷಯಗಳ ಮೇಲೆ ಹಾಗೂ ನಿರಾಧಾರ ಆರೋಪದ ಮೇಲೆಯೇ ಯಾವಾಗಲೂ ಪ್ರತಿಭಟಿಸುತ್ತ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜೋಶಿ ಭಯೋತ್ಪಾದಕ: ಕಾಂಗ್ರೆಸ್‌ನ್ನು ಭಯೋತ್ಪಾದಕರ ಪಕ್ಷ ಎಂದು ಕರೆದಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ಜೋಶಿನೇ ಭಯೋತ್ಪಾದಕ ಎಂದು ಉತ್ತರಿಸುವ ಮೂಲಕ ತಿರುಗೇಟು ನೀಡಿದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಸಚಿವರಾದ ರಾಮಲಿಂಗಾರೆಡ್ಡಿ, ಎಚ್‌.ಕೆ. ಪಾಟೀಲ, ಸಂತೋಷ ಲಾಡ್, ಶಾಸಕ ಎನ್‌.ಎಚ್‌. ಕೋನರಡ್ಡಿ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ, ಅಲ್ತಾಫ ಹಳ್ಳೂರ ಇದ್ದರು.