ಕನ್ನಡಪ್ರಭ ವಾರ್ತೆ ಬೆಳಗಾವಿ

ನಮ್ಮ ಸರ್ಕಾರದ ಅವಧಿಯಲ್ಲಿ ಒಟ್ಟು 10 ಸಾವಿರ ಸಿಬ್ಬಂದಿ ನೇಮಕಾತಿ ಮಾಡಿದ್ದೇವೆ. ಜೊತೆಗೆ ಶೀಘ್ರ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಕಿತ್ತೂರು ರಾಣಿ ಚನ್ನಮ್ಮ ಹೆಸರಿಡುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದರು.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ 28ನೇ ಸಂಸ್ಥಾಪನಾ ದಿನಾಚರಣೆ, ನೂತನ ಬಸ್‌ಗಳ ಲೋಕಾರ್ಪಣೆ, ಬೆಳಗಾವಿ-1ನೇ ಘಟಕದ ನವೀಕರಣ ಕಾಮಗಾರಿಗೆ ಶಂಕುಸ್ಥಾಪನೆ, ಹೊಸದಾಗಿ ನೇಮಕಾತಿ ಹೊಂದಿದ ಸಿಬ್ಬಂದಿಗೆ ಆದೇಶ ವಿತರಣೆ, ಅಪಘಾತ/ ಅಪರಾಧ ರಹಿತ ಸೇವೆ ಸಲ್ಲಿಸಿದ ಚಾಲಕ ಸಿಬ್ಬಂದಿಗೆ ಬೆಳ್ಳಿ ಪದಕ ವಿತರಣೆ ಹಾಗೂ ನೂತನ ತಂತ್ರಾಂಶಗಳ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಕಳೆದ ಬಜೆಟ್‌ನಲ್ಲಿ ಘೋಷಿಸಿದಂತೆ 2 ಸಾವಿರ ಹೊಸ ಬಸ್‌ಗಳ ಖರೀದಿ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ವಾ.ಕ.ರ.ಸಾ. ಸಂಸ್ಥೆಗೆ 700 ವಾಹನಗಳ ಪೈಕಿ ಶನಿವಾರ 250 ಬಸ್‌ಗಳನ್ನು ಲೋಕಾರ್ಪಣೆ ಮಾಡಲಾಗಿದೆ ಎಂದರು.

ಅಂದಾಜು ₹ 8 ಕೋಟಿ ವೆಚ್ಚದಲ್ಲಿ 14 ಹವಾನಿಯಂತ್ರಿತ ಸ್ಲೀಪರ್ ಕೋಚ್ ಹಾಗೂ ಅಂದಾಜು ₹4 ಕೋಟಿ ವೆಚ್ಚದಲ್ಲಿ 10 ಸ್ಲೀಪರ್ ಕೋಚ್ ಸೇರಿ ಒಟ್ಟು 24 ವಾಹನಗಳ ಖರೀದಿ ಪ್ರಕ್ರಿಯೆ ಜಾರಿಯಲ್ಲಿದೆ. ಪ್ರಸ್ತುತ 136 ಬಸ್‌ಗಳು ಬೆಳಗಾವಿಗೆ ನಗರಕ್ಕೆ ನೀಡಲಾಗಿದೆ. ಈ ವರ್ಷ ಮತ್ತೆ 86 ಬಸ್‌ ಕೊಡುತ್ತೇವೆ. ಅವಶ್ಯವಿದ್ದಲ್ಲಿ ಬಸ್‌ಗಳನ್ನು ಬಿಡಲು ಸೂಚಿಸುತ್ತೇನೆ. ಕಿತ್ತೂರು ಡಿಪೋವನ್ನು ಶೀಘ್ರವೇ ಉದ್ಘಾಟಿಸಲಾಗುತ್ತದೆ. ಪಕ್ಷಾತೀತವಾಗಿ ಕೆಲಸ ಮಾಡುತ್ತೇವೆ. ಕಿತ್ತೂರು ಕರ್ನಾಟಕ ಭಾಗಕ್ಕೆ ಹೆಚ್ಚು ಬಸ್‌ ನೀಡಿದ್ದೇನೆ. ಅನುಕಂಪ ಆಧಾರ ಸೇರಿ ಒಟ್ಟು 10 ಸಾವಿರ ನೇಮಕಾತಿ ನನ್ನ ಅವಧಿಯಲ್ಲೇ ಮಾಡಿದ್ದೇನೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಕಿತ್ತೂರು ರಾಣಿ ಚನ್ನಮ್ಮ ಹೆಸರು ಇಡಬೇಕೆಂದು ಮನವಿ ಬಂದಿದೆ. ಮಂಡಳಿಯಿಂದ ಪ್ರಸ್ತಾವನೆ ಬಂದಿದೆ. ಆದಷ್ಟು ಬೇಗ ಮರುನಾಮಕರಣ ಮಾಡುವ ಬಗ್ಗೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗುತ್ತದೆ. ಕಾರ್ಯನಿರ್ವಹಣೆ ಅವಧಿಯಲ್ಲಿ ಮೃತಪಟ್ಟ ಸಾರಿಗೆ ನೌಕರರಿಗೆ ಒಂದು ಕೋಟಿ ಪರಿಹಾರ ಮೊತ್ತ ನೀಡುತ್ತಿರುವುದು ಸಂಸ್ಥೆಯ ಹೆಗ್ಗಳಿಕೆಯಾಗಿದೆ ಎಂದು ಸಚಿವರು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ನಮ್ಮ ಭಾಗಕ್ಕೆ ಹೊಸ ಬಸ್‌ಗಳು ಬೇಕೆಂದು ಸಾಕಷ್ಟು ಬಾರಿ ಮನವಿ ಮಾಡಿದ್ದೇವು. ಅದಕ್ಕನುಗುಣವಾಗಿ ರಾಮಲಿಂಗಾರೆಡ್ಡಿ ಅವರು 250 ಬಸ್‌ ನೀಡಿದ್ದಾರೆ. ಬಹುದಿನಗಳ ಕನಸು ನೆರವೇರಿಸಿದ್ದಕ್ಕೆ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಇನ್ನೂ ಹೆಚ್ಚಿನ ಬಸ್‌ಗಳ ಅವಶ್ಯಕತೆಯಿದೆ. ಈಗ ಮತ್ತೆ 800 ಬಸ್ ಖರೀದಿ, 9 ಸಾವಿರ ಸಿಬ್ಬಂದಿ ನೇಮಕಾತಿ ಮಾಡಿರುವುದು ದಾಖಲೆಯೇ. ಆದರೆ, ಹಿಂದಿನ ಸರ್ಕಾರದಲ್ಲಿ ಒಂದೇ ಒಂದು ಬಸ್ ಖರೀದಿ ಮಾಡಲಿಲ್ಲ. ಈವಾಗೂ ಸಾರಿಗೆ ಸಂಸ್ಥೆ ಅನೇಕ ಸಮಸ್ಯೆ ಎದುರಿಸುತ್ತಿದೆ. ಅದಕ್ಕೂ ರಾಮಲಿಂಗಾರೆಡ್ಡಿ ಕಾಯಕಲ್ಪ ನೀಡುವ ಕೆಲಸ ಮಾಡುವ ವಿಶ್ವಾಸವಿದೆ ಎಂದರು.


ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಸಾರಿಗೆ ಸಂಸ್ಥೆಯ ಸಿಬ್ಬಂದಿ ಬಿಸಿಲು, ಮಳೆ ಲೆಕ್ಕಿಸದೇ ಸಲ್ಲಿಸುತ್ತಿರುವುದು ದೇವರ ಸೇವೆ. ಹಗಲು ರಾತ್ರಿ ತಾವು ಶ್ರಮಿಸುತ್ತಿದ್ದೀರಿ. ಸುರಕ್ಷಿತವಾಗಿ ಪ್ರಯಾಣಿಕರನ್ನು ತಲುಪಿಸುತ್ತಿದ್ದಾರೆ. ಧಾರವಾಡದಲ್ಲಿ ಯುವಕರ ದಿಕ್ಕು ತಪ್ಪಿಸಲು, ರಾಜಕಾರಣ ಮಾಡಲು ಹೋಗಿ ಬಿಜೆಪಿಯವರು ಮುಖಕ್ಕೆ ಮಂಗಳಾರತಿ ಮಾಡಿಸಿಕೊಂಡಿದ್ದಾರೆ. ಅವರ ಅಧಿಕಾರದಲ್ಲಿ ಒಂದು ಬಸ್‌ ಖರೀದಿಸಲಿಲ್ಲ. ಒಬ್ಬರಿಗೆ ನೌಕರಿ ನೀಡಿಲ್ಲ. ಈಗ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ನಮ್ಮ ಸರ್ಕಾರ 7800 ಹೊಸ ಬಸ್‌ ಖರೀದಿಸಿದೆ. ಗ್ಯಾರಂಟಿ ಯೋಜನೆಗಳನ್ನು ಕೊಟ್ಟು, ಸಾರಿಗೆ ಸಂಸ್ಥೆಗೆ 7800 ಬಸ್‌ಗಳನ್ನು ಕೊಟ್ಟಿದ್ದೇವೆ. ಈ ಸಂಸ್ಥೆಗೆ ರಾಣಿ ಚನ್ನಮ್ಮನ ಹೆಸರಿಡುವ ಬಗ್ಗೆ ರಾಮಲಿಂಗಾರೆಡ್ಡಿ ಅವರು ಘೋಷಣೆ ಮಾಡಬೇಕೆಂದು ಮನವಿ ಮಾಡಿದರು.

ಇದೇ ವೇಳೆ ಅಪಘಾತ ರಹಿತ 68 ಚಾಲಕರಿಗೆ ಬೆಳ್ಳಿ‌ ಪದಕ, 1 ಸಾವಿರ ಸಿಬ್ಬಂದಿಗೆ ನೇಮಕಾತಿ ಪತ್ರ ಹಾಗೂ ಅಪಘಾತ, ಗುಂಪು ಜೀವ ವಿಮಾ, ಕುಟುಂಬ ಕಲ್ಯಾಣ ನಿಧಿ ಯೋಜನೆಯ ಪರಿಹಾರ ಚೆಕ್‌‌ ಫಲಾನುಭವಿಗಳಿಗೆ ವಿತರಿಸಲಾಯಿತು. ಈ ವೇಳೆ ಸಂಸ್ಥೆಯ ಅಧ್ಯಕ್ಷ ರಾಜು ಕಾಗೆ, ಶಾಸಕರಾದ ಬಾಬಾಸಾಹೇಬ ಪಾಟೀಲ, ವಿಠಲ್ ಹಲಗೇಕರ, ಸಂಸ್ಥೆಯ ಉಪಾಧ್ಯಕ್ಷ ಸುನೀಲ ಹಣಮನ್ನವರ, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಜಿಲ್ಲಾ‌ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ವಿನಯ್​ ನಾವಲಗಟ್ಟಿ, ಪೊಲೀಸ್ ಆಯುಕ್ತ ಭೂಷಣ ಬೊರಸೆ, ಎಸ್ಪಿ ಕೆ.ರಾಮರಾಜನ್, ಜಿಪಂ ಸಿಇಒ ರಾಹುಲ್ ಶಿಂಧೆ, ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ.ಎಂ ಸೇರಿದಂತೆ ಹಿರಿಯ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

-----

ಕೋಟ್‌

ಬೆಳಗಾವಿ ಒಂದನೇ ಘಟಕದ ನವೀಕರಣಕ್ಕೆ ಅಂದಾಜು ₹ 1 ಕೋಟಿ ಕಾಮಗಾರಿಗೆ ಶನಿವಾರ ಶಂಕು ಸ್ಥಾಪನೆ ನೇರವೇರಿಸಲಾಗಿದೆ. ಪಿಎಂ ಇ-ಬಸ್‌ ಸೇವಾ ಯೋಜನೆ ಅಡಿ ಬೆಳಗಾವಿ ನಗರಕ್ಕೆ 100 ವಿದ್ಯುತ್‌ ಚಾಲಿತ ವಾಹನಗಳು ಮಂಜೂರಾಗಿದ್ದು, ಕೇಂದ್ರ ಸರ್ಕಾರ ಟೆಂಡರ್‌ ಕರೆಯಬೇಕಿದೆ. ಸಂಸ್ಥೆಯ ಆಂತರಿಕ ಸಂಪನ್ಮೂಲದಿಂದ ₹ 5 ಕೋಟಿ ವೆಚ್ಚದಲ್ಲಿ 11 ನಗರ ಸಾರಿಗೆ ಹೊಸ ವಾಹನಗಳನ್ನು ಖರೀದಿಸಿ ಸಾರ್ವಜನಿಕ ಪ್ರಯಾಣಕ್ಕಾಗಿ ಬಳಕೆ ಮಾಡಲಾಗುತ್ತದೆ.

ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ

---------

ಬಾಕ್ಸ್

ಬೆಳಗಾವಿ ದತ್ತುಪುತ್ರನಂತಾಗಿದೆ: ಸೇಠ್‌ ಅಸಮಾಧಾನ

ಕಾರ್ಯಕ್ರಮದಲ್ಲಿ ಬೆಳಗಾವಿ ಉತ್ತರ ಶಾಸಕ ಆಸೀಫ್ ಸೇಠ್ ಮಾತನಾಡಿ, ಆರು ತಿಂಗಳ ಹಿಂದೆಯೇ 100 ವಿದ್ಯುತ್ ಚಾಲಿತ ಬಸ್ ಬರುತ್ತವೆ ಎಂದಿದ್ದರು. ಆದರೆ ಈವರೆಗೂ ಬಸ್ ಬಂದಿಲ್ಲ. ಬೆಳಗಾವಿಯನ್ನು ಎಲ್ಲರೂ ಎರಡನೇ ರಾಜಧಾನಿ ಎನ್ನುತ್ತಾರೆ. ಆದರೆ, ವಾಸ್ತವದಲ್ಲಿ ನಮ್ಮ ಸಿಟಿಯನ್ನು ದತ್ತು ಪುತ್ರನಂತೆ ನೋಡುತ್ತಿದ್ದಾರೆ. ಸಿಟಿಗೆ ಏನು ಅವಶ್ಯಕತೆಯಿದೆ. ನಗರದ ಅಭಿವೃದ್ಧಿ ಅವಶ್ಯಕತೆಯಂತೆ ಸಚಿವರು ಕೆಲಸ ಮಾಡುತ್ತಿಲ್ಲ. ಸಿಎಂ, ಡಿಸಿಎಂ ದಕ್ಷಿಣ ಕರ್ನಾಟಕದವರು. ಕಂದಾಯ, ಅಲ್ಪಸಂಖ್ಯಾತ, ಆರೋಗ್ಯ, ಸಮಾಜ ಕಲ್ಯಾಣ, ಗೃಹ ಇಲಾಖೆ ಸೇರಿ ಪ್ರಮುಖ ಖಾತೆಗಳ ಸಚಿವರು ಬೆಂಗಳೂರು ಮತ್ತು ದಕ್ಷಿಣ ಕರ್ನಾಟಕ ಭಾಗದವರು. ರಾಮಲಿಂಗಾರೆಡ್ಡಿ ಅವರನ್ನು ಹೊರತುಪಡಿಸಿ ಬಹುತೇಕ ಶಾಸಕರು ಕಿತ್ತೂರು ಕರ್ನಾಟಕ ಮತ್ತು ಬೆಳಗಾವಿಯನ್ನು ಮರೆತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಬೆಳಗಾವಿ ಅಭಿವೃದ್ಧಿಗೆ ಅವಶ್ಯವಿರುವ ಸೌಲಭ್ಯಗಳನ್ನು ನೀಡದಿದ್ದರೇ, ಅನಿವಾರ್ಯವಾಗಿ ಹೋರಾಟ ಮಾಡಬೇಕಾಗುತ್ತದೆ. ಸಿಎಂ ಅರ್ಹತೆಯಿರುವ ಸತೀಶ ಜಾರಕಿಹೊಳಿ‌, ಡಿಸಿಎಂ ಸ್ಥಾನಕ್ಕೆ ಅರ್ಹತೆಯಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ನಾನು ವಿನಂತಿ ಮಾಡುತ್ತೇನೆ ಎಂದು ಆಸೀಫ್ ಸೇಠ್ ಹೇಳಿದರು