ಕನ್ನಡಪ್ರಭ ವಾರ್ತೆ ಬೆಳಗಾವಿ
ಇಂದು ನಾವೆಲ್ಲ ಜಾತಿ ಮುಕ್ತ ಭಾರತವನ್ನು ಕಟ್ಟಬೇಕಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಬಸವಣ್ಣನವರ ಕನಸು ಕೂಡ ಅದೇ ಆಗಿತ್ತು. ಅಂತಹ ಮಹನೀಯರ ವಿಚಾರಧಾರೆಗಳು, ನೈತಿಕ ತತ್ವಗಳು ಇಂದು ಪ್ರತಿ ಮನೆಮನೆಗೂ ಮುಟ್ಟಬೇಕು. ಈ ನಿಟ್ಟಿನಲ್ಲಿ ವಿಚಾರ ಸಂಕೀರಣಗಳು ಸಹಕಾರಿಯಾಗುತ್ತವೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಹೇಳಿದರು.ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಪೀಠ ಹಾಗೂ ಸಮಾಜ ಕಾರ್ಯ ವಿಭಾಗ ಮತ್ತು ಸಮಾಜ ಕಲ್ಯಾಣ ಇಲಾಖೆಯ ಡಾ.ಬಿ.ಆರ್.ಅಂಬೇಡ್ಕರ್ ತರಬೇತಿ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಡಾ.ಬಿ.ಎಸ್.ಜಿರಗೆ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ ವಿವೇಚನೆ, ವೈಚಾರಿಕತೆ ಮತ್ತು ಗಣರಾಜ್ಯ: ಡಾ.ಬಿ.ಆರ್.ಅಂಬೇಡ್ಕರ ಸಮಾರೋಪದಲ್ಲಿ ಅವರು ಮಾತನಾಡಿದರು. ಸಮಾಜದ ಒಳಿತಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು, ತಾರತಮ್ಯ ಹೋಗಲಾಡಿಸಲು ಶ್ರಮಿಸಿದ ಮಹನೀಯರನ್ನು ಪರಿಚಯಿಸುವ ಕಠಿಣ ಕಾಲ ಇಂದು ಎದುರಾಗಿದೆ. ಹೀಗಾಗಿ, ನಾವೆಲ್ಲರೂ ಒಂದೇ ಎಂಬ ಸಂದೇಶವನ್ನು ಪ್ರಾಥಮಿಕ ಮತ್ತು ಪ್ರೌಢ ಶಾಲಾ ಹಂತದಲ್ಲಿಯೇ ಮಕ್ಕಳಲ್ಲಿ ಬಿತ್ತಬೇಕು.
ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ತಿಳಿದುಕೊಳ್ಳುವ ಕೂತಹಲ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಇರುತ್ತದೆ. ಅವರ ಕುತೂಹಲ ಮತ್ತು ಉತ್ಸಾಹವನ್ನು ಹೆಚ್ಚಿಸಲು ಇಂತಹ ವಿಶೇಷ ಕಾರ್ಯಕ್ರಮಗಳು ರಾಜ್ಯದ ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲಿ ಪ್ರತಿವರ್ಷ ಜರುಗಬೇಕು ಎಂದು ಸಲಹೆ ನೀಡಿದರು.ಕನ್ನಡ ಪ್ರಾಧ್ಯಾಪಕ ಡಾ.ರಾಜಪ್ಪ ದಳವಾಯಿ ಮಾತನಾಡಿ, ವೈಚಾರಿಕ ತಳಹದಿಯಲ್ಲಿ ರಚನೆಗೊಂಡ ಸಂವಿಧಾನ ಪ್ರಜ್ಞೆಯ ದ್ಯೋತಕವಾಗಿದೆ. ನಾವು ಜಾತಿ ಚೌಕಟ್ಟನ್ನು ಮೀರಿ ಬೆಳೆಯಬೇಕು. ಪ್ರಗತಿ ಎಂಬುದು ಕೇವಲ ಕಟ್ಟಡ, ಸೇತುವೆ, ಜಲಾಶಯಗಳ ನಿರ್ಮಾಣಕ್ಕೆ ಸೀಮಿತಗೊಳ್ಳದೆ ಜನರಲ್ಲಿ ಪ್ರಜ್ಞೆಯನ್ನು ವಿಸ್ತರಿಸುವ ಸಂಗಾತಿಯಾಗಬೇಕು. ಸಂವಿಧಾನ ಉಳಿದರೆ ಮಾತ್ರ ನಮ್ಮೆಲ್ಲರ ಅಭಿವ್ಯಕ್ತಿ ಸ್ವಾತಂತ್ಯ ಉಳಿಯುತ್ತದೆ ಎಂದು ಹೇಳಿದರು. ಮೈಸೂರು ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ತರಬೇತಿ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಪ್ರಾಧ್ಯಾಪಕ ಪ್ರೊ.ಜೆ.ಸೋಮಶೇಖರ ಮಾತನಾಡಿ, ಸದ್ಯದ ಕಾಲಘಟ್ಟಕ್ಕೆ ಜ್ಞಾನ ತುಂಬಿದ ಸಮಾಜವನ್ನು ನಿರ್ಮಿಸುವ ಅವಶ್ಯಕತೆಯಿದೆ. ಬಸವಣ್ಣನವರು ಬಿತ್ತಿದ ಕಾಯಕದ ಬೀಜವನ್ನ, ವೈಚಾರಿಕತೆಯ ನೆಲೆಯಲ್ಲಿ ವಿಸ್ತರಿಸುವ ಪ್ರಯತ್ನವನ್ನು ಮಂತ್ರಿಗಳು ಮಾಡುತ್ತಿದ್ದಾರೆ. ನಮ್ಮ ದೇಶದ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಮತ್ತಷ್ಟು ವಿಸ್ತರಿಸುವ ಕೆಲಸವನ್ನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಇಂತಹ ಕಾರ್ಯಕ್ರಮಗಳ ಮೂಲಕ ಮಾಡುತ್ತಿದೆ ಎಂದರು.
ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ ಪ್ರಾಸ್ತಾವಿಕವಾಗಿ ಮಾತನಾಡಿ, ವಿಶ್ವವಿದ್ಯಾಲಯಕ್ಕೆ ಬೇಕಾದ ಸವಲತ್ತುಗಳನ್ನು ನೀಡಲು ಸಚಿವರು ಮುಂಚೂಣಿಯಲ್ಲಿರುತ್ತಾರೆ. ಅವರ ಕೊಡುಗೆಗಳಿಂದ ವಿದ್ಯಾರ್ಥಿಗಳು ಮತ್ತಷ್ಟು ಶಕ್ತಿಯುತರಾಗುತ್ತಾರೆ. ಹಿರೇಬಾಗೇವಾಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಕ್ಯಾಂಪಸ್ ಗೆ ಸುಮಾರು ₹ 9.80 ಕೋಟಿ ಅನುದಾನ ನೀಡಿದ್ದಾರೆಎಂದರು.ಈ ವೇಳೆ ಬೆಳಗಾವಿ ಉತ್ತರ ಶಾಸಕ ಆಸೀಫ್ ಸೇಠ್, ರಸ್ತೆ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ಸುನೀಲ್ ಹನುಮಣ್ಣವರ್, ಬೂಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಮೌಲ್ಯಮಾಪನ ಕುಲಸಚಿವ ಪ್ರೊ.ಡಿ.ಎನ್.ಪಾಟೀಲ್, ಹಣಕಾಸು ಅಧಿಕಾರಿ ಎಂ.ಎ.ಸಪ್ನಾ, ಡಾ.ಬಿ.ಆರ್.ಅಂಬೇಡ್ಕರ್ ಪೀಠದ ನಿರ್ದೇಶಕ ಪ್ರೊ.ಅಶೋಕ್ ಡಿಸೋಜಾ ಸೇರಿ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾದ್ಯಾಪಕರು , ಸಂಶೋಧನಾ ವಿದ್ಯಾರ್ಥಿಗಳು,ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕುಲಸಚಿವ ಸಂತೋಷ್ ಕಾಮಗೌಡ ವಂದಿಸಿದರು.