ಹರಿಹರ ನಗರ ಸರ್ಕಾರಿ ಆಸ್ಪತ್ರೆ ದುಸ್ಥಿತಿ ಹೊಸ ರೋಗ ಹಬ್ಬಿಸುವಂತಿದೆ: ಸಿಇಒ

| Published : Apr 18 2025, 12:38 AM IST

ಹರಿಹರ ನಗರ ಸರ್ಕಾರಿ ಆಸ್ಪತ್ರೆ ದುಸ್ಥಿತಿ ಹೊಸ ರೋಗ ಹಬ್ಬಿಸುವಂತಿದೆ: ಸಿಇಒ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರಿ ಆಸ್ಪತ್ರೆ ವ್ಯವಸ್ಥೆ ನೋಡಿದರೆ ರೋಗ ವಾಸಿಯಾಗುವ ಬದಲು, ಹೊಸ ರೋಗ ಹಚ್ಚಿಕೊಳ್ಳುವಂಥ ಪರಿಸ್ಥಿತಿ ಇದೆ ಎಂದು ಪ್ರಭಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ್ ಬಿ. ಇಟ್ನಾಳ್ ಕಿಡಿಕಾರಿದ್ದಾರೆ.

- ಆಸ್ಪತ್ರೆಯಲ್ಲಿನ ಸಮಸ್ಯೆಗಳನ್ನು ತೆರೆದಿಟ್ಟ ಸಾರ್ವಜನಿಕರು

- - -

ಹರಿಹರ: ಸರ್ಕಾರಿ ಆಸ್ಪತ್ರೆ ವ್ಯವಸ್ಥೆ ನೋಡಿದರೆ ರೋಗ ವಾಸಿಯಾಗುವ ಬದಲು, ಹೊಸ ರೋಗ ಹಚ್ಚಿಕೊಳ್ಳುವಂಥ ಪರಿಸ್ಥಿತಿ ಇದೆ ಎಂದು ಪ್ರಭಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ್ ಬಿ. ಇಟ್ನಾಳ್ ಕಿಡಿಕಾರಿದರು.

ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಗುರುವಾರ ದಿಢೀರ್ ಭೇಟಿ ನೀಡಿ ತುರ್ತು ಚಿಕಿತ್ಸಾ ವಿಭಾಗದ ಬೆಡ್‌ಗಳ ಮೇಲಿರುವ ಗಲೀಜಾದ ಹೊದಿಕೆಗಳನ್ನು ಗಮನಿಸಿದರು. ಈ ಆಸ್ಪತ್ರೆಗೆ ಬರುವ ಜನರು ರೋಗ ನಿವಾರಣೆ ಮಾಡಿಕೊಳ್ಳುವುದಕ್ಕಿಂತ ರೋಗ ಹಚ್ಚಿಕೊಂಡು ಹೋಗುವಂತಿದೆ ವ್ಯವಸ್ಥೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ರೋಗಿಗಳ ಚೀಟಿಗೆ ಎಕ್ಸ್‌ರೇ ತೆಗೆಯಲು, ರಕ್ತ ಪರೀಕ್ಷೆಗೆ ಪಡೆಯುವ ದರಗಳನ್ನು ಸಾರ್ವಜನಿಕರಿಗೆ ಕಾಣುವಂತೆ ಬೋರ್ಡ್‌ ಹಾಕಬೇಕು. ಎಕ್ಸ್‌ರೇ ವಿಭಾಗ ಜನೌಷಧಿ ಕೇಂದ್ರ, ರಕ್ತ ಪರೀಕ್ಷಾ ಕೇಂದ್ರಕ್ಕೆ ತೆರಳಿ ಅಲ್ಲಿ ಖಾಸಗಿ ಏಜೆನ್ಸಿಯಿಂದ ನೇಮಕವಾದ ಕಾರ್ಯನಿರ್ವಾಹಕ ಸಿಬ್ಬಂದಿಗೆ ಏಜೆನ್ಸಿಯಿಂದ ಪ್ರತಿ ತಿಂಗಳು ವೇತನ ಹಾಗೂ ಬರುವ ರೋಗಿಗಳಿಗೆ ಸರಿಯಾಗಿ ರಕ್ತ ಪರೀಕ್ಷೆ ಮಾಡಲಾಗುತ್ತಿದೆ ಎಂಬ ಮಾಹಿತಿ ಪಡೆದರು.

ಈ ವೇಳೆ ಹಲವು ಸಾರ್ವಜನಿಕರು ಆಸ್ಪತ್ರೆಯಲ್ಲಿನ ಹಲವಾರು ಸಮಸ್ಯೆಗಳನ್ನು ತೆರೆದಿಟ್ಟರು. ವೈದ್ಯರು ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ, ವೈದ್ಯರು ಬರೆದುಕೊಡುವ ಔಷಧಿ ಸರ್ಕಾರಿ ಆಸ್ಪತ್ರೆಯಲ್ಲೇ ಇರುವುದಿಲ್ಲ. ಇದರ ಬಗ್ಗೆ ಗಮನಿಸಬೇಕೆಂದು ಮನವಿ ಮಾಡಿದರು.

ಅನಂತರ ಅಪರ ಡಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಹರಿಹರ ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆಯಿಂದ ಕೂಡಿದೆ. ಇದನ್ನು ಸರಿಪಡಿಸಲು ಆಸ್ಪತ್ರೆ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಮತ್ತೊಮ್ಮೆ ಭೇಟಿ ನೀಡಿ ಪ್ರತಿ ವಾರ್ಡ್‌ ಪರಿಶೀಲನೆ ಮಾಡುತ್ತೇನೆ ಎಂದರು.

ಆಸ್ಪತ್ರೆಗೆ ಭೇಟಿ ನೀಡುವ ಮುನ್ನ ಆಸ್ಪತ್ರೆ ಹಿಂಭಾಗ ನಿರ್ಮಾಣ ಆಗುತ್ತಿರುವ ಹೆರಿಗೆ ಆಸ್ಪತ್ರೆ ಕಟ್ಟಡವನ್ನು ಸಿಇಒ ಪರಿಶೀಲಿಸಿದರು. ಆಸ್ಪತ್ರೆಯ ವೈದ್ಯಾಧಿಕಾರಿ ಹನುಮಾ ನಾಯ್ಕ್, ಸೇರಿದಂತೆ ವಿವಿಧ ಅಧಿಕಾರಿಗಳು ಇದ್ದರು.

- - -

-೧೭ಎಚ್‌ಆರ್‌ಆರ್೦೨:

ಹರಿಹರದಲ್ಲಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಪ್ರಭಾರ ಜಿಲ್ಲಾಧಿಕಾರಿ, ಜಿಪಂ ಸಿಇಒ ಸುರೇಶ್ ಬಿ. ಇಟ್ನಾಳ್ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.