ನರೇಗಾ ಯೋಜನೆಯು ಗ್ರಾಮೀಣ ಜನರ ಬದುಕಿಗೆ ಆಶಾದಾಯಕ

| Published : Apr 18 2025, 12:38 AM IST

ನರೇಗಾ ಯೋಜನೆಯು ಗ್ರಾಮೀಣ ಜನರ ಬದುಕಿಗೆ ಆಶಾದಾಯಕ
Share this Article
  • FB
  • TW
  • Linkdin
  • Email

ಸಾರಾಂಶ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಪರಿಣಾಮಕಾರಿ ಅನುಷ್ಟಾನದ ಕುರಿತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮ ಬಿ.ಆರ್. ಅಧ್ಯಕ್ಷತೆಯಲ್ಲಿ ಜಿಲ್ಲಾ, ತಾಲೂಕು, ಗ್ರಾಮ ಪಂಚಾಯಿತಿ ಮಟ್ಟದ ಎಲ್ಲಾ ಅನುಷ್ಟಾನಾಧಿಕಾರಿಗಳು ಹಾಗೂ ತಾಂತ್ರಿಕ ಸಿಬ್ಬಂದಿಗೆ ಬುಧವಾರ ನಗರದ ಹಾಸನಾಂಬ ಕಲಾಭವನದಲ್ಲಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭ ವಾರ್ತೆ ಹಾಸನ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಪರಿಣಾಮಕಾರಿ ಅನುಷ್ಟಾನದ ಕುರಿತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮ ಬಿ.ಆರ್. ಅಧ್ಯಕ್ಷತೆಯಲ್ಲಿ ಜಿಲ್ಲಾ, ತಾಲೂಕು, ಗ್ರಾಮ ಪಂಚಾಯಿತಿ ಮಟ್ಟದ ಎಲ್ಲಾ ಅನುಷ್ಟಾನಾಧಿಕಾರಿಗಳು ಹಾಗೂ ತಾಂತ್ರಿಕ ಸಿಬ್ಬಂದಿಗೆ ಬುಧವಾರ ನಗರದ ಹಾಸನಾಂಬ ಕಲಾಭವನದಲ್ಲಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿದ್ದ ಪೂರ್ಣಿಮ ಬಿ.ಆರ್. ರವರು ಮಾತನಾಡಿ ನರೇಗಾ ಯೋಜನೆಯು ಗ್ರಾಮೀಣ ಜನರ ಬದುಕಿಗೆ ಆಶಾದಾಯಕವಾಗಿದೆ. ರೈತರು ಕೃಷಿ, ತೋಟಗಾರಿಕೆ, ಅರಣ್ಯ, ರೇಷ್ಮೆ ಇಲಾಖೆಗಳಡಿ ಹಲವಾರು ವೈಯಕ್ತಿಕ ಕಾಮಗಾರಿಗಳಾದ ಕೃಷಿಹೊಂಡ, ಬದು ನಿರ್ಮಾಣ, ತೋಟಗಾರಿಕಾ ಸಸಿಗಳನ್ನ ನೆಡುವುದು, ಹಣ್ಣಿನ ಗಿಡಗಳ ನಾಟಿ ಮುಂತಾದವುಗಳ ಮೂಲಕ ಕಾಮಗಾರಿಗಳನ್ನು ಅನುಷ್ಠಾನ ಮಾಡಿ ಆರ್ಥಿಕ ಸಹಾಯ ಪಡೆಯಬಹುದಾಗಿದೆ. ಸಮುದಾಯ ಕಾಮಗಾರಿಗಳಾದ ಕೆರೆಕಟ್ಟೆಗಳ ಅಭಿವೃದ್ದಿ, ರಸ್ತೆ ನಿರ್ಮಾಣ, ಗ್ರಾಮಗಳಲ್ಲಿ ಶುಚಿತ್ವ ಕಾಪಾಡಲು ವ್ಯವಸ್ತಿತ ಚರಂಡಿ ನಿರ್ಮಾಣ, ಸೋಕ್ ಪಿಟ್ ನಿರ್ಮಾಣ, ಶಾಲಾ ಅಭಿವೃದ್ದಿ ಕಾಮಗಾರಿಗಳು ಮುಂತಾದ ಗ್ರಾಮೀಣ ಮೂಲಭೂತ ಸೌಲಭ್ಯ ಕಾಮಗಾರಿಗಳನ್ನು ಅನುಷ್ಟಾನ ಮಾಡುವ ಮೂಲಕ ದೀರ್ಘ ಕಾಲ ಬಾಳಿಕೆ ಬರುವ ಆಸ್ತಿಗಳನ್ನು ಸೃಜನೆ ಮಾಡಬಹುದು ಎಂದು ತಿಳಿಸಿದರು. ಪ್ರಸಕ್ತ ಸಾಲಿನಲ್ಲಿ ನೀಡಿರುವ ಗುರಿಯನ್ನು ಸಾಧಿಸಿ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಸಲಹೆ ಸೂಚನೆ ನೀಡಿದರು.

ಕಾರ್ಯಕ್ರಮದಲ್ಲಿ ಉಪಸ್ತಿತರಿದ್ದ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶ್ರೀ ಕೃಷ್ಣಮೂರ್ತಿ, ನರೇಗಾ ಯೋಜನೆಯ ಪರಿಣಾಮಕಾರಿ ಅನುಷ್ಠಾನ ಮಾಡುವ ಬಗ್ಗೆ ತೆಗೆದುಕೊಳ್ಳಬೇಕಾದ ಕ್ರಮಗಳು, ಕಾಮಗಾರಿ ಅನುಷ್ಠಾನದಲ್ಲಿ ಕಂಡುಬರುತ್ತಿರುವ ಲೋಪದೋಷಗಳು, ಸಾಮಾಜಿಕ ಲೆಕ್ಕ ಪರಿಶೋಧನೆ ಹಾಗೂ ತೀರುವಳಿ ಬಗ್ಗೆ ಸವಿವರವಾಗಿ ವಿವರಿಸುತ್ತಾ ಎಲ್ಲಾ ಅನುಷ್ಠಾನಾಧಿಕಾರಿಗಳು ಹಾಗೂ ಸಿಬ್ಬಂದಿ ಕಡ್ಡಾಯವಾಗಿ ನರೇಗಾ ಮಾರ್ಗಸೂಚಿಯಂತೆ ಕಾಮಗಾರಿಗಳನ್ನು ಅನುಷ್ಠಾನ ಮಾಡಲು ತಿಳಿಸಿದರು.

ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ತಫ್‌ಜುಲ್ ಹುಸೇನ್ ಅವರು ಮಾತನಾಡಿ, ನರೇಗಾ ಕಾಮಗಾರಿಗಳ ಅನುಷ್ಠಾನದಲ್ಲಿ ಸಾಮಗ್ರಿ ಖರೀದಿಗೆ ಸಂಬಂಧಿಸಿದಂತೆ ಟೆಂಡರ್‌, ಕೊಟೇಶನ್ ಕರೆಯುವುದು, ತೆರಿಗೆ ಕಟಾವು ಮಾಡುವುದು, ಅಡ್ಯಾಕ್ ಮೀಟಿಂಗ್, ಮುಂತಾದ ಲೆಕ್ಕ ಶಾಖೆಗೆ ಸಂಬಂಧಿಸಿದ ವಿಷಯಗಳನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅನುಷ್ಠಾಧಿಕಾರಿಗಳು, ಕಾರ್ಯ ನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ತಾಂತ್ರಿಕ ಸಿಬ್ಬಂದಿ ಹಾಗೂ ಜಿಲ್ಲಾ ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.