ಕನ್ನಡಪ್ರಭ ವಾರ್ತೆ ಮಡಿಕೇರಿ
ಕಲಿಕೆ ಮತ್ತು ಸಾಮಾಜಿಕ ಚಿಂತನೆಯನ್ನು ಸಮಾನವಾಗಿ ಕಾಣುವಂತಾಗಬೇಕು ಎಂದು ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಮುಖ್ಯಸ್ಥರಾದ ಪೂಜಾ ಸಜೇಶ್ ಹೇಳಿದರು.ಕೊಡಗು ವಿಶ್ವವಿದ್ಯಾಲಯ, ರಾಷ್ಟ್ರೀಯ ಸೇವಾ ಯೋಜನೆ ಘಟಕ ಸೈಂಟ್ ಆ್ಯನ್ಸ್ ಪದವಿ ಕಾಲೇಜು ವಿರಾಜಪೇಟೆ ಸಂಯುಕ್ತ ಆಶ್ರಯದಲ್ಲಿ ಕಲ್ತೋಡು ನಾಂಗಾಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ವಾರ್ಷಿಕ ವಿಶೇಷ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕಲಿಕೆಯೊಂದಿಗೆ ಸಮಾಜದ ಆಗು ಹೋಗುಗಳಿಗೆ ಪ್ರತಿಸ್ಪಂದಿಸುವ ಗುಣಗಳನ್ನು ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ಒತ್ತಡವಿರುತ್ತದೆ ಎಂದು ಹೇಳುವುದು ಸುಳ್ಳು. ಒತ್ತಡಗಳನ್ನು ನಾವು ಸೃಷ್ಟಿ ಮಾಡಿಕೊಳ್ಳುವುದು. ನಿರ್ದಿಷ್ಟವಾದ ಗುರಿ ಹೊಂದಿದಲ್ಲಿ ಒತ್ತಡದ ಗೊಂದಲದಿಂದ ಹೊರಬರಲು ಸಾಧ್ಯ. ಸಾಮಾಜಿಕ ಕಳಕಳಿಯೊಂದಿಗೆ ಭಾವನಾತ್ಮಕ ಸಂಬಂಧಗಳನ್ನು ಹೊಂದುವುದು ಮುಖ್ಯ. ಶಿಬಿರದ ಮೂಲಕ ಉತ್ತಮ ರಾಷ್ಟ್ರ ಸಮಾಜದ ನಿರ್ಮಾಣದ ಗುರಿ ನಿಮ್ಮದಾಗಲಿ ಎಂದು ಹೇಳಿದರು.ಶಿಬಿರದ ಧ್ವಜರೋಹಣಗೈದು ಮಾತನಾಡಿದ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮೂಕಚಂಡ ಪ್ರಸನ್ನ ಸುಬ್ಬಯ್ಯ ಉತ್ತಮ ಸಮಾಜ ನಿರ್ಮಾಣಕ್ಕೆ ನಿಸ್ವಾರ್ಥ ಸೇವೆ ಮುಖ್ಯ. ಹಣದಾಹಕ್ಕೆ ಬಲಿಯಾಗದೆ ಪಾರದರ್ಶಕ ಆಡಳಿತ ನೀಡಲು ಉತ್ತಮ ನಾಯಕತ್ವ ಗುಣಗಳನ್ನು ಹೊಂದುವುದು ಮುಖ್ಯ. ಶಿಬಿರದಲ್ಲಿ ಕಲಿಯುವ ಪ್ರತಿ ವಿಷಯಗಳನ್ನು ಜೀವನದಲ್ಲಿ ರೂಡಿಸಿಕೊಳ್ಳಿ ಎಂದು ಹೇಳಿದರು.ಸಂತ ಅನ್ನಮ್ಮ ದೇವಾಲಯದ ಪ್ರಧಾನ ಧರ್ಮಗುರು ಮತ್ತು ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ರೆ.ಫಾ. ಜೇಮ್ಸ್ ಡೊಮಿನಿಕ್ ಅವರು ಮಾತನಾಡಿ ಗ್ರಾಮಗಳಲ್ಲಿ ವಾರ್ಷಿಕ ಶಿಬಿರಗಳ ಆಯೋಜನೆಯಿಂದಾಗಿ ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಬಹುದಾಗಿದೆ. ಚರ್ಚಾ ವಿಷಯಗಳಾಗಿ ಕೇಂದ್ರಿಕರಿಸಬಹುದಾಗಿದೆ. ೦೭ ದಿನಗಳ ಕಾಲ ನಡೆಯುವ ಶಿಬಿರದಲ್ಲಿ ದೊರಕುವ ಜ್ಞಾನ ಸಂಪಾದನೆಯಾಗಲಿ ಎಂದು ಶುಭ ಹಾರೈಸಿದರು.ಶಿಬಿರದ ಪ್ರತಿಜ್ಞಾ ವಿಧಿ ಭೋದಿಸಿ ಮಾತನಾಡಿದ ಸಂತ ಅನ್ನಮ್ಮ ಪದವಿ ಕಾಲೇಜಿನ ವ್ಯವಸ್ಥಾಪಕ ಮದಲೈ ಮುತ್ತು ಅವರು ಸ್ವಾರ್ಥ ವ್ಯಕಿತ್ವ ಬಿಟ್ಟು ನಿಶ್ವಾರ್ಥ ಸೇವೆಗೆ ಅಣಿಯಾಗಬೇಕು .ಸಮಾಜ ರೂಪಿಸಲು ಏಕೈಕ ವ್ಯಕ್ತಿಯಿಂದ ಸಾದ್ಯವಾಗುವುದಿಲ್ಲ.ಬದಲಿಗೆ ಸಹೋದರ ಭಾವ, ಸಂಬಂಧಗಳು, ಬಾಂದವ್ಯದಿಂದ ಮಾತ್ರ ಉತ್ತಮ ಸಮಾಜ ರೂಪಿಸಲು ಸಾಧ್ಯ ಎಂದು ಹೇಳಿದರು.ಕಾರ್ಯಕ್ರಮದ ಆರಂಭದಲ್ಲಿ ಶಿಬಿರಾರ್ಥಿಗಳ ಸಾನಿಧ್ಯದಲ್ಲಿ ಅತಿಥಿಗಳಿಂದ ಧ್ವಜರೋಹಣ ಮಾಡಲಾಯಿತು. ಶಿಬಿರಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆ ಗೀತೆ ಹಾಡಿದರು.
ರಾಷ್ಟ್ರೀಯ ಸೇವಾ ಯೋಜನ ಘಟಕದ ಶಿಬಿರಾಧಿಕಾರಿ ಬಿ.ಎನ್. ಶಾಂತಿಭೂಷಣ್ ಅವರು ಶಿಬಿರದ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಲ್ತೋಡು ನಾಂಗಾಲ ಸ.ಹಿ.ಪ್ರಾ. ಶಾಲೆಯ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ಆಶಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸ್ಥಳ ದಾನಿಗಳಾದ ಕುಪ್ಪಂಡ ಗೋಪಾಲ್ ಬೋಪಯ್ಯ, ಸಂತ ಅನ್ನಮ್ಮ ಪದವಿ ಕಾಲೇಜಿನ ಪ್ರಾಂಶುಪಾಲರಾದ ತೃಪ್ತಿ ಬೋಪಣ್ಣ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.ಕಲ್ತೋಡು ನಾಂಗಾಲ ಗ್ರಾಮದ ಸ.ಹಿ.ಪ್ರಾ. ಶಾಲೆಯ ಮುಖ್ಯೋಪಾಧ್ಯಾಯರಾದ ಫ್ಯಾನ್ಸಿ ಲೋಬೋ ಅವರು ಸ್ವಾಗತಿಸಿದರು, ಸಹ ಶಿಕ್ಷಕಿ ಗೌರಿ ನಿರೂಪಿಸಿ,ಶಿಭಿರಾಧಿಕಾರಿ ಬಿ.ಎನ್. ಶಾಂತಿಭೂಷಣ್ ಅವರು ವಂದಿಸಿದರು. ಸಂತ ಅನ್ನಮ್ಮ ಪದವಿ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ, ರಾಷ್ಟ್ರೀಯ ಸೇವಾ ಯೋಜನೆ ಘಟಕದ ಶಿಭಿರಾರ್ಥಿಗಳು, ಗ್ರಾಮಸ್ಥರು, ಹಾಗೂ ಸ.ಹಿ.ಪ್ರಾ. ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.
