ಎಸ್ ಟಿ ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ವಿದ್ಯಾರ್ಥಿನಿಯರ ನಡಿಗೆ ಜನಪದದ ಕಡೆಗೆ’ ಜಾನಪದ ಗೀತೆಗಳ ತರಬೇತಿ ಶಿಬಿರ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಆಧುನಿಕತೆಯ ಅಬ್ಬರ ಮತ್ತು ಪಾಶ್ಚಾತ್ಯ ಸಂಸ್ಕೃತಿ ಅತಿಯಾದ ಗೀಳಿನಿಂದ ಕಣ್ಮರೆಯಾಗುತ್ತಿರುವ ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಮಹತ್ತರ ಹೊಣೆಗಾರಿಕೆ ಇಂದಿನ ಮಕ್ಕಳು ಮತ್ತು ಯುವಜನತೆ ಮೇಲಿದೆ ಎಂದು ನಾಡಿನ ಹಿರಿಯ ಜಾನಪದ ಗಾಯಕ ಡಾ.ಅಪ್ಪಗೆರೆ ತಿಮ್ಮರಾಜು ಹೇಳಿದರು.

ಮಲ್ಲಿಗೆ ಸುಗಮ ಸಂಗೀತ ಟ್ರಸ್ಟ್, ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತು ನಗರದ ಎಸ್ ಟಿ ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ವಿದ್ಯಾರ್ಥಿನಿಯರ ನಡಿಗೆ ಜನಪದದ ಕಡೆಗೆ’ ಜಾನಪದ ಗೀತೆಗಳ ತರಬೇತಿ ಶಿಬಿರದ ಶನಿವಾರ ಸಮಾರೋಪ ಸಮಾರಂಭದಲ್ಲಿ ಮಾತನಾಡಿ ಜಾನಪದ ಈ ಮಣ್ಣಿನ ಮೂಲ ಬೇರು, ಜಾನಪದದಿಂದ ಭಾರತೀಯ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆ ಶ್ರೀಮಂತವಾಗಿವೆ. ಭಾರತ ಇಡೀ ವಿಶ್ವಕ್ಕೇ ಗುರುವಾಗಿದೆ. ಹಿಂದೆ ನಮ್ಮ ಹಿರಿಯರ ಬದುಕಿನ ಅವಿಭಾಜ್ಯ ಅಂಗವಾಗಿದ್ದ ಅವರ ಜೀವನದಲ್ಲಿ ಹಾಸು ಹೊಕ್ಕಾಗಿದ್ದ ಜಾನಪದ ಆಧುನಿಕತೆ ಅಬ್ಬರ ಮತ್ತು ಪಾಶ್ಚಾತ್ಯ ಸಂಸ್ಕೃತಿ ಗೀಳಿನಿಂದ ಕಣ್ಮರೆಯಾಗುತ್ತಿದ್ದು, ಇಂದಿನ ಮಕ್ಕಳಿಗೆ ಜಾನಪದದ ಗಂಧವೇ ಇಲ್ಲ ಎಂಬ ದುಸ್ಥಿತಿಯಲ್ಲಿ ನಾವಿದ್ದೇವೆ ಎಂದು ವಿಷಾದಿಸಿದರು.

ಜಾನಪದ ಜ್ಞಾನದ ಭಂಡಾರ, ನಮಗೆ ಸಂಸ್ಕಾರ, ಸಂಸ್ಕೃತಿ ನೀಡಿದ್ದು ಜಾನಪದ, ಜಾನಪದ ನಮ್ಮ ದೇಶದ, ರಾಜ್ಯದ, ಗ್ರಾಮಗಳ ಸಂಸ್ಕೃತಿ, ಅದು ಕಳೆದು ಹೋದರೆ ನಾವು ಎಲ್ಲ ಕಳೆದುಕೊಂಡು ಜಗತ್ತಿನೆದುರು ಒಂಟಿಯಾಗಿ ನಿಲ್ಲಬೇಕಾಗುತ್ತದೆ ಎಂದು ಎಚ್ಚರಿಸಿದರು.


ಮಲ್ಲಿಗೆ ಸುಗಮ ಸಂಗೀತ ಟ್ರಸ್ಟ್ ಅಧ್ಯಕ್ಷ ಮಲ್ಲಿಗೆ ಸುಧೀರ್ ಮಾತನಾಡಿ, ಜನಮಾನಸದಿಂದ ದೂರವಾಗುತ್ತಿರುವ ಜಾನಪದ ಕಲೆ ಸಾಹಿತ್ಯ ಮತ್ತು ಸಂಸ್ಕೃತಿ ಉಳಿಸಿ ಬೆಳೆಸಲು ಇಂದಿನ ಮಕ್ಕಳು ಮತ್ತು ಯುವಜನತೆಯಿಂದ ಮಾತ್ರ ಸಾಧ್ಯ, ಹಾಗಾಗಿ ಜಾನಪದ ಗೀತೆಗಳ ತರಬೇತಿ ಶಿಬಿರಗಳನ್ನು ಶಾಲಾ ಕಾಲೇಜುಗಳಲ್ಲಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಸಮಾಜಸೇವಕಿ ಪಲ್ಲವಿ ಸಿ.ಟಿ.ರವಿ ಮಾತನಾಡಿ, ಜಾನಪದ ಗೀತೆಗಳು ಮನಸ್ಸನ್ನು ತಣಿಸುತ್ತವೆ, ಪಾಶ್ಚಾತ್ಯ ಗೀತೆಗಳು ಕೆರಳಿಸುತ್ತವೆ, ನಮ್ಮ ನೋವನ್ನು ಮರೆಸುವ, ನಮ್ಮ ಬದುಕನ್ನು ಶ್ರೀಮಂತ ಗೊಳಿಸುವ ಶಕ್ತಿ ಜಾನಪದಕ್ಕಿದೆ ಎಂದರು.

ಶಿಬಿರದಲ್ಲಿ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ವಿಸ್ತರಿಸಲಾಯಿತು,

ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಶಿವನಗೌಡ, ಸುಗಮ ಸಂಗೀತ ಗಂಗಾದ ಖಜಾಂಚಿ ಸುಮಾಪ್ರಸಾದ್, ಮಲ್ಲಿಗೆ ಸುಗಮ ಸಂಗೀತ ಟ್ರಸ್ಟ್ ನ ಕಾರ್ಯದರ್ಶಿ ಮಂಜುಳಾ ಮಹೇಶ್, ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಮಲ್ಲಿಗೆ, ಲಕ್ಷ್ಮಿ ಅಭಿಷೇಕ್, ಪದವಿ ಕಾಲೇಜಿನ ಪ್ರಾಂಶುಪಾಲೆ ಡಾ ಜಿ.ಕೆ.ಭಾರತಿ, ಉಪನ್ಯಾಸಕಿ ಎಸ್.ಒ.ಆಶಾ, ಕೆ.ಎನ್. ನಾಗಭೂಷಣ್, ಮೋಹನ್ ಕುಮಾರ್, ರುದ್ರೇಶ್ ಉಪಸ್ಥಿತರಿದ್ದರು.