ಇಂದು ಬೋಧನೆಯಲ್ಲಿ ಹಲವು ಸವಾಲುಗಳನ್ನು ಎದುರಿಸುತ್ತಿದ್ದೇವೆ. ಬೋಧನೆ ಕಷ್ಟನಾ? ಸುಲಭನಾ? ಎಂಬುದು ಮುಖ್ಯವಲ್ಲ. ಬೋಧನೆಯು ವಿದ್ಯಾರ್ಥಿಗಳನ್ನು ಪ್ರಭಾವಿಸಬೇಕಿದೆ. ಜತೆಗೆ ಬೋಧಿಸುವ ಉದ್ದೇಶವನ್ನು ಕೂಡ ಅರ್ಥಮಾಡಿಕೊಳ್ಳಬೇಕಾಗಿದೆ. ಬೋಧನೆಯಲ್ಲಿ ನಿರಂತರ ಬದಲಾವಣೆ ಪ್ರಕ್ರಿಯೆ ಆಗಬೇಕಿದೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ಶಿಕ್ಷಕ ಒಬ್ಬ ಅನ್ವೇಷಣೆಗಾರ. ಒಂದು ವಿಷಯವನ್ನು ಗ್ರಹಿಸಿ ವಿಸ್ತಾರಗೊಳಿಸಿ ಅದನ್ನು ವಿಶ್ಲೇಷಿಸುವವನಾಗಿರಬೇಕು. ವ್ಯಕ್ತಿಯ ವ್ಯಕ್ತಿತ್ವ ರೂಪಿಸುವ ಹೊಣೆಗಾರಿಕೆ ಶಿಕ್ಷಕನದ್ದಾಗಿರುತ್ತದೆ ಎಂದು ಮಂಡ್ಯದ ಶಂಕರೇಗೌಡ ಶಿಕ್ಷಣ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ಎಸ್.ಬಿ.ಶಂಕರೇಗೌಡ ಹೇಳಿದರು.ತಾಲೂಕಿನ ಶ್ರೀ ಶಂಭುಲಿಂಗೇಶ್ವರ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್ ನಲ್ಲಿ ಮಂಡ್ಯ ವಿಶ್ವವಿದ್ಯಾಲಯ, ಶ್ರೀ ಶಂಭುಲಿಂಗೇಶ್ವರ ಶಿಕ್ಷಣ ಮತ್ತು ದೈಹಿಕ ಶಿಕ್ಷಣ ಮಹಾವಿದ್ಯಾಲಯ, ಬಿಇಡಿ ಕಾಲೇಜುಗಳ ಅಧ್ಯಾಪಕರ ಸಂಘ ಆಶ್ರಯದಲ್ಲಿ ಆಯೋಜಿಸಿದ್ದ ಪ್ರಸ್ತುತ ಶಿಕ್ಷಕರು ಎದುರಿಸುತ್ತಿರುವ ಬೋಧನೆಯ ಸವಾಲುಗಳು ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಇಂದು ಬೋಧನೆಯಲ್ಲಿ ಹಲವು ಸವಾಲುಗಳನ್ನು ಎದುರಿಸುತ್ತಿದ್ದೇವೆ. ಬೋಧನೆ ಕಷ್ಟನಾ? ಸುಲಭನಾ? ಎಂಬುದು ಮುಖ್ಯವಲ್ಲ. ಬೋಧನೆಯು ವಿದ್ಯಾರ್ಥಿಗಳನ್ನು ಪ್ರಭಾವಿಸಬೇಕಿದೆ. ಜತೆಗೆ ಬೋಧಿಸುವ ಉದ್ದೇಶವನ್ನು ಕೂಡ ಅರ್ಥಮಾಡಿಕೊಳ್ಳಬೇಕಾಗಿದೆ. ಬೋಧನೆಯಲ್ಲಿ ನಿರಂತರ ಬದಲಾವಣೆ ಪ್ರಕ್ರಿಯೆ ಆಗಬೇಕಿದೆ ಎಂದರು.ವರ್ತಮಾನದಲ್ಲಿ ತಂತ್ರಜ್ಞಾನ ಬಳಸಿಕೊಂಡು ಮಕ್ಕಳಲ್ಲಿ ಆವಿಷ್ಕಾರ ಧೋರಣೆಗಳನ್ನು ಬೆಳೆಸುವುದು ಶಿಕ್ಷಕರು ಎದುರಿಸುತ್ತಿರುವ ಬೋಧನೆಯ ಸವಾಲಾಗಿದೆ. ಒಬ್ಬ ಅಧ್ಯಾಪಕ ವಿದ್ಯಾರ್ಥಿಗಳಿಗೆ ಕಲಿಕೆ ವಾತಾವರಣ ಉಂಟು ಮಾಡಬೇಕು. ಆಯಾಯ ಕಾಲಘಟ್ಟಕ್ಕೆ ತಕ್ಕಂತೆ ತಂತ್ರಜ್ಞಾನ ಬಳಸಿಕೊಳ್ಳುವ ಜತೆಗೆ ತಮ್ಮ ಅನುಭವಗಳನ್ನು ಬಳಸಿಕೊಂಡು ಮಕ್ಕಳಿಗೆ ಕಲಿಕಾ ಚಟುವಟಿಕೆಗಳಲ್ಲಿ ತೊಡಗಿಸುವುದು ಬೋಧನೆಯ ಪ್ರಕ್ರಿಯೆಯಾಗಿದೆ ಎಂದು ತಿಳಿಸಿದರು.
ಶಿಕ್ಷಕನಾದವನು ವಿದ್ಯಾರ್ಥಿಗಳಿಗೆ ಕೇವಲ ಮಾಹಿತಿ ನೀಡುವುದಲ್ಲ. ಪಠ್ಯದಲ್ಲಿರುವ ವಿಷಯದ ಜತೆಗೆ ವರ್ತಮಾನವನ್ನು ಅರ್ಥ ಮಾಡಿಕೊಂಡು ಕಲಿಸಬೇಕಿದೆ. ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ ಎಂದು ಹೇಳಿದರು.ಅಧ್ಯಾಪಕ ಬಹಳ ಮುಖ್ಯವಾಗಿ ಪಠ್ಯದಲ್ಲಿರುವುದೆಲ್ಲವೂ ಸರಿ ಎನ್ನುವುದರ ಬದಲು ತಕರಾರು ಎತ್ತುವುದು ಹಾಗೂ ವಿಷಯವನ್ನು ಪ್ರಶ್ನಿಸುವುದನ್ನು ವಿದ್ಯಾರ್ಥಿಗಳಿಗೆ ಕಲಿಸಬೇಕು. ಸ್ವತಂತ್ರ ಓದು, ಕಲಿಕೆ, ಬರವಣಿಗೆಯನ್ನು ರೂಢಿಸಿಕೊಳ್ಳುವುದು ವಿದ್ಯಾರ್ಥಿಗಳ ಜವಾಬ್ದಾರಿ ಕೂಡ ಆಗಿದೆ ಎಂದರು.
ಇದೇ ವೇಳೆ ವ್ಯಕ್ತಿತ್ವ ವಿಕಸನ ಮತ್ತು ಸಬಲೀಕರಣದ ಸ್ವಯಂ ಅರಿವು ವಿಷಯ ಕುರಿತು ಮೈಸೂರು ಮಾನಸಗಂಗ್ರೋತಿ ನಿವೃತ್ತ ಪ್ರಾಧ್ಯಾಪಕ ಡಾ.ಜಿ.ವೆಂಕಟೇಶ್ ಕುಮಾರ್ ವಿಷಯ ಮಂಡಿಸಿದರು. ಮೈಸೂರಿನ ಎಸ್ ಎಐ ನಿವೃತ್ತ ತರಬೇತಿದಾರ ಡಾ.ವೈ.ಎಸ್.ಲಕ್ಷ್ಮೀಶ್ ಉದ್ಘಾಟಿಸಿದರು. ಎಸ್ ಎಸ್ ಇಟಿ ಅಧ್ಯಕ್ಷ ಪಿ.ಹೊನ್ನರಾಜು ಅಧ್ಯಕ್ಷತೆ ವಹಿಸಿದ್ದರು. ಎಸ್ ಎಸ್ ಇಟಿ ಸಂಸ್ಥಾಪಕ ಕಾರ್ಯದರ್ಶಿ ಪ್ರೊ.ಎಂ.ಪಂಚಲಿಂಗೇಗೌಡ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯದರ್ಶಿ ಪಿ.ಅಕ್ಷಯ್, ಎಸ್ ಎಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಜಿ.ಎಂ.ಶ್ರೀಕಾಂತ, ದೈಹಿಕ ಶಿಕ್ಷಣ ಕಾಲೇಜು ಸಹ ಪ್ರಾಧ್ಯಾಪಕ ರತ್ನಾಕರ್ ಪುತ್ತಿ ಸೇರಿದಂತೆ ಇತರರಿದ್ದರು.