ಸಾಹಿತ್ಯವೆಂಬುದು ಸಮಕಾಲೀನ ಸಮಾಜದ ಪ್ರತಿಬಿಂಬವಿದ್ದಂತೆ. ಆದಿಕವಿ ಪಂಪ, ಕುಮಾರವ್ಯಾಸ ಮುಂತಾದವರು ಸಾಹಿತ್ಯಕ್ಕೆ ನೀಡಿರುವ ಕೊಡುಗೆಯನ್ನು ಇಂದಿಗೂ ಸ್ಮರಿಸುತ್ತೇವೆ ಎಂದರೆ ಅವರ ಸಾಹಿತ್ಯದ ಮಹತ್ವ ಇಂದಿನವರಿಗೆ ಅರಿವಾಗಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಯಾವ ಸಾಹಿತ್ಯ ಸಮಾಜವನ್ನು ತಿದ್ದುವುದಿಲ್ಲವೋ, ಜನರ ಮನೋವಿಕಾಸಗೊಳಿಸುವುದಿಲ್ಲವೋ ಅಂತಹ ಸಾಹಿತ್ಯಕ್ಕೆ ಸಮಾಜದಲ್ಲಿ ಸ್ಥಾನವಿರುವುದಿಲ್ಲ. ಜನಸಾಮಾನ್ಯರ ಮನೋವಿಕಾಸಗೊಳಿಸುವುದೇ ಶುದ್ಧ ಸಾಹಿತ್ಯ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಅಭಿಪ್ರಾಯಪಟ್ಟರು.

ನಗರದ ಗಾಂಧಿ ಭವನದಲ್ಲಿ ಕರುನಾಡ ಸಿರಿ ಸಂಪದ ಸಾಹಿತ್ಯ ಸಾಂಸ್ಕೃತಿಕ ಟ್ರಸ್ಟ್‌ನ ನಾಲ್ಕನೇ ವಾರ್ಷಿಕೋತ್ಸವದ ಪ್ರಯುಕ್ತ ಕವಿ ಕಾವ್ಯ ಸಮ್ಮಿಲನ, ಗೀತ ಗಾಯನ, ಭರತ ನಾಟ್ಯ,ಸಾಧಕರಿಗೆ ಪುರಸ್ಕಾರ ಕಾರ್ಯಕ್ರಮದಲ್ಲಿ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು.

ಸಾಹಿತ್ಯವೆಂಬುದು ಸಮಕಾಲೀನ ಸಮಾಜದ ಪ್ರತಿಬಿಂಬವಿದ್ದಂತೆ. ಆದಿಕವಿ ಪಂಪ, ಕುಮಾರವ್ಯಾಸ ಮುಂತಾದವರು ಸಾಹಿತ್ಯಕ್ಕೆ ನೀಡಿರುವ ಕೊಡುಗೆಯನ್ನು ಇಂದಿಗೂ ಸ್ಮರಿಸುತ್ತೇವೆ ಎಂದರೆ ಅವರ ಸಾಹಿತ್ಯದ ಮಹತ್ವ ಇಂದಿನವರಿಗೆ ಅರಿವಾಗಬೇಕು. ಅವುಗಳಲ್ಲಿ ಮಾನವೀಯ ಮೌಲ್ಯಗಳ ದರ್ಶನವಾಗುವುದಲ್ಲದೆ, ಜಗತ್ತಿನ ಕಲ್ಯಾಣವನ್ನು ಬಯಸುತ್ತವೆ. ಇಲ್ಲಿ ನಾವು ಗಮನಿಸಬೇಕಾದ ಪ್ರಮುಖ ವಿಚಾರವೆಂದರೆ, ಈ ಭಾಷಾ ಸಾಹಿತ್ಯದ ಮೂಲಬೇರು ಜಾನಪದವಾಗಿದೆ. ಅದುವೇ ಶ್ರಮ ಸಂಸ್ಕೃತಿಯ ಪ್ರತೀಕವೂ ಹೌದು ಎಂದು ಬಣ್ಣಿಸಿದರು.

ಇತ್ತೀಚೆಗೆ ನಮ್ಮನ್ನು ಆಳುವ ನಾಯಕರು ಇಂತಹ ಸಂಪದ್ಭರಿತ ಸಾಹಿತ್ಯ ಸಂಸ್ಕೃತಿಯನ್ನು ಅರಿಯದ ಪರಿಣಾಮ ಸದನದಲ್ಲಿ ಅವರು ಬಳಸುವ ಭಾಷೆಯೂ ಕೀಳುಮಟ್ಟಕ್ಕಿಳಿದಿದೆ. ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದಿರುವ ಕನ್ನಡ ಸಾಹಿತ್ಯಕ್ಕೆ ದೇಶದಲ್ಲಿ ತನ್ನದೇ ಆದ ಮಹತ್ವವಿದೆ. ಇದನ್ನು ನಾಯಕರೆನಿಸಿಕೊಂಡವರು ಅರಿತುಕೊಳ್ಳಬೇಕು ಎಂದರು.

ಲಯನ್ಸ್ ಮಾಜಿ ರಾಜ್ಯಪಾಲ ನಾಗರಾಜ್ ಭೈರಿ, ಕರ್ನಾಟಕದ ಏಕೀಕರಣ ಎಂಬುದು ಸುಲಭವಾಗಿ ಆಗಿದ್ದಲ್ಲ. ಸ್ವಾತಂತ್ರ್ಯ ಹೋರಾಟದ ಸ್ವರೂಪದಲ್ಲಿಯೇ ನಡೆದ ಒಂದು ಚಳವಳಿಯಾಗಿತ್ತು. ಅದುವರೆಗೆ ಹರಿದು ಹಂಚಿಹೋಗಿದ್ದ ಪ್ರಾಂತ್ಯಗಳನ್ನೆಲ್ಲ ಒಂದುಗೂಡಿಸಿ ಕರ್ನಾಟಕವೆಂದು ನಾಮಕರಣ ಮಾಡಿದ್ದರ ಹಿಂದಿನ ಶ್ರಮ, ತ್ಯಾಗಗಳನ್ನು ಇಂದಿನ ಮಕ್ಕಳಿಗೆ ತಿಳಿಸಬೇಕು. ನಮ್ಮ ಹಿರಿಯರು ಶ್ರಮಪಟ್ಟು ರೂಪಿಸಿದ ಕರ್ನಾಟಕವನ್ನು ಈಗ ಮತ್ತೆ ಒಡೆದು ಚೂರು ಮಾಡುವ ಮಾತುಗಳು ಕೇಳಿಬರುತ್ತಿವೆ. ರಾಜ್ಯವನ್ನು ಪ್ರತ್ಯೇಕಿಸುವಂತಹ ದನಿಗಳನ್ನು ಆಳುವವರು ಮಟ್ಟಹಾಕಬೇಕಿದೆ ಎಂದು ತಿಳಿಸಿದರು.

ಕುವೆಂಪು ಅವರು ತಮ್ಮ ೨೦ನೇ ವಯಸ್ಸಿನಲ್ಲೇ ನಾಡಗೀತೆಯನ್ನು ರಚಿಸಿದ್ದಾರೆ. ಇಡೀ ಕರ್ನಾಟಕವನ್ನು ಆ ಒಂದು ಗೀತೆಯಲ್ಲೇ ಕಟ್ಟಿಕೊಟ್ಟಿರುವ ಅವರನ್ನು ದಾರ್ಶನಿಕರು ಎಂದೇ ಪರಿಗಣಿಸಬೇಕು. ಬೇರೆ ಯಾರಿಗೂ ಇಂತಹ ಸಾಹಿತ್ಯ ರಚಿಸಲು ಸಾಧ್ಯವಿಲ್ಲ ಎಂಬುದನ್ನು ನಾವು ಮನಗಾಣಬೇಕು. ಸಾಹಿತ್ಯ ಹಿನ್ನೆಲೆಗೆ ಸರಿದು ರಾಜಕೀಯ ಮುನ್ನೆಲೆಗೆ ಬಂದರೆ ನಾಡು ಛಿದ್ರವಾಗುತ್ತದೆಂದು ಎಚ್ಚರಿಸಿದರು.

ಕಾರ್ಯಕ್ರಮದಲ್ಲಿ ಸಾಹಿತ್ಯ ಕ್ಷೇತ್ರದಿಂದ ಲಕ್ಷ್ಮೀ ಗುಲ್ಬರ್ಗ, ಟಿ.ಜೆ.ವಿಮಲಾ, ನರಸಿಂಗರಾವ್, ಮಹಾಲಿಂಗಯ್ಯ ಯಮದೂರು, ಟಿ.ರಾಜು ಪೂರಿಗಾಲಿ, ಆ.ರಾ.ಬಾಲಕೃಷ್ಣ, ಕೃಷಿ ಕ್ಷೇತ್ರದಿಂದ ಎಂ.ಸಿ.ಭಾಸ್ಕರ್ ಹಾಗೂ ಶಿಕ್ಷಣ ಕ್ಷೇತ್ರದಿಂದ ಸಿ.ವಿ.ರವೀಂದ್ರ ಅವರುಗಳಿಗೆ ‘ಕರುನಾಡ ಸಿರಿಸಂಪದ ರಾಜ್ಯೋತ್ಸವ ಪ್ರಶಸ್ತಿ’ ನೀಡಿ ಅಭಿನಂದಿಸಲಾಯಿತು. ಬಳಿಕ ವಿವಿಧೆಡೆಗಳಿಂದ ಆಗಮಿಸಿದ್ದ ಕವಿಗಳಿಂದ ಕವಿಗೋಷ್ಠಿ ಜರುಗಿತು.

ಕಲಾವಿದ ಕಟ್ಟೆ ಎಂ.ಎಎಸ್.ಕೃಷ್ಣಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಂ.ವಿ.ಧರಣೇಣೇಂದ್ರಯ್ಯ ಅಧ್ಯಕ್ಷತೆ ವಹಿಸಿದ್ದರು, ಲೋಕಪಾವನಿ ಬ್ಯಾಂಕ್ ಅಧ್ಯಕ್ಷೆ ಸುಜಾತ ಕೃಷ್ಣ, ಉದ್ಯಮಿ ಎಸ್.ಸಿ.ಬಸವರಾಜು, ಕರ್ನಾಟಕ ಅಹಿಂದ ವೇದಿಕೆ ರಾಜ್ಯಾಧ್ಯಕ್ಷ ಬಸವರಾಜು, ಕಾಯಕಯೋಗಿ ಫೌಂಡೇಷನ್ ಅಧ್ಯಕ್ಷ ಎಂ.ಶಿವಕುಮಾರ್, ಸಾಹಿತಿ ಕೊತ್ತತ್ತಿ ರಾಜು, ಕೆ ರಾಜಶ್ರೀ, ಶುಭಮಂಗಳ ಇತರರಿದ್ದರು.