ಈ ಯೋಜನೆ ಜಾರಿಗೆ ತರಲು ನಾನು ಸಾಕಷ್ಟು ಶ್ರಮಿಸಿದ್ದು ಆತ್ಮ ತೃಪ್ತಿಯಿದೆ. ಶಾಸಕ ಬಾಲಕೃಷ್ಣ ನನ್ನ ವಿರುದ್ಧ ಟೀಕೆ ಮಾಡಿದರೂ ಒಂದು ಬಾರಿ ಕೂಡ ಕಾಮಗಾರಿ ನಡೆಯುವ ಸ್ಥಳಕ್ಕೆ ಹೋಗಿರಲಿಲ್ಲ. ನನ್ನ ಶ್ರಮ ಜನತೆಗೆ ತಿಳಿದಿದೆ. 2028 ರಲ್ಲಿ ಜನತೆ ನನಗೆ ಮತ್ತೊಮ್ಮೆ ಆಶೀರ್ವಾದ ಮಾಡಲಿದ್ದು 83 ಕೆರೆಗಳಿಗೆ ನನ್ನ ಅವಧಿಯಲ್ಲಿ ನೀರು ತುಂಬಿಸುವ ಕೆಲಸ ಮಾಡುತ್ತೇನೆ ಎಂದು ಎ. ಮಂಜುನಾಥ ವಿಶ್ವಾಸ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಮಾಗಡಿ
ನಾನು ಕಾಂಗ್ರೆಸ್ ಪಕ್ಷದಲ್ಲಿ ಇದ್ದಾಗ ಮಾಜಿ ಸಚಿವ ಎಚ್.ಎಂ.ರೇವಣ್ಣ ಹಾಗೂ ಮಾಜಿ ಸಂಸದ ಡಿ.ಕೆ. ಸುರೇಶ್ ರವರ ಜತೆ ಸೇರಿ ಹೇಮಾವತಿ ನೀರು ತಾಲೂಕಿಗೆ ತರಬೇಕೆಂಬ ನಿಟ್ಟಿನಲ್ಲಿ ಡಿಪಿಆರ್ ನಿಂದ ಹಿಡಿದು ಕಾಮಗಾರಿ ಆರಂಭದವರೆಗೂ ಶ್ರಮ ಹಾಕಿದ್ದು, ಈಗ ಅದರ ಫಲವಾಗಿ ಹೇಮಾವತಿ ಮಾಗಡಿಗೆ ಹರಿದಿದೆ ಎಂದು ಮಾಜಿ ಶಾಸಕ ಎ. ಮಂಜುನಾಥ್ ಖುಷಿ ವ್ಯಕ್ತಪಡಿಸಿದರು.ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೇಮಾವತಿ ಯೋಜನೆ ಅನುಷ್ಠಾನಕ್ಕೆ ತರಬೇಕಾದಾಗ ಶಾಸಕ ಬಾಲಕೃಷ್ಣರವರು ಟೀಕೆ ಮಾಡಿದ್ದರು. ಆದರೆ ನಾನು ಈ ಯೋಜನೆ ಅನುಷ್ಠಾನ ಆಗಲೇಬೇಕು ಎಂದು ಎಚ್.ಎಂ.ರೇವಣ್ಣನವರ ಜತೆ ಸೇರಿ ಕ್ಯಾಬಿನೆಟ್ ನಲ್ಲಿ ಅನುಮೋದನೆ ಪಡೆಯಲು ಫೈಲ್ ಗಳನ್ನು ಹಿಡಿದುಕೊಂಡು ವಿಧಾನಸೌಧ ಅಲೆದಿದ್ದೆ. ಅನುಮೋದನೆ ಸಿಕ್ಕು 83 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಹಾಕಿಕೊಳ್ಳಲಾಯಿತು. ಯೋಜನೆಯ ಸಹಾಯಕ ಇಂಜಿನಿಯರ್ ನಾಗರಾಜು, ಎಂಡಿ ಜಯಪ್ರಕಾಶ್ ರವರು ಯೋಜನೆ ಅನುಷ್ಠಾನಕ್ಕೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ಇದರ ಫಲವಾಗಿ ಮಾಗಡಿ ಕೋಟೆ ಮೈದಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಂಕುಸ್ಥಾಪನೆ ಮಾಡಿದರು. ಆ ಸಮಯದಲ್ಲಿ ಶಾಸಕ ಬಾಲಕೃಷ್ಣರವರು ವೇದಿಕೆಗೆ ಬಂದು ಈ ಯೋಜನೆ ಅನುಷ್ಠಾನವಾಗದಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಜನಗಳೇ ನೀರು ಬಿಡುತ್ತಾರೆ ಎಂದು ವ್ಯಂಗ್ಯವಾಡಿ ಎಚ್.ಎಂ. ರೇವಣ್ಣ ವಿರುದ್ಧ ಟೀಕೆ ಮಾಡಿದ್ದರು. ನಾನು ಕಾಮಗಾರಿ ವೀಕ್ಷಣೆ ಮಾಡುವಾಗ ಪೈಪ್ ಗಳು ತುಕ್ಕು ಹಿಡಿಯುತ್ತಿವೆ, ಈ ಪೈಪ್ ನಿಂದ ನೀರು ಬರುತ್ತಾ? ಎಂದು ಬಾಲಕೃಷ್ಣರವರು ವಿರೋಧ ಮಾಡುತ್ತಿದ್ದರು. ಅವರ ಬೆಂಬಲಿಗರಿಂದ ಕಾಮಗಾರಿ ಆಗದಂತೆ ಪೈಪ್ ಲೈನ್ ಜಾಗದಲ್ಲಿ ಪೈಪ್ ಹಾಕಲು ಅವಕಾಶ ನೀಡದೆ ಸಾಕಷ್ಟು ತೊಂದರೆ ನೀಡಿದ್ದರೂ ಕೂಡ ಈ ಎಲ್ಲಾ ವಿರೋಧದ ನಡುವೆಯೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿರವರು ಹೇಮಾವತಿ ನಾಲೆಯಿಂದ ಮಾಗಡಿ ತಾಲೂಕಿಗೆ ಮುಕ್ಕಾಲು ಟಿಎಂಸಿ ನೀರು ಅಲೋಕೇಶನ್ ಮಾಡಿಸಿದರು. ಅದರ ಪರಿಣಾಮ ನಾಲೆ ಮೂಲಕ ನೀರು ಹರಿಯುತ್ತಿದ್ದು ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದ್ದು, ಹೇಮಾವತಿ ಹರಿದಿರುವುದಕ್ಕೆ ಸಂತಸ ಮೂಡುವಂತಾಗಿದೆ ಎಂದು ತಿಳಿಸಿದರು.
ಶೇ. 40ರಷ್ಟು ಮಾತ್ರ ಕಾಮಗಾರಿಯಾಗಿದೆ:ಹೇಮಾವತಿ ನೀರನ್ನು 83 ಕೆರೆಗಳಿಗೆ ತುಂಬಿಸಲು ಈಗ ಆಗುವುದಿಲ್ಲ, ಕೇವಲ ಶೇ. 40ರಷ್ಟು ಮಾತ್ರ ಕಾಮಗಾರಿ ಮುಗಿದಿದ್ದು, ಮುಖ್ಯ ಕೊಳವೆ-1, 16 ಕಿಲೋಮೀಟರ್ ಮುಖ್ಯ ಕೊಳವೆ-2, 22 ಕಿ.ಮೀ ಮಾತ್ರ ಮುಗಿದಿದ್ದು ಕೆರೆಗಳಿಗೆ ಸಂಪರ್ಕಿಸುವ 225 ಕಿ.ಮೀ ಚಿಕ್ಕ ಪೈಪು ಸಂಪರ್ಕ ಕಾಮಗಾರಿ ಮುಗಿದಾಗ ಮಾತ್ರ ಕೆರೆಗಳಿಗೆ ನೀರು ತುಂಬಿಸಬಹುದು. ಎಕ್ಸ್‌ಪ್ರೆಸ್ ಕೆನಾಲ್ ಗೂ ಈ ಕಾಮಗಾರಿಗೂ ಸಂಬಂಧವಿಲ್ಲ. ಎಕ್ಸ್‌ಪ್ರೆಸ್ ಕೆನಾಲ್ ಕಾಮಗಾರಿ ಮೂಲಕ ನೀರು ಹರಿಸಿದರೆ ನಮ್ಮದೇನು ಅಭ್ಯಂತರವಿಲ್ಲ, ಎರಡು ವರ್ಷಕ್ಕೆ ಒಮ್ಮೆ ನಾಲೆ ಮೂಲಕವೇ ನೀರು ಹರಿದರೆ ಸಾಕು, ಕಾಂಗ್ರೆಸ್ ಸರ್ಕಾರ ಎಕ್ಸ್‌ಪ್ರೆಸ್ ಕೆನಾಲ್ ಕಾಮಗಾರಿ ಮಾಡುವುದು ಅವರ ವಿವೇಚನೆಗೆ ಬಿಟ್ಟದ್ದು ಎಂದು ಎ.ಮಂಜುನಾಥ್ ಸ್ಪಷ್ಟನೆ ನೀಡಿದರು.
ಆತ್ಮತೃಪ್ತಿ ಇದೆ:ಈ ಯೋಜನೆ ಜಾರಿಗೆ ತರಲು ನಾನು ಸಾಕಷ್ಟು ಶ್ರಮಿಸಿದ್ದು ಆತ್ಮ ತೃಪ್ತಿಯಿದೆ. ಶಾಸಕ ಬಾಲಕೃಷ್ಣ ನನ್ನ ವಿರುದ್ಧ ಟೀಕೆ ಮಾಡಿದರೂ ಒಂದು ಬಾರಿ ಕೂಡ ಕಾಮಗಾರಿ ನಡೆಯುವ ಸ್ಥಳಕ್ಕೆ ಹೋಗಿರಲಿಲ್ಲ. ನನ್ನ ಶ್ರಮ ಜನತೆಗೆ ತಿಳಿದಿದೆ. 2028 ರಲ್ಲಿ ಜನತೆ ನನಗೆ ಮತ್ತೊಮ್ಮೆ ಆಶೀರ್ವಾದ ಮಾಡಲಿದ್ದು 83 ಕೆರೆಗಳಿಗೆ ನನ್ನ ಅವಧಿಯಲ್ಲಿ ನೀರು ತುಂಬಿಸುವ ಕೆಲಸ ಮಾಡುತ್ತೇನೆ ಎಂದು ಎ. ಮಂಜುನಾಥ ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್ ಮುಖಂಡರಾದ ಕೆಂಪೇಗೌಡ, ಮೂರ್ತಿ, ಎಂ.ಎನ್.ಮಂಜು, ವಿಜಯಕುಮಾರ್, ರಂಗಣಿ, ಪಂಚೆ ರಾಮಣ್ಣ, ನಾಗರಾಜು, ಕೆಂಪಸಾಗರ ಮಂಜುನಾಥ್, ವೆಂಕಟೇಶ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.