ಸಾರಾಂಶ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲಒಂದು ದೇಶ ಮುಂದುವರೆಯಲು ಶಿಕ್ಷಣ ಎಂಬುದು ಅತೀ ಮುಖ್ಯವಾಗಿದೆ. ಯಾವುದೇ ದೇಶಕ್ಕೆ ಹೋದರು ವಿಜ್ಞಾನ, ತಂತ್ರಜ್ಞಾನ ವಿದ್ಯೆ ಇಂದು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲಿದೆ, ಈ ನಿಟ್ಟಿನಲ್ಲಿ ಮಾನಸ ಸಂಸ್ಥೆ ವಿದ್ಯಾರ್ಥಿಗಳನ್ನು ಬುದ್ಧಿವಂತರನ್ನಾಗಿ ಮಾಡಲು ಪಣತೊಟ್ಟಿರುವುದು ಹೆಮ್ಮೆಯ ಸಂಗತಿ ಎಂದು ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಹೇಳಿದರು.ಮಾನಸ ಸಮಾರೋಪ ಸಮಾರಂಭದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಮಾತನಾಡಿ, ಈ ಸಂಸ್ಥೆ ಬೋಧಕರಿಗೆ ಸ್ಫೂರ್ತಿದಾಯಕ ಪ್ರಶಸ್ತಿ ನೀಡುವುದು ಪ್ರಶಂಸನೀಯ. ಸರ್ಕಾರ ಉಚಿತ ಸೌಲಭ್ಯಗಳನ್ನು ನಿಲ್ಲಿಸಿ ಉಚಿತ ಶಿಕ್ಷಣ ಉಚಿತ ಆರೋಗ್ಯ ಸೌಲಭ್ಯಗಳನ್ನು ನೀಡಿದಲ್ಲಿ ದೇಶ ಖಂಡಿತ ಅಭಿವೃದ್ಧಿಯತ್ತ ಸಾಗಲಿದೆ. ನಮ್ಮ ದೇಶದ ಮಕ್ಕಳ ಬುದ್ಧಿವಂತಿಕೆ ಸಂಸ್ಕೃತಿ ನಾನು ಸುತ್ತಿದ 25 ದೇಶಗಳಲ್ಲೂ ಕಂಡಿಲ್ಲ, ಪ್ರಸ್ತುತ 30 ವರ್ಷಗಳಲ್ಲಿ ತಂತ್ರಜ್ಞಾನ ಎಷ್ಟು ಬೆಳೆದಿದೆ ಎಂದರೆ ಪ್ರಪಂಚದ ಮೂಲೆ ಮೂಲೆಯಲ್ಲಿ ಯಾರ ಮನೆಯನ್ನು ಯಾವ ಸಮಸ್ಯೆಯನ್ನು ಬೇಕಾದರೂ ಹುಡುಕಬಹುದು, ಚೀನಾ ದೇಶ ತನ್ನ ಬುದ್ಧಿ ಕೌಶಲ್ಯದಿಂದ ಜಗತ್ತಿಗೆ ಮುಂದುವರಿದ ದೇಶವಾಗಿದೆ.
ಇಂದು ನೊಬೆಲ್ ಪ್ರಶಸ್ತಿ ಪಡೆದಿರುವ ಸಾಧಕರು ಕೂಡ ಬಹಳ ಕಡು ಬಡತನದಿಂದ ಬಂದವರಾಗಿದ್ದಾರೆ. ವಿದ್ಯೆ ಬುದ್ಧಿವಂತರ ಸ್ವತ್ತು. ಅಂತಹ ವಿದ್ಯೆ ಸಂಸ್ಕಾರವನ್ನುಮಾನಸ ಶಿಕ್ಷಣ ಸಂಸ್ಥೆ ನೀಡುತ್ತಿದೆ ಎಂದರು. ಕನ್ನಡಪ್ರಭ ಪತ್ರಿಕೆಯ ಸ್ಥಾನಿಕ ಸಂಪಾದಕ ಅಂಶಿ ಪ್ರಸನ್ನ ಕುಮಾರ್ ಮಾತನಾಡಿ, ಮಾನಸ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ಸಾಧನೆಯನ್ನು ಕಳೆದ ಎರಡು ದಶಕಗಳಿಂದ ವೀಕ್ಷಿಸಿದ್ದೇನೆ, ಮಾನಸ ಸಂಸ್ಥೆ ಗುಣಾತ್ಮಕ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ. ಇಂತಹ ಸಂಸ್ಥೆ ಮೈಸೂರಿನಲ್ಲೂ ಶಾಖೆ ಪ್ರಾರಂಭವಾಗಬೇಕು, ಆ ಮೂಲಕ ಅಲ್ಲಿನ ವಿದ್ಯಾರ್ಥಿಗಳುಗುಣಮಟ್ಟದ ಶಿಕ್ಷಣಕ್ಕೆ ಇಲ್ಲಿನ ಪದಾಧಿಕಾರಿಗಳು ಮುಂದಾಗಬೇಕು ಎಂದರು.ನಾಡಿನ ಹೆಸರಾಂತ ಸಾಧಕರಿಗೆ ಮಾನಸ ಶಿಕ್ಷಣ ಸಂಸ್ಥೆ ಮಾನಸ ಪ್ರಶಸ್ತಿ ನೀಡಿ ಈ ಸಂಸ್ಥೆಯ ಗೌರವ ಹೆಚ್ಚಿಸುವ ನಿಟ್ಟಿನಲ್ಲಿ ಪ್ರೋತ್ಸಾಹದಾಯಕ ಕಾರ್ಯಕ್ರಮವಾಗಿ ಮಾನಸೋತ್ಸವ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ. ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳಲು ಯುವ ಪೀಳಿಗೆ ಪತ್ರಿಕೆಗಳನ್ನು ಹೆಚ್ಚಿನ ರೀತಿ ಓದುವಂತಾಗಬೇಕು, ಗ್ರಂಥಾಲಯಗಳಿಗೆ ತೆರಳಿ ಅಲ್ಲಿರುವ ಸಂಗ್ರಹವಾಗಿರುವ ಪುಸ್ತಕಗಳನ್ನು ಓದಿ ಜ್ಞಾನ ಹೆಚ್ಚಿಸಿಕೊಳ್ಳಬೇಕು, ಪೈಪೋಟಿ ಯುಗದಲ್ಲೂ ಇಲ್ಲಿನ ವಿದ್ಯಾರ್ಥಿಗಳು ಕಠಿಣ ಪರಿಶ್ರಮದ ಮೂಲಕ ಸಾಧನೆಗೈಯುವಂತಾಗಬೇಕು ಎಂದರು. ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ.ಮಂಜುನಾಥ ಪ್ರಸನ್ನ ಮಾತನಾಡಿ, ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳ ಜ್ಞಾನದ ವೇಗ ಹೆಚ್ಚಳವಾಗಬೇಕು, ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿರುವ ಮಾನಸ ಶಿಕ್ಷಣ ಸಂಸ್ಥೆ ಜಿಲ್ಲಾದ್ಯಂತ ತನ್ನ ಸಂಸ್ಥೆಯನ್ನು ಪ್ರಾರಂಭಿಸುವ ಮೂಲಕ ಮೌಲ್ಯಯುತ ಶಿಕ್ಷಣಕ್ಕೆ ಹೆಚ್ಚು ಒತ್ತುನೀಡಬೇಕು, ತಂತ್ರಜ್ಞಾನ ಮುಂದುವರೆಯುತ್ತಿರುವ ಹಿನ್ನೆಲೆಯಲ್ಲಿ ಯುವ ಪೀಳಿಗೆಯೂ ಇದಕ್ಕೆ ಒಗ್ಗಿಕೊಳ್ಳಬೇಕು, ಶಿಕ್ಷಣ ಹುಲಿ ಹಾಲಿದ್ದಂತೆ ಎಂದು ಅಂಬೇಡ್ಕರ್ ಉಲ್ಲೀಖಿಸಿದ್ದಾರೆ, ಅದರಂತೆ ಉನ್ನತ ಶಿಕ್ಷಣ ಪಡೆಯುವ ಮೂಲಕ ಪೈಪೋಟಿ ಯುಗದಲ್ಲಿ ವಿದ್ಯಾರ್ಥಿಗಳು ಸಾಧಕರಾಗಬೇಕು ಎಂದರು. ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ಮಾತನಾಡಿ, ಸಂಸ್ಥೆಯ ಅಧ್ಯಕ್ಷ ನಾಗರಾಜು, ಕಾರ್ಯದರ್ಶಿ ಡಾ.ಎಸ್.ದತ್ತೇಶ್ ಕುಮಾರ್ ಅವರು ಕಳೆದ 30 ವರ್ಷಗಳಿಂದ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಅಕ್ಷರದ ಜೊತೆಗೆ ಅನ್ನ ದಾಸೋಹ ಮಾಡುತ್ತಾ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸಂಸ್ಥೆ ಬೆಳವಣಿಗೆ ನಿಟ್ಟಿನಲ್ಲಿ ನಾನು ಸಹಾ ಕೈಜೋಡಿಸುವೆ, ಇದೊಂದು ಮೌಲ್ಯಯುತ ಶಿಕ್ಷಣ ಸಂಸ್ಥೆ ಎಂದರು.ದಿವ್ಯ ಸಾನ್ನಿಧ್ಯ ವಹಿಸಿದ್ದ ಜೇತವನಾದ ಬೌದ್ಧ ಬಿಕ್ಕು ಮನೋರಖಿತ ಬಂತೇಜಿ ಮಾತನಾಡಿ, ಮನುಷ್ಯನಿಗೆ ಊಟ, ಬಟ್ಟೆ, ವಸತಿ ಎಷ್ಟು ಮುಖ್ಯವೋ ಶಿಕ್ಷಣವು ಅಷ್ಟೇ ಮುಖ್ಯ, ಮನಸ್ಸಿನ ಪುಸ್ತಕವನ್ನು ನಾವೆಲ್ಲರೂ ಓದಬೇಕು. ಈ ಸಂಸ್ಥೆಯಲ್ಲಿ ಬೋಧಕ ಬೋಧಕೇತರನ್ನೆಲ್ಲ ಸ್ವಾಗತಿಸುತ್ತಿರುವುದು ಅಭಿನಂದನಾರ್ಹ, ಧ್ಯಾನದ ಮೂಲಕ ನಾವು ಸಕಲವನ್ನು ಗಳಿಸಬಹುದು. ಮಾನಸ ಶಿಕ್ಷಣ ಸಂಸ್ಥೆ ವಿದ್ಯೆ, ಅನ್ನ, ಉದ್ಯೋಗ ಎಲ್ಲವನ್ನು ನೀಡುತ್ತಿದೆ ಬಡತನವನ್ನು ನಾವೆಲ್ಲರೂ ಸ್ವೀಕರಿಸಬೇಕು ಸಮ ಸಮಾಜವನ್ನು ನಿರ್ಮಿಸಬೇಕು. ಅಶೋಕನ ಶಾಂತಿ ಹೊಂದಬೇಕು, ಬಸವಣ್ಣನವರ ಸಮಾನತೆ ಮೈಗೂಡಿಸಿಕೊಳ್ಳಬೇಕು ಎಂದರು.