ಸಾರಾಂಶ
ಭಾರತ ಕಮ್ಯೂನಿಸ್ಟ್ ಪಕ್ಷದ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಯಿತು.
ಮಡಿಕೇರಿ : ಚೆಂಬೆಬೆಳ್ಳೂರು ಗ್ರಾಮದಲ್ಲಿ ಹತ್ಯೆಯಾದ ಕಾರ್ಮಿಕನ ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸುವ ಜೊತೆಗೆ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು ದೌರ್ಜನ್ಯಕ್ಕೊಳಗಾದ ಕುಟುಂಬಕ್ಕೆ ನ್ಯಾಯ ದೊರಕಿಸಬೇಕು ಎಂದು ಒತ್ತಾಯಿಸಿದರು. ವಿರಾಜಪೇಟೆ ಕ್ಷೇತ್ರ ವ್ಯಾಪ್ತಿಯಲ್ಲಿ ಹೀನಾಯ ಕೃತ್ಯ ನಡೆದಿದ್ದರೂ ಶಾಸಕರು ಸ್ಪಂದಿಸದೇ ಇರುವುದು ನೋವಿನ ಸಂಗತಿ ಎಂದು ಅಸಮಾಧಾನ ಹೊರಹಾಕಿದರು.ಈ ಸಂದರ್ಭ ಮಾತನಾಡಿದ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಚ್.ಬಿ.ರಮೇಶ್, ಡಿ.27ರಂದು ಚೆಂಬೆಬೆಳ್ಳೂರು ಗ್ರಾಮದಲ್ಲಿ ನಡೆದ ಕೂಲಿ ಕಾರ್ಮಿಕನ ಕೊಲೆ ಪ್ರಕರಣ ಆಕಸ್ಮಿಕ ಘಟನೆಯಲ್ಲ. ಎರವರು, ಕುರುಬರು ಮೊದಲಾದ ಬುಡಕಟ್ಟು ಜನಾಂಗದವರು ಅನುಭವಿಸುತ್ತಿರುವ ಶೋಷಣೆ, ಕ್ರೌರ್ಯಕ್ಕೆ ಇದು ಸಾಕ್ಷಿಯಾಗಿದೆ. ಆದಿವಾಸಿಗಳ ಮೇಲೆ ನಿರಂತರವಾಗಿ ದಾಳಿ, ದಬ್ಬಾಳಿಕೆ ನಡೆಯುತ್ತಿದೆ ಎಂದು ಆರೋಪಿಸಿದರು.
ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸುವ ವೇಳೆ ಪೊಲೀಸರು ಯಾವುದೇ ಒತ್ತಡಕ್ಕೆ ಮಣಿಯದೆ ಪ್ರಾಮಾಣಿಕರಾಗಿರಬೇಕು. ಮೃತ ಕಾರ್ಮಿಕನ ಕುಟುಂಬಕ್ಕೆ ಸರ್ಕಾರದಿಂದ ಮನೆ ನಿರ್ಮಿಸಿ ಕೊಡಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಪಕ್ಷದ ಸದಸ್ಯರಾದ ಪಿ.ಆರ್.ಭರತ್, ಎ.ಸಿ.ಸಾಬು, ಎನ್.ಡಿ.ಕುಟ್ಟಪ್ಪ, ಸಾಜಿ ರಮೇಶ್, ಪ್ರೇಮಾ ಮತ್ತಿತರರು ಪಾಲ್ಗೊಂಡಿದ್ದರು.