ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ವಿ.ಆರ್.ಡಬ್ಯ್ಲು, ಎಂ.ಆರ್.ಡಬ್ಯ್ಲುಹಾಗೂ ಯು.ಆರ್.ಡಬ್ಯ್ಲು (ವಿವಿಧೋದ್ಧೇಶ ಪುನರ್ವಸತಿ) ಕಾರ್ಯಕರ್ತರ ಪಾತ್ರ ಪ್ರಮುಖವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ ಅವರು ತಿಳಿಸಿದರು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ವಿ.ಆರ್.ಡಬ್ಯ್ಲು, ಎಂ.ಆರ್.ಡಬ್ಯ್ಲುಹಾಗೂ ಯು.ಆರ್.ಡಬ್ಯ್ಲು (ವಿವಿಧೋದ್ಧೇಶ ಪುನರ್ವಸತಿ) ಕಾರ್ಯಕರ್ತರ ಪಾತ್ರ ಪ್ರಮುಖವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ ಅವರು ತಿಳಿಸಿದರು.

ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಮಂಗ‍ಳವಾರ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ಸಹಯೋಗದಲ್ಲಿ ಜಿಲ್ಲೆಯ ವಿ.ಆರ್.ಡಬ್ಯ್ಲು, ಎಂ.ಆರ್.ಡಬ್ಯ್ಲು ಹಾಗೂ ಯು.ಆರ್.ಡಬ್ಯ್ಲುಗಳ (ವಿವಿಧೋದ್ಧೇಶ ಪುನರ್ವಸತಿ) ಕಾರ್ಯಕರ್ತರಿಗೆ ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಕಾನೂನುಗಳ ಕುರಿತು ಹಮ್ಮಿಕೊಳ್ಳಲಾಗಿದ್ದ ತರಬೇತಿ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

ದೇಶದಲ್ಲಿ ಹುಟ್ಟಿದ ಪ್ರತಿ ಮಗುವಿನಿಂದ ಹಿರಿಯ ನಾಗರಿಕರವರೆಗೂ ಪ್ರತಿಯೊಬ್ಬರಿಗೂ ಕಾನೂನುಗಳು ಅನ್ವಯವಾಗುತ್ತದೆ. ಯಾವುದೇ ಮಗು ಮಕ್ಕಳ ಹಕ್ಕುಗಳಿಂದ ವಂಚಿತವಾಗಬಾರದು. ಕೆಲ ಮಕ್ಕಳು ಬಾಲ್ಯ ವಿವಾಹ, ಬಾಲಕಾರ್ಮಿಕತೆ ಹಾಗೂ ಮಾನವ ಕಳ್ಳ ಸಾಗಾಣಿಕೆಗಳಿಗೆ ಬಲಿಯಾಗುತ್ತಿರುವುದು ಕಂಡುಬಂದಿದೆ. ಇದನ್ನು ಮನಗಂಡಿರುವ ಸರ್ಕಾರ ಮಕ್ಕಳ ಹಕ್ಕುಗಳ ರಕ್ಷಣಾ ಕಾಯ್ದೆಯಡಿ ೫೪ ಬಗೆಯ ಹಕ್ಕುಗಳನ್ನು ಜಾರಿ ಮಾಡಿದೆ. ೧೪ ವರ್ಷದೊಳಗಿನ ಮಕ್ಕಳನ್ನು ಯಾವುದೇ ಕಾರ್ಖಾನೆಯಲ್ಲಿ ದುಡಿಸಬಾರದು. ೧೪ ರಿಂದ ೧೮ ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ದುಡಿಮೆಯಲ್ಲಿ ತೊಡಗದಂತೆ ಮಕ್ಕಳಿಗೆ, ಪೋಷಕರಿಗೆ ಮನವರಿಕೆ ಮಾಡಬೇಕು ಎಂದರು.

ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಕರೆತಂದು ಶಿಕ್ಷಣ ಮಹತ್ವದ ಅರಿವು ಮೂಡಿಸಬೇಕು. ಶಾಲಾ ಕಾಲೇಜು ಹಂತದಲ್ಲಿ ಪೋಷಕರು, ವಿದ್ಯಾರ್ಥಿಗಳಿಗೆ ಸುರಕ್ಷಿತ ಹಾಗೂ ಅಸುರಕ್ಷಿತ ಸ್ಪರ್ಶಗಳ ಬಗ್ಗೆ ತಿಳಿಸಬೇಕು. ಮುಖ್ಯವಾಗಿ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಸ್ವಯಂ ರಕ್ಷಣೆಯ ಅರಿವನ್ನು ನೀಡಬೇಕು. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧೋದ್ಧೇಶ ಪುನರ್ವಸತಿ ಕಾರ್ಯಕರ್ತರ ಪಾತ್ರ ಬಹಳ ಪ್ರಮುಖವಾಗಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ವೆಂಕಟೇಶ್ ಅವರು ಮಾತನಾಡಿ, ಮಕ್ಕಳ ಹಕ್ಕುಗಳ ರಕ್ಷಣೆಯ ಕಾನೂನುಗಳನ್ನು ಪ್ರತಿಯೊಬ್ಬರು ಅರಿತಾಗ ಮಾತ್ರ ರಕ್ಷಣೆ ಸಾಧ್ಯವಾಗಲಿದೆ. ಪ್ರತಿಯೊಬ್ಬ ಮಕ್ಕಳಿಗೂ ಮಕ್ಕಳ ಹಕ್ಕುಗಳ ಬಗ್ಗೆ ತಿಳಿಸಬೇಕು. ಹೃದಯವಂತಿಕೆ, ಮಾನವೀಯ ಮೌಲ್ಯಗಳನ್ನು ಬಿತ್ತಿ ಬೆಳೆಸಬೇಕು. ವಿಕಲಚೇತನರನ್ನು ಸಬಲೀಕರಣಗೊಳಿಸಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ಸಾಮಾಜಿಕ ನ್ಯಾಯ ಕಾಯ್ದೆಗಳನ್ನು ಸರ್ಕಾರ ಜಾರಿಗೆ ತಂದಿದೆ. ವಿಕಲಚೇತನರ ಪುನರ್ವಸತಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ವಿ.ಆರ್.ಡಬ್ಯ್ಲು, ಎಂ.ಆರ್.ಡಬ್ಯ್ಲು, ಯು.ಆರ್.ಡಬ್ಯ್ಲುಗಳು ಪ್ರಸ್ತುತ ಸಾಮಾಜಿಕ ಸಮಸ್ಯೆಗಳ ಬಗ್ಗೆ ವಿಶೇಷಚೇತನರಿಗೆ ಮನವರಿಕೆ ಮಾಡಲು ತಾಳ್ಮೆ ಅವಶ್ಯವಾಗಿದೆ ಎಂದರು.

ವಿ.ಆರ್.ಡಬ್ಯ್ಲು. ಎಂ.ಆರ್.ಡಬ್ಯ್ಲು ಯು.ಆರ್.ಡಬ್ಯ್ಲು ಕಾರ್ಯಕರ್ತರು ಪ್ರೋತ್ಸಾಹಧನ ಪಡೆದು ಸೇವೆ ಸಲ್ಲಿಸುತ್ತಿದ್ದು, ಶ್ರಮಕ್ಕೆ ತಕ್ಕಂತೆ ಪ್ರತಿಫಲ ದೊರೆಯಲು ಮೊದಲು ಮಾನಸಿಕವಾಗಿ ಸದೃಢರಾಗಬೇಕು. ಪ್ರತಿ ಗ್ರಾಮಪಂಚಾಯಿತಿಯಲ್ಲಿ ವಿಕಲಚೇತನ ಸಬಲೀಕರಣಕ್ಕಾಗಿ ಶೇ. ೫ರಷ್ಟು ಮೀಸಲಿರುವ ಅನುದಾನ ಸದ್ಭಳಕೆಯಾಗುವಂತೆ ಪುನರ್ವಸತಿ ಕಾರ್ಯಕರ್ತರು ನೋಡಿಕೊಳ್ಳಬೇಕು. ಗ್ರಾಮಮಟ್ಟದಲ್ಲಿ ಕೆಲಸ ನಿರ್ವಹಿಸುವ ವಿಕಲಚೇತನರಿಗೆ ಶಿಸ್ತು ಸಂಯಮದ ಜೊತೆಗೆ ತಾಳ್ಮೆಯೂ ಇರಬೇಕು. ವಿಕಲಚೇತನರ ಕಾನೂನುಗಳು ದುರುಪಯೋಗವಾಗದಂತೆ ಹಕ್ಕುಗಳ ರಕ್ಷಣೆಗೆ ಮುಂದಾಗುವಂತೆ ಅವರು ಸಲಹೆ ಮಾಡಿದರು.

ವಿಕಲಚೇತನರ ಕಲ್ಯಾಣಾಧಿಕಾರಿ ಡಾ. ಮಂಜುನಾಥ್, ಜಿಲ್ಲಾ ಮಕ್ಕಳ ರಕ್ಷಣಾ ರಕ್ಷಣಾಧಿಕಾರಿ ಮಂಜುಳಾ, ಬಾಲಕಾರ್ಮಿಕ ಯೋಜನಾ ಸೊಸೈಟಿ ಯೋಜನಾ ನಿರ್ದೇಶಕ ಮಹೇಶ್ ಅವರು ಮಕ್ಕಳ ಹಕ್ಕುಗಳ ರಕ್ಷಣೆಯ ಮಹತ್ವದ ಕುರಿತು ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಸ್.ಐ.ಆರ್.ಡಿ ಸಂಪನ್ಮೂಲ ವ್ಯಕ್ತಿ ಬಸವಣ್ಣ, ವಿ.ಆರ್.ಡಬ್ಯ್ಲು. ಎಂ.ಆರ್.ಡಬ್ಯ್ಲು ಹಾಗೂ ಯು.ಆರ್.ಡಬ್ಯ್ಲು ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

---------------

16ಸಿಎಚ್ಎನ್‌16

ಚಾಮರಾಜನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.