ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟಿಸಿದ ಶಾಸಕ

ಕನ್ನಡಪ್ರಭ ವಾರ್ತೆ ಜೋಯಿಡಾ

ಅರಣ್ಯ ಸಂರಕ್ಷಣೆಯಲ್ಲಿ ಸಮುದಾಯದ ಪಾತ್ರ ತುಂಬಾ ಮುಖ್ಯವಾಗಿದೆ. ಅರಣ್ಯ ಉಳಿದರೆ ಮಾತ್ರ ನಾವು ಉಳಿಯುತ್ತೇವೆ ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.

ಗ್ರಾಮ ಅರಣ್ಯ ಸಮಿತಿ ಜಗಲ್ಬೇಟ್‌ದಲ್ಲಿ ಅರಣ್ಯ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡ ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟಿಸಿ ಮಾತನಾಡಿದರು.

ಹಿಂದೆ ನನ್ನ ಕ್ಷೇತ್ರಕ್ಕೆ ಈ ಭಾಗ ಸೇರಿದ ಮೊದಲ ಸಲ ನಾನು ಶಾಸಕನಾಗಿ ಬಂದಾಗ ಇಲ್ಲಿ ಗ್ರಾಮ ಅರಣ್ಯ ಸಮಿತಿಗಳು ಸ್ಥಾಪನೆಯಾಗಿದ್ದವು. ಈ ಸಮಿತಿ ಸದಸ್ಯರು ಅರಣ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವುದು ಮೆಚ್ಚುವಂತಹದು. ಅರಣ್ಯ ಇಲಾಖೆಯ ಅಧಿಕಾರಿಗಳು ಕಾಲಕಾಲಕ್ಕೆ ಸೂಕ್ತ ಸಲಹೆ ಮಾರ್ಗದರ್ಶನ ನೀಡುತ್ತಿದ್ದಾರೆ. ಇಲಾಖೆ ಉತ್ತಮ ಕೆಲಸ ಮಾಡುತ್ತಿದ್ದು, ಜನತೆ ಇಲಾಖೆಯ ಪ್ರಯೋಜನ ಪಡೆದು ಕೊಳ್ಳಲು ಕರೆ ನೀಡಿದರು.


ಹಳಿಯಾಳ ಪ್ರಾದೇಶಿಕ ವಿಭಾಗದ ಜಗಲ್ಬೇಟ್ ವಲಯದ ಗ್ರಾಮ ಅರಣ್ಯ ಸಮಿತಿಗಳ ಅಡಿಯಲ್ಲಿ ನಿರ್ಮಿಸಿದ ವಿವಿಧ ಕಟ್ಟಡಗಳ ಉದ್ಘಾಟನೆ ಮಾಡಲಾಯಿತು. ವಿವಿಧ ಫಲಾನುಭವಿಗಳಿಗೆ ಸಾಮಗ್ರಿಗಳು, ಕಿಟ್‌ಗಳು ಚೆಕ್ ವಿತರಿಸಲಾಯಿತು, ಇಳೆಧಾಬೆ, ಕಾಮ್ರಾ, ಗೌಳಿವಾಡ, ಮಾಲಂಬಾ, ಅಮಸೆತಗೌಳಿವಾಡ, ಸಿಂದೊಲಿ, ಚಾಪಾಳಿ, ಜನತೆಗೆ ಸಾಮಗ್ರಿ, ಕರಡಿ ದಾಳಿಗೊಳಗಾದ ವ್ಯಕ್ತಿಗೆ ಚೆಕ್ ವಿತರಿಸಿ, ಅರಣ್ಯ ಇಲಾಖೆಯ ಮಾಹಿತಿ ಪುಸ್ತಕ ಬಿಡುಗಡೆ ಮಾಡಿದರು. ಇದೇ ವೇಳೆ ಕಾರ್ಯಕ್ರಮದಲ್ಲಿ ಗ್ರಾಮ ಅರಣ್ಯ ಸಮಿತಿ ಸದಸ್ಯರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಹಳಿಯಾಳ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ ಕುಮಾರ್ ಕೆ.ಸಿ., ಎಸಿಎಫ್ ಮಹಮ್ಮದ್ ಶಫಿ, ಜಗಲ್ಬೇಟ್ ವಲಯ ಅರಣ್ಯ ಅಧಿಕಾರಿ ವಿನಯ್ ಭಟ್, ಇತರ ಗಣ್ಯರು ಉಪಸ್ಥಿತರಿದ್ದರು. ವಲಯ ಅರಣ್ಯಅಧಿಕಾರಿ ವಿನಯ್ ಭಟ್ ಕಾರ್ಯಕ್ರಮ ಸಂಘಟಿಸಿದ್ದರು.