ಗ್ಯಾರಂಟಿ ನಿರ್ವಹಣೆಗೆ ರಾಜ್ಯ ಸರ್ಕಾರ ಪರದಾಟ

| Published : Dec 22 2024, 01:31 AM IST

ಸಾರಾಂಶ

ರಾಜ್ಯ ಸರ್ಕಾರ ವಿವಿಧ ಉಚಿತ ಯೋಜನೆ ಘೋಷಿಸಿದ್ದು, ಅವುಗಳ ನಿರ್ವಹಣೆಗೆ ಪರದಾಡುತ್ತಿದೆ. ಸರ್ಕಾರದ ಆರ್ಥಿಕ ಪರಿಸ್ಥಿತಿ ಸರಿಯಾಗಿಲ್ಲ ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ರಾಜ್ಯ ಸರ್ಕಾರ ವಿವಿಧ ಉಚಿತ ಯೋಜನೆ ಘೋಷಿಸಿದ್ದು, ಅವುಗಳ ನಿರ್ವಹಣೆಗೆ ಪರದಾಡುತ್ತಿದೆ. ಸರ್ಕಾರದ ಆರ್ಥಿಕ ಪರಿಸ್ಥಿತಿ ಸರಿಯಾಗಿಲ್ಲ ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು.

ನಗರದಲ್ಲಿ ಶುಕ್ರವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ನಿಧಿಯಲ್ಲಿ ನಾಲ್ಕು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಆಯುರ್ವೇದಿಕ್ ಆಸ್ಪತ್ರೆ ಮೇಲ್ಮಹಡಿ, ಮೀನುಗಾರಿಕಾ ಇಲಾಖೆಯಲ್ಲಿ ತರಬೇತಿ ಕೊಠಡಿ, ಬನಶಂಕರಿ ದೇವಸ್ಥಾನದ ಹತ್ತಿರ ಸಮುದಾಯ ಭವನ ಹಾಗೂ ಅರಣ್ಯ ಇಲಾಖೆ ಒಂದು ವಸತಿಗೃಹ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು.ಸರ್ಕಾರ ಇನ್ನು ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕಿದೆ. ರಸ್ತೆಗಳು, ಶಾಲಾ ಕೊಠಡಿಗಳು ಹಾಗೂ ಕೃಷ್ಣ ಮೇಲ್ದಂಡೆ ಯೋಜನೆಯಂತಹ ವಿವಿಧ ಬೃಹತ್ ಕಾಮಗಾರಿಗಳಿಗೆ ಸರ್ಕಾರದ ಬಳಿ ಹಣವಿಲ್ಲ. ಜಮಖಂಡಿ ತಾಲೂಕಿನ 27 ಹಳ್ಳಿಗಳು ಕೃಷ್ಣ ಮೇಲ್ದಂಡೆ ಯೋಜನೆ ಹಿನ್ನೀರಿನಿಂದ ಬಾಧಿತವಾಗುತ್ತವೆ. ಅವುಗಳ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ನಗರ ಪ್ರದೇಶಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ ರಸ್ತೆಗಳನ್ನು ನಿರ್ಮಾಣ ಮಾಡಬೇಕಿದೆ. ಟೌನ್ ಪ್ಲ್ಯಾನಿಂಗ್ ಆಗಬೇಕಾಗಿದೆ. ಆದರೆ ಸರ್ಕಾರ ಮಾತ್ರ ಉಚಿತ ಯೋಜನೆಗಳ ಅನುಷ್ಠಾನಕ್ಕೆ ಪರದಾಡುವ ಸ್ಥಿತಿಯಲ್ಲಿದೆ ಎಂದು ದೂರಿದರು.ಬಿಜೆಪಿ ಮಾತ್ರವಲ್ಲದೆ ಆಡಳಿತ ಪಕ್ಷದ ಶಾಸಕರು ತಮ್ಮ ಪ್ರದೇಶಗಳ ಅಭಿವೃದ್ಧಿಯಾಗದೆ ತೊಂದರೆಗೆ ಸಿಲುಕ್ಕಿದ್ದಾರೆ. ಜಮಖಂಡಿಯಲ್ಲಿ 20000 ಜನ ಸಂಚಾರದಲ್ಲಿ ಇದ್ದ ರಸ್ತೆಗಳು ಹಾಗೇ ಮುಂದುವರೆದಿವೆ. ಈಗ ನಗರದಲ್ಲಿ ಒಂದು ಲಕ್ಷ ಹತ್ತು ಸಾವಿರ ಜನರಿದ್ದಾರೆ. ಜನ ದಟ್ಟನೆ ಹೆಚ್ಚಾಗಿದೆ ಅದಕ್ಕೆ ತಕ್ಕಂತೆ ಅಭಿವೃದ್ಧಿ ಗಳಾಗಬೇಕು ಎಂದರು.ಆಯುಷ್ ಇಲಾಖೆ, ಮೀನುಗಾರಿಕೆ, ಅರಣ್ಯ ಇಲಾಖೆ, ಪಿಡಬ್ಲ್ಯೂಡಿ ಅಧಿಕಾರಿಗಳು, ಗುತ್ತಿಗೆದಾರರಾದ ಮಹಾಲಿಂಗಪುರ್ ಮೇತ್ರಿ, ಮುಖಂಡರಾದ ಅರವಿಂದ್ ಗೌಡ ಪಾಟೀಲ್, ಗಣೇಶ್ ತಿರಗಣ್ಣವರ್, ರಮೇಶ್ ಆಳಬಾಳ, ವಿಶ್ವಾಸ್ ಪಾಟೀಲ್, ಶ್ರೀಧರ್ ಕಂಬಿ, ಗೀತಾ ಸೂರ್ಯವಂಶಿ, ಸಾವಿತ್ರಿ ಗೋರ್ನಾಳ್ ಮುಂತಾದವರು ಇದ್ದರು.