ರಾಜ್ಯದಲ್ಲಿರುವುದು ಷಂಡ ಸರ್ಕಾರ: ಸಂಸದ ಜಗದೀಶ ಶೆಟ್ಟರ್‌

| Published : Dec 22 2024, 01:31 AM IST

ರಾಜ್ಯದಲ್ಲಿರುವುದು ಷಂಡ ಸರ್ಕಾರ: ಸಂಸದ ಜಗದೀಶ ಶೆಟ್ಟರ್‌
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ ಸರ್ಕಾರ ತನ್ನ ಹಗರಣಗಳನ್ನು ಮುಚ್ಚಿ ಹಾಕಲು ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ ಪ್ರಕರಣವನ್ನು ವಿಷಯಾಂತರ ಮಾಡುತ್ತಿದೆ. ಇದರ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ 5 ವರ್ಷ ಆಡಳಿತ ಹೇಗೆ ಮಾಡಬೇಕು ಎಂಬ ಪ್ರಯತ್ನದಲ್ಲಿದ್ದಾರೆ.

ಹುಬ್ಬಳ್ಳಿ:

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಒಂದು ರೀತಿಯ ಷಂಡ ಸರ್ಕಾರ. ಇದರ ಕೈಯಲ್ಲಿ ಏನೇನೂ ಆಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ ಶೆಟ್ಟರ್ ತೀವ್ರ ವಾಗ್ದಾಳಿ ನಡೆಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಮಹಿಳೆಯರು, ಮಕ್ಕಳು ಸೇರಿದಂತೆ ಯಾರಿಗೂ ರಕ್ಷಣೆ ಇಲ್ಲದಂತಾಗಿದೆ. ಷಂಡ ಸರ್ಕಾರ ಎಂಬುದು ಅಸಂಸ್ಕೃತ ಪದ ಎಂದು ನನ್ನ ಮೇಲೆ ಪ್ರಕರಣ ದಾಖಲಿಸಲಿಸಿದರೂ ಪರವಾಗಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.

ಆಡಳಿತ ವ್ಯವಸ್ಥೆ ಕುಸಿದಿದೆ:

ಸರ್ಕಾರದ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಹೋಗಿದ್ದು, ರಾಜ್ಯದ ಗೃಹ ಸಚಿವರು ತಮ್ಮದೆಯಾದ ಹೇಳಿಕೆ ನೀಡುತ್ತಾ ಹೊರಟಿದ್ದಾರೆ ಎಂದ ಶೆಟ್ಟರ್‌, ಕಂದಾಯ ಇಲಾಖೆಯಲ್ಲಿ ಯಾವುದೇ ನೋಂದಣಿ ಕಾರ್ಯಗಳು ನಡೆಯುತ್ತಿಲ್ಲ. ರಾಜ್ಯದಲ್ಲಿ ಇ-ಸ್ವತ್ತು ಸಮಸ್ಯೆ ಇಂದಿಗೂ ಮುಂದುವರಿದಿದೆ. ಯಾವುದೇ ಇಲಾಖೆಗಳಲ್ಲಿ ಸಾರ್ವಜನಿಕರ ಕೆಲಸಗಳಾಗುತ್ತಿಲ್ಲ ಎಂದು ಆರೋಪಿಸಿದರು.

ವಿಷಯಾಂತರ:

ಕಾಂಗ್ರೆಸ್ ಸರ್ಕಾರ ತನ್ನ ಹಗರಣಗಳನ್ನು ಮುಚ್ಚಿ ಹಾಕಲು ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ ಪ್ರಕರಣವನ್ನು ವಿಷಯಾಂತರ ಮಾಡುತ್ತಿದೆ. ಇದರ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ 5 ವರ್ಷ ಆಡಳಿತ ಹೇಗೆ ಮಾಡಬೇಕು ಎಂಬ ಪ್ರಯತ್ನದಲ್ಲಿದ್ದಾರೆ. ಆದರೆ, ಅವರ ಸ್ಥಾನವನ್ನು ಹೇಗೆ ಕಸಿದುಕೊಳ್ಳಬೇಕು ಎಂಬ ಚಿಂತನೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಇದ್ದಾರೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ಸಿನವರಿಗೆ ವ್ಯವಧಾನವಿಲ್ಲ:

ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದೆ ಕಾಂಗ್ರೆಸ್ ಪಕ್ಷವಾಗಿದ್ದು, ಅವರ ಬಗ್ಗೆ ಕಾಂಗ್ರೆಸ್‌ ಯಾವಾಗಲೂ ಋಣಾತ್ಮಕವಾಗಿಯೇ ನಡೆದುಕೊಳ್ಳುತ್ತಾ ಬಂದಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಂಬೇಡ್ಕರ್ ಬಗ್ಗೆ ಹೇಳಿದ ಹೇಳಿಕೆಯನ್ನು ಸಂಪೂರ್ಣವಾಗಿ ಕೇಳುವ ವ್ಯವಧಾನ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರಿಗೆ ಇಲ್ಲದಂತಾಗಿದೆ. ಅರ್ಧಂಬರ್ಧ ಹೇಳಿಕೆ ಕೇಳಿ ಶಾ ಅವರ ವಿರುದ್ಧ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದರು.

ಸರ್ಕಾರಕ್ಕೆ ಮುಖಭಂಗ:

ಸಿ.ಟಿ. ರವಿ ಬಂಧನ ವಿಷಯದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶೆಟ್ಟರ್, ರಾಜ್ಯ ಸರ್ಕಾರದ ನಡೆಯನ್ನು ನಾವು ಖಂಡಿಸಿದ್ದೇವೆ. ಪ್ರಕರಣದ ಕುರಿತು ಈಗಾಗಲೇ ಕಾನೂನಾತ್ಮಕವಾಗಿ ಹೋರಾಟ ಮಾಡುತ್ತಿದ್ದೇವೆ. ಹೈಕೋರ್ಟ್ ಆದೇಶದಿಂದ ಸರ್ಕಾರಕ್ಕೆ ಮುಖಭಂಗ ಆದಂತಾಗಿದ್ದು, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಕೂಡಲೇ ಕ್ಷಮಾಪಣೆ ಕೇಳಬೇಕು ಎಂದು ಆಗ್ರಹಿಸಿದರು.