ರಾಣಿಬೆನ್ನೂರು: ನಗರದಲ್ಲಿ ಬುಧವಾರ ರಂಗಿನಾಟವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಬೆಳಗ್ಗೆಯಿಂದಲೆ ಚಿಣ್ಣರು ರಾಜೇಶ್ವರಿನಗರ, ಮೃತ್ಯುಂಜಯನಗರ, ಹೌಸಿಂಗ್ ಬೋರ್ಡ್ ಕಾಲನಿ, ಗೌರಿಶಂಕರನಗರ, ದೊಡ್ಡಪೇಟೆ, ಕುರುಬಗೇರಿ, ಮಾರುತಿನಗರ, ಕೋಟೆ ಮುಂತಾದ ಪ್ರದೇಶಗಳಲ್ಲಿ ಪರಸ್ಪರ ಬಣ್ಣ ಎರಚುವ ಮೂಲಕ ಹಬ್ಬ ಆರಂಭಿಸಿದರು. ಹತ್ತು ಗಂಟೆ ಆನಂತರ ಯುವಕರು, ವಯಸ್ಕರು ರಂಗಿನಾಟಕ್ಕೆ ಮುಂದಾದರು. ಹೌಸಿಂಗ್ ಬೋರ್ಡ್ ಕಾಲನಿ, ವೀರಭದ್ರೇಶ್ವರನಗರ, ದೊಡ್ಡಪೇಟೆ ಮುಂತಾದ ಪ್ರದೇಶಗಳಲ್ಲಿ ಯುವತಿಯರು, ಮಹಿಳೆಯರು ಕೂಡ ಹೆಚ್ಚಿನ ಉತ್ಸಾಹದಿಂದ ಬಣ್ಣದಾಟದಲ್ಲಿ ನಿರತರಾಗಿದ್ದರು.ಬೈಕ್ ಹೋಳಿ: ಯುವಕ-ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಬೈಕುಗಳ ಮೇಲೆ ತಿರುಗಾಡುತ್ತ ಹೋಳಿ ಆಚರಣೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲಲ್ಲಿ ಯುವಕರು ಹಲಗೆ ಬಾರಿಸುತ್ತಾ ಪರಸ್ಪರ ಬಣ್ಣ ಎರಚುತ್ತಾ ಸಂಭ್ರಮಿಸಿದರು.
ಗಮನ ಸೆಳೆದ ರೇನ್ ಡ್ಯಾನ್ಸ್: ನಗರದ ದೊಡ್ಡಪೇಟೆ ಹಾಗೂ ಉಮಾಶಂಕರ ನಗರ ಪ್ರದೇಶದಲ್ಲಿ ಬಣ್ಣದಾಟದಲ್ಲಿ ನಿರತರಾದವರಿಗಾಗಿ ಡಿಜೆ ಸಮೇತ ರೇನ್ ಡ್ಯಾನ್ಸ್ ವ್ಯವಸ್ಥೆ ಮಾಡಲಾಗಿತ್ತು. ನಗರದ ವಿವಿಧ ಭಾಗಗಳ ಜನರು (ವಿಶೇಷವಾಗಿ ಯುವ ಜನತೆ) ರೇನ್ ಡ್ಯಾನ್ಸ್‌ನಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು.ಶಾಸಕ, ಮಾಜಿ ಶಾಸಕರಿಂದ ಹೋಳಿ ಆಚರಣೆ: ಶಾಸಕ ಪ್ರಕಾಶ ಕೋಳಿವಾಡ ಬೆಳಗ್ಗೆಯಿಂದಲೇ ಬೈಕ್‌ನಲ್ಲಿ ನಗರದ ವಿವಿಧ ಪ್ರದೇಶಗಳಿಗೆ ತೆರಳಿ ಹೋಳಿ ಹಬ್ಬದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು. ಇದೇ ರೀತಿ ಮಾಜಿ ಶಾಸಕ ಅರುಣಕುಮಾರ ಪೂಜಾರ ಕೂಡ ನಗರದಲ್ಲಿ ವಿವಿಧ ಕಡೆಗಳಲ್ಲಿ ಸಂಚರಿಸಿದ ರಂಗಿನಾಟದಲ್ಲಿ ಪಾಲ್ಗೊಂಡಿದ್ದರು.
ಸಂಪ್ರದಾಯದಂತೆ ಮೆರವಣಿಗೆಯಲ್ಲಿ ಹರಿಜನಕೇರಿಯಿಂದ ಬೆಂಕಿ ತಂದ ಆನಂತರ ನಗರದ ವಿವಿಧೆಡೆ ಪ್ರತಿಷ್ಠಾಪಿಸಲಾಗಿದ್ದ ಕಾಮಣ್ಣ ಮೂರ್ತಿಗಳನ್ನು ದಹಿಸಲಾಯಿತು. ದುರ್ಗಾ ಸರ್ಕಲ್ ಬಳಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಸೇರಿದಂತೆ ವಿವಿಧ ಹಿಂದೂಪರ ಸಂಘಟನೆಗಳು ಪ್ರತಿಷ್ಠಾಪಿಸಿದ್ದ ಕಾಮನ ಪ್ರತಿಕೃತಿಗೆ ಮಧ್ಯಾಹ್ನ 2 ಗಂಟೆ ಸುಮಾರು ಬೆಂಕಿ ಹಚ್ಚಲಾಯಿತು. ಆನಂತರ ನಗರದ ವಿವಿಧ ಭಾಗಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಕಾಮನ ಮೂರ್ತಿಗೆ ಬೆಂಕಿ ಹಚ್ಚುವ ಮೂಲಕ ಬಣ್ಣದಾಟಕ್ಕೆ ತೆರೆ ಎಳೆಯಲಾಯಿತು.
ಬಿಗಿ ಪೊಲೀಸ್ ಬಂದೋಬಸ್ತ್: ಹೋಳಿ ಸಂದರ್ಭದಲ್ಲಿ ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.