ಆಸ್ಪತ್ರೆಯ ಕಾಮಗಾರಿಗೆ ಅನುದಾನವಿಲ್ಲ ಎಂಬ ಹೇಳಿಕೆ ಹಾಸ್ಯಸ್ಪದ: ಪ್ರಸನ್ನ ಶೆಟ್ಟಿ

| Published : Dec 31 2024, 01:02 AM IST

ಸಾರಾಂಶ

ಆಸ್ಪತ್ರೆ ಕಾಮಗಾರಿಗೆ ಅನುದಾನವಿಲ್ಲದಿದ್ದರೆ ಆಸ್ಪತ್ರೆಯ ಕಟ್ಟಡ ಭಾಗಶಃ ಅಂತಿಮ ಹಂತಕ್ಕೆ ತಲುಪುತಿತ್ತೇ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಜಿಲ್ಲಾಧ್ಯಕ್ಷ ಪ್ರಸನ್ನ ಶೆಟ್ಟಿ ತಿರುಗೇಟು ನೀಡಿದ್ದಾರೆ.

ಶಿರಸಿ: ಅನಂತಮೂರ್ತಿ ಹೆಗಡೆ ವೀರಾವೇಶದಿಂದ ಆಸ್ಪತ್ರೆಯ ಕಾಮಗಾರಿಗೆ ಅನುದಾನವಿಲ್ಲ ಎಂದು ನೀಡಿರುವ ಹೇಳಿಕೆ ಹಾಸ್ಯಾಸ್ಪದಿಂದ ಕೂಡಿದೆ. ಆಸ್ಪತ್ರೆ ಕಾಮಗಾರಿಗೆ ಅನುದಾನವಿಲ್ಲದಿದ್ದರೆ ಆಸ್ಪತ್ರೆಯ ಕಟ್ಟಡ ಭಾಗಶಃ ಅಂತಿಮ ಹಂತಕ್ಕೆ ತಲುಪುತಿತ್ತೇ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಜಿಲ್ಲಾಧ್ಯಕ್ಷ ಪ್ರಸನ್ನ ಶೆಟ್ಟಿ ತಿರುಗೇಟು ನೀಡಿದ್ದಾರೆ.

ಅವರು ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿ, ಆಸ್ಪತ್ರೆಯ ಕಟ್ಟಡದ ಕಾಮಗಾರಿಗೆ ಅನುದಾನವಿಲ್ಲ, ಹಣವಿಲ್ಲ ಎಂದು ಸಂಬಂಧ ಪಟ್ಟ ಇಲಾಖೆಯವರಾಗಲಿ ಅಥವಾ ಗುತ್ತಿಗೆದಾರರಾಗಲಿ ಮಾಹಿತಿ ನೀಡಿದ್ದರೆ ಅದರ ಅಧಿಕೃತ ದಾಖಲೆಗಳನ್ನು ಬಿಡುಗಡೆ ಮಾಡಲಿ. ತಾವು ಸದಾ ಪ್ರಚಾರದಲ್ಲಿರಲು, ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ಸದಾ ತಮ್ಮ ಫೋಟೋ ಓಡಾಡಲು ಜನಪ್ರಿಯ ನಾಯಕರುಗಳನ್ನು ಟಾರ್ಗೆಟ್ ಮಾಡಿ ಅಪಪ್ರಚಾರ ಮಾಡುವುದು ನಾಗರಿಕ ಸಮಾಜದಲ್ಲಿ ಶೋಭೆ ತರುವ ಸಂಗತಿಯಲ್ಲ. ತಮಗೆ ರಾಜಕಾರಣ ಮಾಡಲೇ ಬೇಕೆಂಬ ಉದ್ದೇಶವಿದ್ದಲ್ಲಿ ಜವಾಬ್ದಾರಿಯುತ ವಿರೋಧ ಪಕ್ಷದಲ್ಲಿದ್ದು ನೈಜ ಸಂಗತಿಗಳ ಮೇಲೆ ಬೆಳಕು ಚೆಲ್ಲಿ ತಮ್ಮ ಗೌರವವನ್ನು ಹೆಚ್ಚಿಸಿಕೊಳ್ಳಬೇಕೆ ವಿನಃ ವಿನಾಕಾರಣ ಆರೋಪ ಮಾಡುವುದೇ ಕಾಯಕ ಮಾಡಿಕೊಳ್ಳಬಾರದು. ಶಾಸಕ ಭೀಮಣ್ಣ ನಾಯ್ಕ ಕ್ಷೇತ್ರಕ್ಕೆ ತಂದ ಅನುದಾನಗಳ ಬಗ್ಗೆ ತಾವೇ ಖುದ್ದು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಜೊತೆಗೆ ಹಿಂದಿನ ಸರ್ಕಾರದಲ್ಲಿ ಮಂಜೂರಾದ ಯಾವುದೇ ಕಾಮಗಾರಿಗಳಿಗೆ ಅನುದಾನ ಕೊರತೆ ಮಾಡದೆ ಎಲ್ಲ ಕೆಲಸಗಳನ್ನು ಪರಿಪೂರ್ಣ ಮಾಡುತ್ತಿದ್ದಾರೆ. ಕೇವಲ ರಾಜಕಾರಣ ಒಂದೇ ಮಾನದಂಡ ಮಾಡಿಕೊಂಡು ಕ್ಷೇತ್ರದ ಶಾಸಕರ ಉತ್ತಮ ಕಾರ್ಯ ಮರೆ ಮಾಚಿಸಲು ಆರೋಪಗಳನ್ನೇ ಮೈಗೂಡಿಸಿಕೊಂಡು ನಡೆದರೆ ಯಶಸ್ಸು ದೊರಕದು ಎಂಬುದನ್ನು ಅನಂತ್ ಮೂರ್ತಿ ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

ನೂರಾರು ಸುಳ್ಳು ಆರೋಪಗಳನ್ನು ಮೆಟ್ಟಿ ಭೀಮಣ್ಣ ನಾಯ್ಕ್ ಅವರನ್ನು ಕ್ಷೇತ್ರದ ಮತದಾರರು ಆಯ್ಕೆ ಮಾಡಿದ್ದಾರೆ. ಆ ಮತದಾರರ ಒಂದೊಂದು ಮತಕ್ಕೂ ಸಹ ಶಾಸಕರು ತಮ್ಮ ಕೆಲಸದ ಮೂಲಕ ಅಭಿನಂದನೆ ಸಲ್ಲಿಸುತ್ತಿದ್ದಾರೆ. ತಮ್ಮದೆ ಕೇಂದ್ರ ಸರ್ಕಾರವು ಘೋಷಣೆ ಮಾಡಿದ ಎಷ್ಟೋ ಕಾರ್ಯಕ್ರಮಗಳ್ಳು ಇನ್ನು ಶಂಕುಸ್ಥಾಪನೆಯೇ ಆಗಿಲ್ಲ. ಅವುಗಳೆಲ್ಲ ಅನಂತಮೂರ್ತಿಯವರ ಕಣ್ಣಿಗೆ ಕಾಣದಿರುವುದು ಬಹಳ ದುಃಖಕರ ಸಂಗತಿ. ಮೊದಲು ತಮ್ಮ ಸಂಸದರಿಗೆ ಮನವಿ ನೀಡಿ ರೈಲ್ವೆ ಯೋಜನೆ, ಶಿರಸಿ ಹಾವೇರಿ ಹೆದ್ದಾರಿ ಕಾಮಗಾರಿ ಮತ್ತು ಅಂಕೋಲಾದಲ್ಲಿ ಮಾಡಬೇಕಿರುವ ವಿಮಾನ ನಿಲ್ದಾಣ ಹಾಗೂ ಹಿಂದಿನ ಸಂಸದರು ಹೇಳಿದ ಯಾಣದಲ್ಲಿ ರೋಪ್ ವೇ ನಿರ್ಮಾಣ ಇವುಗಳ ಬಗ್ಗೆ ಗಮನಹರಿಸಲು ಮನವಿ ನೀಡಿ, ಅಗತ್ಯವಿದ್ದರೆ ನಮ್ಮ ಪಕ್ಷದ ಕಾರ್ಯಕರ್ತರು ಸಂಸದರಿಗೆ ಮನವಿ ನೀಡಲು ಸಹಕರಿಸುತ್ತೇವೆ ಎಂದು ಸವಾಲು ಹಾಕಿದ್ದಾರೆ.