ರಾಮ-ಸೀತೆಯರ ಅನ್ನೋನ್ಯತೆಗೆ ಮೂರ್ತ ರೂಪ ಕೊಟ್ಟ ಕುವೆಂಪು

| Published : Dec 31 2024, 01:02 AM IST

ಸಾರಾಂಶ

ರಾಮ-ಸೀತೆಯರ ಅನ್ನೋನ್ಯತೆಯನ್ನು ಸಮರ್ಪಕವಾಗಿ ಗ್ರಹಿಸಿ ಅದಕ್ಕೆ ಮೂರ್ತ ರೂಪವನ್ನು ಕೊಟ್ಟವರು ಕುವೆಂಪು ಎಂದು ಧಾರವಾಡದ ಹಿರಿಯ ಸಾಹಿತಿ ಡಾ.ಶ್ರೀಧರ್ ಹೆಗಡೆ ಭದ್ರನ್ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ರಾಮ-ಸೀತೆಯರ ಅನ್ನೋನ್ಯತೆಯನ್ನು ಸಮರ್ಪಕವಾಗಿ ಗ್ರಹಿಸಿ ಅದಕ್ಕೆ ಮೂರ್ತ ರೂಪವನ್ನು ಕೊಟ್ಟವರು ಕುವೆಂಪು ಎಂದು ಧಾರವಾಡದ ಹಿರಿಯ ಸಾಹಿತಿ ಡಾ.ಶ್ರೀಧರ್ ಹೆಗಡೆ ಭದ್ರನ್ ಹೇಳಿದರು.

ಬಾಗಲಕೋಟೆಯ ಶಿವಾನುಭವ ಸಮಿತಿ ಹಾಗೂ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಚರಂತಿಮಠ ಸಹಯೋಗದಲ್ಲಿ ಆಯೋಜಿಸಿದ್ದ ಜ್ಞಾನಪೀಠ ಪುರಸ್ಕೃತ ಸಾಹಿತ್ಯ ಸಂವಾದದ ಪ್ರಥಮ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುವೆಂಪು ಅವರ ಕಾವ್ಯವು ದೈವೀ ಸತ್ಯದ ವಾಹಕವೆಂಬ ಈ ಕಲ್ಪನೆ, ಚಿರಪರಿಚಿತವಾದ ರಾಮಕಥೆಯನ್ನು ಅವರು ತಮ್ಮ ಮಹಾಕಾವ್ಯದ ವಸ್ತುವನ್ನಾಗಿ ಆರಿಸಿಕೊಂಡಿದ್ದಾರೆ. ಅವರ ಪಾಲಿಗೆ ರಾಮಾಯಣ ಒಬ್ಬ ವ್ಯಕ್ತಿಯ ಜೀವನ ಚರಿತ್ರೆಯಲ್ಲ. ಅದು ಭೌತವಲಯದಿಂದ ಅತೀತ ಸಾಮರಸ್ಯ ಆನಂದಗಳ ಪ್ರಾಂತಕ್ಕೆ ಆತ್ಮ ಕೈಗೊಂಡ ಯಾತ್ರೆಯ ಸಾಂಕೇತಿಕ ವಿವರಣೆ ಎಂದರು. ಬಹುಶಃ ರಾಮ-ಸೀತೆಯರ ಅನ್ನೋನ್ಯತೆಯನ್ನು ಸಮರ್ಪಕವಾಗಿ ಗ್ರಹಿಸಿ ಅದಕ್ಕೆ ಮೂರ್ತ ರೂಪವನ್ನು ಕೊಟ್ಟವರು ಕುವೆಂಪು. ಗಂಡು-ಹೆಣ್ಣಿನ ಪ್ರೇಮ-ಅನುರಾಗಗಳನ್ನು ಕುವೆಂಪು ಅವರಷ್ಟು ಆಪ್ತ ಮತ್ತು ಅನುಭಾವಿಕ ನೆಲೆಯಲ್ಲಿ ಕಟ್ಟಿ ಕೊಟ್ಟವರು ಇಲ್ಲವೆಂದೇ ನನ್ನ ಭಾವನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಚರಂತಿಮಠದ ಪ್ರಭುಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ರಮೇಶ ಬುಳ್ಳಾ ಅವರ ವಿಜ್ಞಾನ ಯಾನ ಎಂಬ ಕೃತಿಯನ್ನು ಹುನಗುಂದದ ಕ್ಷೇತ್ರ ಶಿಕ್ಷಣಾಧಿಕಾರಿ ಜಸ್ಮಿನ್ನ ಕಿಲ್ಲಾದಾರ್ ಬಿಡುಗಡೆ ಮಾಡಿ ಕೃತಿ ಪರಿಚಯಿಸಿದರು. ಪ್ರಾಸ್ತಾವಿಕವಾಗಿ ಬಿವವಿ ಸಂಘದ ಆಡಳಿತ ಅಧಿಕಾರಿ ಡಾ.ವಿಜಯಕುಮಾರ್ ಕಟ್ಟಿಗಿಹಳ್ಳಿಮಠ ಮಾತನಾಡಿದರು. ಡಾ.ಎಂ.ನಂಜುಂಡಸ್ವಾಮಿ ಸ್ವಾಗತಿಸಿದರು. ಎಚ್.ಡಿ.ಕೆಂಗಲಗುತ್ತಿ ಪರಿಚಯಿಸಿದರು. ಡಾ.ಬಸವರಾಜ ವೀ.ಖೋತ ವಂದಿಸಿದರು. ಡಾ.ಐ.ಕೆ.ಮಠದ ಕಾರ್ಯಕ್ರಮ ನಿರೂಪಿಸಿದರು.