ವಿದ್ಯಾರ್ಥಿಗಳಿಗೂ ತಟ್ಟಿದ ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರ

| Published : Feb 15 2025, 12:33 AM IST

ವಿದ್ಯಾರ್ಥಿಗಳಿಗೂ ತಟ್ಟಿದ ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ನಡೆಯುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರ ಐದನೇ ದಿನಕ್ಕೆ ಕಾಲಿಟ್ಟಿದೆ. ಅದರಲ್ಲೂ ಕಾರ್ಕಳ ಹಾಗೂ ಹೆಬ್ರಿ ತಾಲೂಕು ವ್ಯಾಪ್ತಿಯಲ್ಲಿ ಸರ್ಕಾರಿ ಸೇವೆಗಳಲ್ಲಿ ಭಾರಿ ವ್ಯತ್ಯಯವಾಗುತ್ತಿದ್ದು, ಸಾರ್ವಜನಿಕರು, ವಿದ್ಯಾರ್ಥಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ರಾಂ ಅಜೆಕಾರುಕನ್ನಡಪ್ರಭ ವಾರ್ತೆ ಕಾರ್ಕಳ

ರಾಜ್ಯದಲ್ಲಿ ನಡೆಯುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರ ಐದನೇ ದಿನಕ್ಕೆ ಕಾಲಿಟ್ಟಿದೆ. ಅದರಲ್ಲೂ ಕಾರ್ಕಳ ಹಾಗೂ ಹೆಬ್ರಿ ತಾಲೂಕು ವ್ಯಾಪ್ತಿಯಲ್ಲಿ ಸರ್ಕಾರಿ ಸೇವೆಗಳಲ್ಲಿ ಭಾರಿ ವ್ಯತ್ಯಯವಾಗುತ್ತಿದ್ದು, ಸಾರ್ವಜನಿಕರು, ವಿದ್ಯಾರ್ಥಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ವಿದ್ಯಾರ್ಥಿಗಳಿಗೂ ತೊಂದರೆ:

ಗ್ರಾಮಾಧಿಕಾರಿಗಳ ಪ್ರತಿಭಟನೆಯಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಭಾರಿ ತೊಂದರೆಯುಂಟಾಗಿದೆ. ಸಿಇಟಿ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಜಾತಿ, ಆದಾಯ ಪ್ರಮಾಣ ಪತ್ರಕ್ಕಾಗಿ ಗ್ರಾಮಾಡಳಿತ ಅಧಿಕಾರಿಗಳ ಮೂಲಕವೇ ತಹಸೀಲ್ದಾರ್ ಕಚೇರಿಯನ್ನು ತಲುಪಬೇಕಾಗಿದೆ. ಫೆ.18 ಕೊನೆಯ ದಿನವಾಗಿದ್ದರಿಂದ ವಿದ್ಯಾರ್ಥಿಗಳು ಆತಂಕದಲ್ಲಿದ್ದಾರೆ.

ಇನ್ನೊಂದೆಡೆ ಸಾರ್ವಜನಿಕರಿಗೆ ಪೆನ್ಷನ್ ಅರ್ಜಿಗಳು, ಭೂ ಪರಿವರ್ತನೆ, 94ಸಿ ಅರ್ಜಿಗಳು, ಬಗರ್ ಹುಕುಂ, ಖಾತ ಬದಲಾವಣೆಗಳು, ಆರ್‌ಟಿಸಿ ಸೇರಿದಂತೆ ಸಕಾಲ ಸೇವೆಗಳು ಸಾರ್ವಜನಿಕರಿಗೆ ಸಿಗುತ್ತಿಲ್ಲ. ಇದರಿಂದಾಗಿ ತಾಲೂಕು ಕಚೇರಿಗಳಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕಾರ್ಕಳ ತಾಲೂಕಿನಲ್ಲಿ ಒಟ್ಟು 39 ಕಂದಾಯ ಗ್ರಾಮಗಳಿದ್ದು, ಅದರಲ್ಲಿ 32 ಗ್ರಾಮ ವೃತ್ತಗಳಿವೆ. ಅದರಲ್ಲಿ ತಾಲೂಕು ಕಚೇರಿ ಹಾಗೂ ಗ್ರಾಮಗಳು ಸೇರಿದಂತೆ ಒಟ್ಟು 25 ಗ್ರಾಮ ಆಡಳಿತ ಅಧಿಕಾರಿಗಳು ಕರ್ತವ್ಯ ಸಲ್ಲಿಸುತ್ತಿದ್ದಾರೆ. ಹೆಬ್ರಿ ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 16 ಕಂದಾಯ ಗ್ರಾಮಗಳಿದ್ದು, 9 ಗ್ರಾಮ ವೃತ್ತಗಳಿವೆ. ಅದರಲ್ಲಿ ತಾಲೂಕು ಕಚೇರಿ ಹಾಗೂ ಗ್ರಾಮ ಮಟ್ಟದಲ್ಲಿ ಒಟ್ಟು 7 ಜನ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಒತ್ತಡದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು:

ಹೆಬ್ರಿ ತಾಲೂಕಿನಲ್ಲಿ ಒಟ್ಟು 9 ಗ್ರಾಮ ವೃತ್ತಗಳಿದ್ದು, ಅದರಲ್ಲಿ ತಾಲೂಕು ಕಚೇರಿಯಲ್ಲಿ 5 ಜನ ಕರ್ತವ್ಯ ನಿರ್ವಹಿಸುತ್ತಿದ್ದು, 4 ಜನ ಗ್ರಾಮ ವೃತ್ತಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅದರಲ್ಲೂ 5 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳು ಖಾಲಿ ಇದೆ. 4 ಜನ ಆಡಳಿತ ಅಧಿಕಾರಿಗಳೇ ಎರಡು ವೃತ್ತಗಳ ಕಾರ್ಯವನ್ನು ನಿರ್ವಹಿಸುವ ಒತ್ತಡಗಳ ಅನಿವಾರ್ಯತೆಯಿದೆ.

ಕಾರ್ಕಳ ತಾಲೂಕಿನಲ್ಲಿ 32 ಗ್ರಾಮ ವೃತ್ತಗಳಿದ್ದು, 25 ಜನ ಗ್ರಾಮ ಆಡಳಿತ ಅಧಿಕಾರಿಗಳಿದ್ದಾರೆ. ಅದರಲ್ಲಿ 19 ಗ್ರಾಮ ಆಡಳಿತ ಅಧಿಕಾರಿಗಳು ಗ್ರಾಮಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 6 ಆಡಳಿತ ಅಧಿಕಾರಿಗಳು ತಾಲೂಕು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತಿದ್ದಾರೆ. ಅದರಲ್ಲೂ 13 ಆಡಳಿತ ಅಧಿಕಾರಿ ಹುದ್ದೆಗಳು ‌ಖಾಲಿಯಿದ್ದು, ಪ್ರತಿ ಎರಡು ವೃತ್ತಗಳ ಕಾರ್ಯವನ್ನು ಒಬ್ಬರೇ ನಿಭಾಯಿಸಬೇಕು. ವಾರದಲ್ಲಿ 5 ದಿನ ಎರಡು ವೃತ್ತಗಳಲ್ಲಿ ಹಾಗೂ ಒಂದು ದಿನ ತಾಲೂಕು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಒತ್ತಡದಲ್ಲಿ ಸಿಲುಕಿದ್ದಾರೆ. ಅದಲ್ಲದೇ ಆಧಾರ್ ಸೀಡಿಂ, ಬೆಳೆ ಸಮೀಕ್ಷೆ ಎಲ್ಲ ಸಂದರ್ಭಗಳಲ್ಲಿ ಅಧಿಕಾರಿಗಳು ಮನೆಗೆ ತೆರಳಿ ಪರಿಶೀಲನೆ ನಡೆಸಬೇಕು.

................

ಕಾರ್ಕಳ ತಾಲೂಕೊಂದರಲ್ಲೇ 13 ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಗಳು ಖಾಲಿ ಇವೆ. ವಾರದಲ್ಲಿ ಎರಡು ಗ್ರಾಮ ವೃತ್ತಗಳು ಹಾಗೂ ತಾಲೂಕು ಕಚೇರಿಯಲ್ಲಿ ಸೇವೆ ಸಲ್ಲಿಸುವ ಒತ್ತಡಗಳಿವೆ. ಖಾಲಿ ಇರುವ ಹುದ್ದೆಗಳನ್ನು ಬೇಗ ನೇಮಕ ಮಾಡಲಿ. ಕರ್ತವ್ಯದ ಒತ್ತಡಗಳಿಂದ ಸಕಾಲದಲ್ಲಿ ಸಾರ್ವಜನಿಕರಿಗೆ ಸೇವೆ ನೀಡಲು ತುಂಬಾ ತೊಂದರೆಯುಂಟಾಗುತ್ತಿದೆ. ಸರ್ಕಾರ ಆದಷ್ಟು ಬೇಗ ನಮ್ಮ ಪ್ರತಿಭಟನೆ ಸ್ಪಂದಿಸಿ ಬೇಡಿಕೆ ಈಡೇರಿಸಬೇಕು.

। ಆದರ್ಶ ಶೆಟ್ಟಿ, ಪ್ರಧಾನ ಕಾರ್ಯದರ್ಶಿ, ಕಾರ್ಕಳ ಗ್ರಾ ಮ ಆಡಳಿತ ಆಧಿಕಾರಿಗಳ ಸಂಘ.

-------------------ದ್ವಿತೀಯ ಪಿಯುಸಿ ಕಲಿಯುತ್ತಿದ್ದು, ಜಾತಿ, ಆದಾಯ ಪ್ರಮಾಣ ಪತ್ರ ಅವಶ್ಯಕತೆಯಿದೆ. ಫೆ.18ರಂದು ಸಿಇಟಿ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಈಗಾಗಲೇ ಜಾತಿ, ಆದಾಯ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದ್ದು, ಇನ್ನೂ ತಲುಪಿಲ್ಲ.

। ರೇಷ್ಮಾ ಸಾಣೂರು, ದ್ವಿತೀಯ ಪಿಯುಸಿ ವಿದ್ಯಾರ್ಥಿನಿ

----------------

ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ತಾಲೂಕು ಮಟ್ಟದಲ್ಲಿ ಸಹಾಯವಾಣಿ ಆರಂಭಿಸಲಾಗಿದೆ. ಸ್ವೀಕೃತ ಕರೆಗಳಿಗೆ ಕೂಡಲೇ ಸ್ಪಂದಿಸಿ ಕ್ರಮವಹಿಸಲಾಗುವುದು. ಯಾವುದೇ ವಿದ್ಯಾರ್ಥಿಗಳು ಹಾಗೂ ಪೋಷಕರು ಆತಂಕ ಪಡುವ ಅಗತ್ಯವಿಲ್ಲ.। ಡಾ. ವಿದ್ಯಾ ಕುಮಾರಿ, ಉಡುಪಿ ಜಿಲ್ಲಾಧಿಕಾರಿ