ಸಾರಾಂಶ
ಲಕ್ಷ್ಮೇಶ್ವರ: ತಾಲೂಕಿನ ಯತ್ತಿನಹಳ್ಳಿ ಗ್ರಾಮದ ಅಂಬೇಡ್ಕರ್ ಓಣಿಯಲ್ಲಿ ಶೌಚಾಲಯ ನಿರ್ಮಿಸಲು ಯೋಜಿಸಿರುವ ಸ್ಥಳದ ಕುರಿತು ವಾದ ವಿವಾದ ನಡೆದು, ಕೊನೆಗೆ ಮಾತುಕತೆಯಲ್ಲಿ ಬಗೆಹರಿದ ಘಟನೆ ಶುಕ್ರವಾರ ನಡೆಯಿತು.
ಘಟನೆಯ ವಿವರಸಮೀಪದ ಮಾಡಳ್ಳಿ ಗ್ರಾಪಂ ವ್ಯಾಪ್ತಿಯ ಯತ್ತಿನಹಳ್ಳಿ ಗ್ರಾಮದ ಅಂಬೇಡ್ಕರ್ ಓಣಿಯಲ್ಲಿ ಸರ್ಕಾರ ಆಧುನಿಕ ರೀತಿಯ ಸಾಮೂಹಿಕ ಶೌಚಾಲಯ ನಿರ್ಮಿಸಲು ಯೋಜನೆ ರೂಪಿಸಿ, ಅದರಂತೆ ಗ್ರಾಮದ ಅಂಬೇಡ್ಕರ್ ಓಣಿಯಲ್ಲಿನ ಆಶ್ರಯ ಕಾಲೋನಿಯಲ್ಲಿ ಸಾರ್ವಜನಿಕರ ಉಪಯೋಗಕ್ಕೆ ಬಿಟ್ಟ ಸರ್ಕಾರಿ ಜಾಗೆಯಲ್ಲಿ ಶುಕ್ರವಾರ ಕಟ್ಟಡ ನಿರ್ಮಿಸಲು ತಳಪಾಯಕ್ಕೆ ಗುಂಡಿ ಅಗಿಯುತ್ತಿರುವ ವೇಳೆ ಸಾರ್ವಜನಿಕರು ತಕರಾರು ತೆಗೆದು. ಇಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ ಬೇಡ, ಬೇರೆ ಸ್ಥಳದಲ್ಲಿ ಶೌಚಾಲಯ ನಿರ್ಮಿಸುವಂತೆ ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು. ಇಲ್ಲಿ ಶೌಚಾಲಯ ನಿರ್ಮಾಣದಿಂದ ದುರ್ನಾತ ಬೀರಲು ಆರಂಭಿಸುತ್ತದೆ. ಮೊದಲೇ ಇಲ್ಲಿ ಮಳೆ ನೀರು ಹಾಗೂ ಚರಂಡಿ ನೀರು ಹೊರ ಹೋಗಲು ಜಾಗೆ ಇಲ್ಲದೆ ಕೊಚೆಯ ನಿರ್ಮಾಣವಾಗಿದೆ. ಇದು ರೋಗ ರುಜಿನಗಳ ತಾಣವಾಗುತ್ತಿರುವ ಭಯವಿದೆ. ಇಂತಹ ಸ್ಥಳದಲ್ಲಿ ಶೌಚಾಲಯ ನಿರ್ಮಿಸುವುದರಿಂದ ಇಲ್ಲಿನ ವಾತಾವರಣ ಮತ್ತಷ್ಟು ಹಾಳಾಗಿ ಹೋಗುತ್ತದೆ, ಆದ್ದರಿಂದ ಇಲ್ಲಿ ಶೌಚಾಲಯ ನಿರ್ಮಿಸಲು ನಮ್ಮದು ತಕರಾರು ಇರುತ್ತದೆ ಎಂದು ಸಾರ್ವಜನಿಕರು ಜೆಸಿಬಿ ತಡೆದು ಪ್ರತಿಭಟಿಸಿದರು. ಇದರಿಂದ ಅಂಬೇಡ್ಕರ್ ಒಣಿಯ ಆಶ್ರಯ ಕಾಲೋನಿಯು ಕೆಲ ಹೊತ್ತು ಗೊಂದಲದ ಗೂಡಾಗಿ ಪರಿಣಮಿಸಿತ್ತು.
ಈ ವಿಷಯ ತಿಳಿದು ತಾಪಂ ಇಓ ಕೃಷ್ಣಪ್ಪ ಧರ್ಮರ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಗೋಪಾಲ ನಾಯ್ಕ, ಪಿಡಿಓ ಮಂಜುನಾಥ ಮಲ್ಲೂರ ಅವರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದ ಘಟನ ನಡೆಯಿತು.ಈ ವೇಳೆ ಸ್ಥಳಕ್ಕೆ ಗ್ರಾಪಂ ಅಧ್ಯಕ್ಷ ಹನಮರೆಡ್ಡಿ ಸಣ್ಣಹೊಂಬಳ, ಚನ್ನವೀರಪ್ಪ ಬೆಟದೂರ, ಫಕ್ಕೀರಗೌಡ ಸಂಕನಗೌಡರ, ಸಿಪಿಐ ನಾಗರಾಜ ಮಾಡಳ್ಳಿ, ಪಿಎಸ್‌ಐ ಮತ್ತು ಗ್ರಾಮದ ಗಣ್ಯರು ಕೂಡಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಭೆ ಸೇರಿ ಮಾತುಕತೆ ನಡೆಸಿದರು. ಈ ವೇಳೆ ಸಾರ್ವಜನಿಕರಲ್ಲಿ ಉಂಟಾದ ಸಂಶಯ ಬಗೆಹರಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿ ವೈಜ್ಞಾನಿಕ ಹಾಗೂ ದುರ್ನಾತ ಬೀರದ ರೀತಿಯ ಶೌಚಾಲಯ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದ್ದರಿಂದ ಸಮಸ್ಯೆ ಬಗೆಹರಿಸಿದ್ದು ಕಂಡು ಬಂದಿತು.
ಶೌಚಾಲಯ ನಿರ್ಮಾಣದ ವಿಷಯದಲ್ಲಿ ಅಧಿಕಾರಿಗಳು ಹಾಗೂ ಸಾರ್ವಜನಿಕರ ಮಧ್ಯೆ ಉಂಟಾದ ಗೊಂದಲದ ವಾತಾವರಣದಿಂದ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಸ್ಥಿತಿ ತಿಳಿಗೊಳಿಸಿದರು. ನಂತರ ಪೊಲೀಸರ ಸರ್ಪ ಕಾವಲಿನಲ್ಲಿ ಶೌಚಾಲಯದ ತಳಪಾಯಕ್ಕೆ ಗುಂಡಿ ತೆಗೆಯಲು ಕಾರ್ಯ ಆರಂಭಗೊಂಡಿದ್ದು ಕಂಡು ಬಂದಿತು.