ಸಾರಾಂಶ
ಬ್ಯಾಡಗಿ: ಭಾರತೀಯ ಸಂಸ್ಕೃತಿಯಲ್ಲಿ ಗುರು ಹಾಗೂ ದೇವರಿಗೆ ವಿಶೇಷ ಸ್ಥಾನದ ಮೂಲಕ ದೈವತ್ವ ನಂಬಲಾಗಿದೆ. ಸನಾತನ ಕಾಲದಿಂದಲೂ ಆಚರಣೆ, ಸಂಸ್ಕಾರಗಳು ನೆಮ್ಮದಿ ಒದಗಿಸಿವೆ. ಹೀಗಾಗಿ ಧಾರ್ಮಿಕ ಸಂಸ್ಕೃತಿಗಳನ್ನು ನಂಬಿ ಬದುಕಿದ್ದೇವೆ ಎಂದು ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ಅಭಿಪ್ರಾಯಪಟ್ಟರು.
ಶುಕ್ರವಾರ ತಾಲೂಕಿನ ಹಳೇ ಶಿಡೇನೂರ ಗ್ರಾಮದಲ್ಲಿ ರಮೇಶ ಸುತ್ತಕೋಟಿ ಬಂಧುಗಳ ಆಶ್ರಯದಲ್ಲಿ ನಡೆದ ದುರ್ಗಾದೇವಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಸಾವಿರಾರು ವರ್ಷಗಳಿಂದ ಗ್ರಾಮೀಣರು ಪ್ರದೇಶದಲ್ಲಿ ಹಬ್ಬ ಹರಿದಿನಗಳು, ಜಾತ್ರೆ, ಉತ್ಸವ ಇತ್ಯಾದಿಗಳಲ್ಲಿ ಸಾಮರಸ್ಯ, ಭಾವೈಕ್ಯತೆ, ಸಮಾನತೆಗಳಿಗೆ ಆದ್ಯತೆ ನೀಡಿದೆ. ಸಮೂಹದಲ್ಲಿ ಹಂಚಿಕೊಂಡು ತಿನ್ನುವ ಸ್ವಭಾವ ಬೆಳೆಸಿಕೊಂಡಿದ್ದೇವೆ ಎಂದರು.
ಭವಿಷ್ಯದಲ್ಲಿ ಹೊಸ ಪೀಳಿಗೆ ಇದನ್ನು ಅನುಸರಿಸುವುದು ಮಹತ್ವವಾಗಿದೆ. ಗ್ರಾಮದಲ್ಲಿರುವ ದುರ್ಗಾದೇವಿ ದೇವಸ್ಥಾನವು ಅತ್ಯಂತ ಪುರಾತನ ಕಾಲದ್ದಾಗಿದೆ. ಭೋವಿ ಸಮಾಜವು ಸದಾ ಧಾರ್ಮಿಕ ಕಾರ್ಯಗಳನ್ನು ಚಾಚು ತಪ್ಪದೆ ನಡೆಸುವ ಮೂಲಕ ತನ್ನದೆ ಪರಂಪರೆ ಹೊಂದಿದ್ದು, ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಇಂತಹ ಧಾರ್ಮಿಕ ಕಾರ್ಯಗಳ ಅಗತ್ಯವಿದೆ ಎಂದರು.ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ದೈನಂದಿನ ಒತ್ತಡದ ಜೀವನದಲ್ಲಿ ಮಾನಸಿಕ, ಸಮಾಜದಲ್ಲಿ ಶಾಂತಿ ನೆಮ್ಮದಿ ಸೇರಿದಂತೆ ನಿತ್ಯದ ಬದುಕಿಗೆ ಧಾರ್ಮಿಕ ಆಚರಣೆಗಳು ಅಗತ್ಯವಾಗಿವೆ. ಯಾಂತ್ರಿಕ ಜೀವನದಲ್ಲಿ ಮನುಷ್ಯರಿಗೆ ವಿಶ್ರಾಂತಿ ಎನ್ನುವುದೇ ಇಲ್ಲವಾಗಿದ್ದು, ಈ ಧಾರ್ಮಿಕ ಕಾರ್ಯಕ್ರಮಗಳು ಮನುಷ್ಯನಿಗೆ ಸಮಾಧಾನ, ಸಂತೋಷ ನೀಡಲಿವೆ ಎಂದರು.
ಪಂಚಮಸಾಲಿ ಗುರುಪೀಠದ ವಚನಾನಂದ ಶ್ರೀಗಳು ಮಾತನಾಡಿ, ಯುದ್ಧ ಪರಂಪರೆಯಿಂದ ಶಾಂತಿ ಸಾಧ್ಯವಿಲ್ಲ ಎಂಬುದನ್ನು ಅರಿತ ಬಸವೇಶ್ವರ, ಕನಕದಾಸ, ಅಶೋಕ ಗೌತಮ ಬುದ್ಧರು ಶಸ್ತ್ರಾಸ್ತ್ರಗಳನ್ನು ಕೆಳಗಿಳಿಸಿ ಧಾರ್ಮಿಕ ಬೋಧನೆಗಳಲ್ಲಿ ತೊಡಗುವ ಮೂಲಕ ದಾರ್ಶನಿಕರಾದರಲ್ಲದೇ ಇಡೀ ವಿಶ್ವಕ್ಕೆ ಅನ್ವಯಿಸುವಂತಹ ಮಾರ್ಗದರ್ಶನಗಳನ್ನು ನೀಡಿದ್ದಾರೆ ಎಂದರು.ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ್ ದಾನಮ್ಮನವರ ಮಾತನಾಡಿ, ಪವಿತ್ರವಾದ ಮನುಷ್ಯ ಜನ್ಮವೆತ್ತಿ ಬಂದ ಮೇಲೆ ಪ್ರತಿಯೊಬ್ಬರೂ ಶ್ರದ್ಧೆ ಮತ್ತು ನಿಷ್ಠೆ ಅಳವಡಿಸಿಕೊಂಡು ಬದುಕಬೇಕೆಂದರು. ಬಳಿಕ ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಶ್ರೀಗಳು, ಹೊಸಮಠದ ಬಸವಶಾಂತಲಿಂಗ ಶ್ರೀಗಳು, ಕಡೆನಂದಿಹಳ್ಳಿ ಮಠದ ರೇವಣಸಿದ್ದೇಶ್ವರ ಶ್ರೀಗಳು, ಮಾಜಿ ಸಚಿವ ಬಿ.ಸಿ. ಪಾಟೀಲ, ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಮಾತನಾಡಿದರು.
ದೇವಸ್ಥಾನ ಸಮಿತಿ ಅಧ್ಯಕ್ಷ ರಮೇಶ ಸುತ್ತಕೋಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಧುರೀಣರಾದ ದಾನಪ್ಪ ಚೂರಿ, ಶಿವನಗೌಡ ಪಾಟೀಲ, ಬೀರಪ್ಪ ಬಣಕಾರ, ಡಿ.ಎಚ್. ಬುಡ್ಡನಗೌಡ್ರ, ರವಿ ಪೂಜಾರ, ಸವಿತಾ ಸುತ್ತಕೋಟಿ, ರೇಖಾ ದೊಡ್ಡಮನಿ, ಸುರೇಶ ಸುತ್ತಕೋಟಿ, ಚಂದ್ರಣ್ಣ ಮುಳಗುಂದ, ಶಂಭಣ್ಣ ಪಾಟೀಲ, ಈರಣ್ಣ ಮಲ್ಲಾಡದ, ಮಲ್ಲಿಕಾರ್ಜುನ ಕರಿಲಿಂಗಪ್ಪನವರ, ಶಿವನಗೌಡ ವೀರನಗೌಡ, ಬಸವರಾಜ ಸವಣೂರ, ಸುರೇಶಗೌಡ ಪಾಟೀಲ, ಪೊಲೀಸಗೌಡ ಪಾಟೀಲ, ಬಸವರಾಜ ಬನ್ನಿಹಟ್ಟಿ, ಮಂಜುನಾಥ ಭೋವಿ, ನಿಂಗಪ್ಪ ಹೆಗ್ಗಣ್ಣನವರ, ಸುರೇಶ ಹುಳುಬುತ್ತಿ, ಪರಮೇಶಗೌಡ ತೆವರಿ ಸೇರಿದಂತೆ ಇತರರಿದ್ದರು.