ಮಹಿಳೆಯರ ಬಾಳಿನ ನಿಜವಾದ ಶಕ್ತಿ ಶಿಕ್ಷಣದಲ್ಲಿದೆ

| Published : Sep 09 2025, 01:00 AM IST

ಸಾರಾಂಶ

ಮಹಿಳೆಯರ ಮೇಲಿನ ಹಿಂಸೆ, ಅಪ್ರಾಪ್ತ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ, ಕಳ್ಳಸಾಗಣೆ ಹಾಗೂ ಬಾಲ್ಯವಿವಾಹ ಇನ್ನೂ ಸಮಾಜದಲ್ಲಿ ಕಾಡುತ್ತಿರುವ ಗಂಭೀರ ಸಮಸ್ಯೆಗಳು. ಶಿಕ್ಷಣ, ಜಾಗೃತಿ ಮತ್ತು ಕಾನೂನುಗಳ ಪರಿಣಾಮಕಾರಿ ಜಾರಿಯ ಮೂಲಕವೇ ಇದಕ್ಕೆ ಕಡಿವಾಣ ಹಾಕಬಹುದು ಎಂದು ತಜ್ಞರು, ಸಾಹಿತಿಗಳು ಹಾಗೂ ಸಮಾಜ ಸೇವಕರು ಅಭಿಪ್ರಾಯಪಟ್ಟರು. ಸಮಾಜ ಸೇವಕಿ ರೂಪ ಹಾಸನ್ ಮಾತನಾಡಿ, ಅಪ್ರಾಪ್ತೆಯರ ಮೇಲಿನ ದೌರ್ಜನ್ಯ ಕುರಿತು ಮಾತನಾಡಿ, ಪ್ರತಿ ವರ್ಷ ಸಾವಿರಾರು ಮಕ್ಕಳು ಲೈಂಗಿಕ ಹಿಂಸೆ, ಕಳ್ಳಸಾಗಣೆ ಮತ್ತು ಬಾಲ್ಯವಿವಾಹದ ಬಲಿಯಾಗುತ್ತಿದ್ದಾರೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಮಹಿಳೆಯರ ಮೇಲಿನ ಹಿಂಸೆ, ಅಪ್ರಾಪ್ತ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ, ಕಳ್ಳಸಾಗಣೆ ಹಾಗೂ ಬಾಲ್ಯವಿವಾಹ ಇನ್ನೂ ಸಮಾಜದಲ್ಲಿ ಕಾಡುತ್ತಿರುವ ಗಂಭೀರ ಸಮಸ್ಯೆಗಳು. ಶಿಕ್ಷಣ, ಜಾಗೃತಿ ಮತ್ತು ಕಾನೂನುಗಳ ಪರಿಣಾಮಕಾರಿ ಜಾರಿಯ ಮೂಲಕವೇ ಇದಕ್ಕೆ ಕಡಿವಾಣ ಹಾಕಬಹುದು ಎಂದು ತಜ್ಞರು, ಸಾಹಿತಿಗಳು ಹಾಗೂ ಸಮಾಜ ಸೇವಕರು ಅಭಿಪ್ರಾಯಪಟ್ಟರು.

ನಗರದ ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ವತಿಯಿಂದ ಸೋಮವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಅರಿವಿನ ಪಯಣ ಕಾರ್ಯಕ್ರಮದ ಉದ್ಘಾಟನೆಯನ್ನು ಹಾಸನ ವಿಶ್ವವಿದ್ಯಾಲಯದ ಕುಲಪತಿ ಪ್ರೊಫೆಸರ್ ತಾರಾನಾಥ್ ಟಿ.ಸಿ. ಮತ್ತು ಮಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಶ್ರೀಮತಿ ಸಬಿಹಾ ಭೂಮಿ ಗೌಡ ಅವರು ನೆರವೇರಿಸಿ ಮಾತನಾಡಿದರು. ಮಹಿಳೆಯರ ಬಾಳಿನ ನಿಜವಾದ ಶಕ್ತಿ ಶಿಕ್ಷಣದಲ್ಲಿದೆ. ಹೆಣ್ಣು ಮಕ್ಕಳಿಗೆ ಸಮಾನ ಶಿಕ್ಷಣದ ಅವಕಾಶ ಒದಗಿಸಿದಾಗ ಮಾತ್ರ ಕುಟುಂಬದಲ್ಲೂ, ಸಮಾಜದಲ್ಲೂ ಸಮಾನತೆ ಸಾಧ್ಯ. ಮಹಿಳೆಯರ ಸ್ಥಾನವನ್ನು ಗುರುತಿಸದೆ ಸಮಾಜದ ಪ್ರಗತಿ ಅಸಾಧ್ಯ ಎಂದು ಹೇಳಿದರು.

ಸಮಾಜ ಸೇವಕಿ ರೂಪ ಹಾಸನ್ ಮಾತನಾಡಿ, ಅಪ್ರಾಪ್ತೆಯರ ಮೇಲಿನ ದೌರ್ಜನ್ಯ ಕುರಿತು ಮಾತನಾಡಿ, ಪ್ರತಿ ವರ್ಷ ಸಾವಿರಾರು ಮಕ್ಕಳು ಲೈಂಗಿಕ ಹಿಂಸೆ, ಕಳ್ಳಸಾಗಣೆ ಮತ್ತು ಬಾಲ್ಯವಿವಾಹದ ಬಲಿಯಾಗುತ್ತಿದ್ದಾರೆ. ಪೋಕ್ಸೋ ಕಾಯ್ದೆ ಇಂತಹ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಆದರೆ ಕಾನೂನು ಮಾತ್ರ ಸಾಕಾಗದು, ಪೋಷಕರು, ಶಾಲೆಗಳು ಹಾಗೂ ಸಮಾಜವೇ ಜಾಗೃತಿಯೊಂದಿಗೆ ಮುಂದೆ ಬರಬೇಕು ಎಂದರು.

ಹಿರಿಯ ಸಾಹಿತಿ ಹಾಗೂ ಬೂಕರ್ ಪ್ರಶಸ್ತಿ ಪಡೆದ ಬಾನು ಮುಷ್ತಾಕ್ ಮಾತನಾಡಿ, “ಹೆಣ್ಣು ಮಕ್ಕಳಿಗೆ ಸಮಾಜವೇ ನಿರ್ಬಂಧ ಹೇರಿದೆ. ಓದು, ಉದ್ಯೋಗ, ವಿವಾಹ ಎಲ್ಲದಲ್ಲೂ ನಿರ್ಧಾರವನ್ನು ಇತರರು ತೆಗೆದುಕೊಳ್ಳುತ್ತಾರೆ. ಹೆಣ್ಣುಮಕ್ಕಳನ್ನು ಸ್ವತಂತ್ರ ನಿರ್ಧಾರಕ್ಕೆ ಪ್ರೇರೇಪಿಸಿದಾಗ ಮಾತ್ರ ನಿಜವಾದ ಸಮಾನತೆ ಸಾಧ್ಯ” ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಡಾ. ಕವಿತಾ ಕೆ.ಜಿ. ವಹಿಸಿದ್ದರು. ಇದೇ ವೇಳೆ ಗೀತಾ ವಿ., ವಾಣಿ ಪೆರಿಯೋಡಿ, ರೇಖಾಂಬ, ವೆಂಕಟೇಶ್ ಮೂರ್ತಿ, ರತ್ನ, ಸುನಂದ, ಮಲ್ಲಿಕಾಂಬ ಸೇರಿದಂತೆ ಹಲವಾರು ಕಾಲೇಜುಗಳ ಪ್ರಾಂಶುಪಾಲರು, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.