ರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವ ಸಂದೇಶ ಜಾತೀಯತೆ, ಅಸಮಾನತೆ ಮತ್ತು ಮೌಢ್ಯಗಳೆಂಬ ರೋಗಗಳಿಗೆ ದಿವ್ಯೌಷಧವಾಗಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ಚಿಕ್ಕಮಗಳೂರು: ರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವ ಸಂದೇಶ ಜಾತೀಯತೆ, ಅಸಮಾನತೆ ಮತ್ತು ಮೌಢ್ಯಗಳೆಂಬ ರೋಗಗಳಿಗೆ ದಿವ್ಯೌಷಧವಾಗಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಯುವ ಘಟಕ, ತಾಲೂಕು, ನಗರ, ಹೋಬಳಿ ಘಟಕದಿಂದ ನಗರದ ಕೋಟೆ ಬಡಾವಣೆಯ ಕುವೆಂಪು ಉದ್ಯಾನವನದಲ್ಲಿ ಆಯೋಜಿಸಿದ್ದ ವಿಶ್ವಮಾನವ ದಿನಾಚರಣೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.12ನೇ ಶತಮಾನದಲ್ಲಿ ಭಕ್ತಿ ಭಂಡಾರಿ ಬಸವಣ್ಣನವರು ಅಸಮಾನತೆ ಮತ್ತು ಮೌಢ್ಯದ ವಿರುದ್ಧ ಹೋರಾಡಿದರೆ, 20ನೇ ಶತಮಾನದಲ್ಲಿ ರಾಷ್ಟ್ರಕವಿ ಕುವೆಂಪು ಅವರು ಅಸಮಾನತೆ ಮತ್ತು ಮೌಢ್ಯದ ವಿರುದ್ಧ ತಮ್ಮ ಕೃತಿಗಳು ಮತ್ತು ಕವಿತೆಗಳ ಮೂಲಕ ಹೋರಾಡಿದರು, ಕನ್ನಡಕ್ಕೆ ಶಕ್ತಿ ತುಂಬಿದವರು ಕುವೆಂಪು ಅವರು. ಅವರ ವಿಶ್ವಮಾನವ ಸಂದೇಶ ಮತ್ತು ವಿಚಾರಧಾರೆಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕುವೆಂಪು ಅವರ ಕೃತಿಗಳಲ್ಲಿ ವಿಶ್ವಮಾನವ ಪ್ರಜ್ಞೆ ವಿಷಯ ಕುರಿತು ಉಪನ್ಯಾಸ ನೀಡಿದ ಐಡಿಎಸ್‌ಜಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಮೋಹನ್ ಮರ್ಲೆ, ಜಿಲ್ಲೆಯ ಜನರಿಗೆ ಕುವೆಂಪು ಅವರು ನಮ್ಮ ಜಿಲ್ಲೆಯವರು ಎಂಬ ಹೆಮ್ಮೆ ಇದ್ದರೆ ಸಾಲದು, ಅವರ ವಿಶ್ವಮಾನವ ಸಂದೇಶಗಳನ್ನು ಅರಿತು ಪಾಲಿಸಬೇಕು ಎಂದು ಕಿವಿ ಮಾತು ಹೇಳಿದರು.ರಾಷ್ಟ್ರಕವಿ ಕುವೆಂಪು ಅವರ ಬದುಕು, ವೈಚಾರಿಕತೆ, ಬರಹಗಳ ಕುರಿತು ವಿವರಿಸಿದ ಮೋಹನ್ ಮರ್ಲೆ, ನಾವು ದೊಡ್ಡವರಾದ ನಂತರ ಜ್ಞಾನದ ಮುಗ್ಧತೆಯನ್ನು ಹೊಂದಿರಬೇಕು, ಆಗ ಮಾತ್ರ ಕುವೆಂಪು ಅವರ ಆಶಯದಂತೆ ವಿಶ್ವಮಾನವರಾಗಲು ಸಾಧ್ಯವಾಗುತ್ತದೆ ಎಂದರು.ರಾಷ್ಟ್ರಕವಿ ಕುವೆಂಪು ಅವರು ಪಂಚಮಂತ್ರಗಳಲ್ಲಿ, ಸಪ್ತ ಸೂತ್ರಗಳಲ್ಲಿ ತಮ್ಮ ಕವಿತೆಗಳಲ್ಲಿ ವಿಶ್ವಮಾನವ ಸಂದೇಶವನ್ನು ಸಾರಿದ್ದಾರೆ, ಜಗತ್ತು ಉಳಿಯಬೇಕಾದರೆ ಕುವೆಂಪು ಅವರ ಮನುಜ ಮತ, ವಿಶ್ವಪಥ ನಮ್ಮದಾಗಬೇಕು ಎಂದು ತಿಳಿಸಿದರು.ಆಶಾಕಿರಣ ಅಂಧ ಮಕ್ಕಳ ಶಾಲೆಯ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ ಮಾತನಾಡಿ, ರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವ ಸಂದೇಶವನ್ನು, ಅವರ ವಿಚಾರಧಾರೆಗಳನ್ನು ಎಲ್ಲರೂ ಮೈಗೂಡಿಸಿಕೊಂಡರೆ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯವಾಗುತ್ತದೆ ಎಂದರು. ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಮಾವಿನಕೆರೆ ದಯಾನಂದ್ ಅಧ್ಯಕ್ಷತೆ ವಹಿಸಿದ್ದರು.ಇದಕ್ಕೂ ಮುನ್ನ ವಿಶ್ವಮಾನವ ದಿನಾಚರಣೆಯನ್ನು ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್ ಉದ್ಘಾಟಿಸಿದರು, ನಾಡಗೀತೆಯ ನೂರರ ಸಂಭ್ರಮ ಕಾರ್ಯಕ್ರಮಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಕಸಬಾ ಹೋಬಳಿ ಅಧ್ಯಕ್ಷೆ ವೀಣಾ ಮಲ್ಲಿಕಾರ್ಜುನ್ ಚಾಲನೆ ನೀಡಿದರು. ನಗರ ಘಟಕದ ಅಧ್ಯಕ್ಷ ಸಚಿನ್ ಸಿಂಗ್ ರಾಷ್ಟ್ರಕವಿಯ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಇದೇ ವೇಳೆ ಹಿರೇಮಗಳೂರು ಪುಟ್ಟಸ್ವಾಮಿ ಅವರಿಗೆ ಕನ್ನಡ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು, ಕುವೆಂಪು ಅವರ ವಿಶ್ವಮಾನವ ಸಂದೇಶದ ಪ್ರತಿಗಳನ್ನು ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದ ನಡುವೆ ಹಲವು ಗಾಯಕರಿಂದ ಕುವೆಂಪು ವಿರಚಿತ ಗೀತೆಗಳ ಗಾಯನ ನಡೆಯಿತು, ನಗರಸಭೆ ಸದಸ್ಯೆ ಸುಜಾತ ಶಿವಕುಮಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಮುಗುಳುವಳ್ಳಿ ಪರಮೇಶ್ವರಪ್ಪ, ಕಸಾಪ ಜಿಲ್ಲಾ ಗೌರವ ಕಾರ್ಯರ್ಶಿ ಜಿ.ಬಿ.ಪವನ್, ಯುವ ಘಟಕದ ಜಿಲ್ಲಾಧ್ಯಕ್ಷ ಪ್ರಿಯಾಂಕ ಭರತ್, ಸಾಹಿತಿ ಡಿ.ಎಂ.ಮಂಜುನಾಥ ಸ್ವಾಮಿ, ಹಳೇಬೀಡು ಬಸವರಾಜ್, ಟಿ.ಸಂದೀಪ್ ಉಪಸ್ಥಿತರಿದ್ದರು.