ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯದ ಕಲ್ಯಾಣಕ್ಕಾಗಿ ವಿವಿಧ ಇಲಾಖೆಗಳಿಗೆ ಎಸ್.ಸಿ.ಎಸ್.ಪಿ., ಟಿಎಸ್ಪಿ ಯೋಜನೆಯಡಿ ಬಿಡುಗಡೆಯಾದ ಅನುದಾನವನ್ನು ಶೇ. 100 ರಷ್ಟು ಬಳಕೆಯಾಗಬೇಕು. ಭೌತಿಕ ಮತ್ತು ಆರ್ಥಿಕ ಪ್ರಗತಿ ಸಾಧಿಸದಿದ್ದರೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಜವಾಬ್ದಾರರಾಗುತ್ತಾರೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ರಾಜ್ಯದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಯಾವುದೇ ವ್ಯಕ್ತಿ, ಸಮುದಾಯ, ಶೋಷಣೆ ಮತ್ತು ದೌರ್ಜನ್ಯಕ್ಕೊಳಗಾದರೆ ಆಯೋಗವು ತಕ್ಷಣ ನಿರ್ದಾಕ್ಷಿಣ್ಯವಾಗಿ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳುತ್ತದೆ. ಈ ಸಂಬಂಧವಾಗಿ ಆಯೋಗಕ್ಕೆ ಬಂದು ಪ್ರಕರಣ ದಾಖಲಿಸಬಹುದು. ಆಯೋಗವು ಸದಾ ದಮನಿರತರ ಹಕ್ಕೊತ್ತಾಯಗಳಿಗೆ ಶ್ರಮಿಸುತ್ತದೆ ಎಂದು ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಡಾ.ಎಲ್.ಮೂರ್ತಿ ಹೇಳಿದರು.

ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯಿತಿಯ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಜಿಲ್ಲಾಡಳಿತದ ಸಹಯೋಗದೊಂದಿಗೆ ನಡೆದ ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದೂರುಗಳಿಗೆ ಸ್ಪಂದಿಸಬೇಕು:

ಅನುಸೂಚಿತ ಜಾತಿ, ಪಂಗಡಗಳ ಜನರ ಮೇಲಿನ ದೌರ್ಜನ್ಯ ಕುರಿತು ದೂರುಗಳು ದಾಖಲಾದಲ್ಲಿ ಸಂಬಂಧಿಸಿದ ದೂರುಗಳ ಕುರಿತು ತ್ವರಿತವಾಗಿ ಕ್ರಮಕೈಗೊಳ್ಳಬೇಕು. ದೂರುಗಳಿಗೆ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಬೇಕು. ಕಚೇರಿಗೆ ಆಗಮಿಸುವ ಸಾರ್ವಜನಿಕರೊಂದಿಗೆ ಅಧಿಕಾರಿ, ಸಿಬ್ಬಂದಿ ಸೌಜನ್ಯ ಯುತವಾಗಿ ವರ್ತಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯದ ಕಲ್ಯಾಣಕ್ಕಾಗಿ ವಿವಿಧ ಇಲಾಖೆಗಳಿಗೆ ಎಸ್.ಸಿ.ಎಸ್.ಪಿ., ಟಿಎಸ್ಪಿ ಯೋಜನೆಯಡಿ ಬಿಡುಗಡೆಯಾದ ಅನುದಾನವನ್ನು ಶೇ. 100 ರಷ್ಟು ಬಳಕೆಯಾಗಬೇಕು. ಭೌತಿಕ ಮತ್ತು ಆರ್ಥಿಕ ಪ್ರಗತಿ ಸಾಧಿಸದಿದ್ದರೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಜವಾಬ್ದಾರರಾಗುತ್ತಾರೆ. ಈ ಸಂಬಂಧ ಜಿಲ್ಲಾ ಮಟ್ಟದ ಅಧಿಕಾರಿಗಳು ಅಗತ್ಯ ಕ್ರಮಕೈಗೊಳ್ಳಬೇಕು. ವಿವಿಧ ಇಲಾಖೆ ಗಳಿಗೆ ಮಂಜೂರಾಗಿರುವ ಅನುದಾನಕ್ಕೆ ಆಯಾ ಇಲಾಖೆಯಿಂದ ಕ್ರಿಯಾ ಯೋಜನೆಗಳಿಗೆ ಸಂಬಂಧಿಸಿದಂತೆ ಮಂಜೂರಾತಿ ಪಡೆದು ನಿಗದಿತ ಅವಧಿಯೊಳಗೆ ಯೋಜನೆಗಳ ಅನುಷ್ಠಾನ ಮಾಡಬೇಕು ಎಂದು ತಿಳಿಸಿದರು.

ಅರ್ಜಿಗಳ ವಿಲೇವಾರಿಗೆ ಸೂಚನೆ

ಪ್ರಮುಖವಾಗಿ ಶೋಷಣೆ, ದೌರ್ಜನ್ಯ, ಜಮೀನಿನ ಖಾತೆ, ಪಹಣಿ, ಸ್ಮಶಾನ, ಡೀಮ್ಡ್ ಅರಣ್ಯ ಪ್ರದೇಶ, ಸಮುದಾಯ ಭವನ, ಎಸ್‌ಸಿಪಿ ಮತ್ತು ಟಿಎಸ್‌ಪಿ ಹಾಗೂ ಅಕ್ರಮ ಮದ್ಯ ಮಾರಾಟದ ಬಗ್ಗೆ ನೆರೆದಿದ್ದ ಸಮುದಾಯವು ಅಧ್ಯಕ್ಷರ ಗಮನ ಸೆಳೆದಾಗ, ಅಧ್ಯಕ್ಷರು ಸಮಸ್ಯೆಗಳ ಕುರಿತಂತೆ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ತಾಕೀತು ಮಾಡಿ ಈ ಕುರಿತ ದೂರು ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಲು ಸೂಚಿಸಿದರು.

ಬಳಿಕ ಇದೇ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಡದ ಅಧಿಕಾರಿಗಳ ಸಭೆಯಲ್ಲಿ, ಎಲ್ಲಾ ಇಲಾಖೆಗಳಿಂದ ಜಿಲ್ಲೆಗೆ ಹಂಚಿಕೆಯಾಗಿರುವ ಅನುದಾನದ ಬಗ್ಗೆ ಮಾಹಿತಿ ಪಡೆದು ಚರ್ಚಿಸಿದರು. ಎಸ್‌ಸಿ,ಎಸ್‌ಟಿ ಸಮುದಾಯಗಳ ನಾಗರಿಕ ಹಕ್ಕುಗಳು, ಶಿಕ್ಷಣ ಹಾಗೂ ಅವರನ್ನು ಸಾಮಾಜಿಕವಾಗಿ ಸದೃಢರಾಗಿಸಲು ಅಧಿಕಾರಿಗಳು ಶ್ರಮವಹಿಸಬೇಕು ಎಂದು ಹಲವು ಸೂಚನೆ ಮತ್ತು ನಿರ್ದೇಶನಗಳನ್ನು ನೀಡಿದರು. ಸಭೆಯಲ್ಲಿ ಆಯೋಗದ ಸದಸ್ಯರಾದ ಎಂ.ಕುಂಬಯ್ಯ, ಆಯೋಗದ ಕಾರ್ಯದರ್ಶಿ ಡಾ.ಹೆಚ್.ಎಸ್.ಶಿವರಾಂ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ವೈ. ನವೀನ್ ಭಟ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ, ಅಪರ ಜಿಲ್ಲಾಧಿಕಾರಿ ಡಾ. ಎನ್.ಭಾಸ್ಕರ್, ಉಪವಿಭಾಗಾಧಿಕಾರಿ ಡಿ.ಹೆಚ್.ಅಶ್ವಿನ್,ಆಯೋಗದ ಸಹಾಯಕ ನಿರ್ದೇಶಕ ಶ್ರೀನಿವಾಸ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ತೇಜಾನಂದರೆಡ್ಡಿ, ದಲಿತ ಮುಖಂಡರಾದ ಕೆ.ಸಿ.ರಾಜಾಕಾಂತ್, ಬಿ.ವಿ.ಆನಂದ್, ಜಿ.ಸಿ.ವೆಂಕಟರವಣಪ್ಪ.ಭಾಗ್ಯಮ್ಮ,ಟಿ.ಎ.ಚಲಪತಿ, ವೆಂಕಟನಾರಾಯಣಪ್ಪ, ಸಿ.ಎ.ವೆಂಕಟೇಶಪ್ಪ,ನರಸಿಂಹಮೂರ್ತಿ ಗುಂಡಾಪುರ, ಅಂದಾರ್ಲಹಳ್ಳಿ ವೆಂಕಟೇಶ್, ಪೂಜನಹಳ್ಳಿ ಕೃಷ್ಣಪ್ಪ, ಕೋನಪ್ಪಲ್ಲಿ ರಾಮಯ್ಯ, ಪಿಳ್ಳಪ್ಪ, ನಡಿಪನ್ನ, ಬಾಲಪ್ಪ, ಶಿಡ್ಲಘಟ್ಟ ತಾಲ್ಲೂಕು ಪದಾಧಿಕಾರಿಗಳಾದ ಲಕ್ಕೇನಹಳ್ಳಿ ವೆಂಕಟೇಶ್, ಡಿ.ಸಿ.ನರಸಿಂಹಪ್ಪ ಮತ್ತಿತರರು ಇದ್ದರು.