ಯಕ್ಷಗಾನ ಕ್ಷೇತ್ರದಲ್ಲಿ ದಿ. ದೇವರು ಹೆಗಡೆಯವರ ಸಾಧನೆ ನಿತ್ಯ ನೂತನವಾಗಿದೆ. ಅವರು ಮುಂದಿನ ಪೀಳಿಗೆಗೆ ಪ್ರೇರಣೆ ಮತ್ತು ಯಕ್ಷಗಾನ ಕಲೆಯ ಬೆಳವಣಿಗೆಗೆ ಕಾರಣರಾದವರು.
ಕನ್ನಡಪ್ರಭ ವಾರ್ತೆ ಕುಮಟಾ
ಯಕ್ಷಗಾನ ಕ್ಷೇತ್ರದಲ್ಲಿ ದಿ. ದೇವರು ಹೆಗಡೆಯವರ ಸಾಧನೆ ನಿತ್ಯ ನೂತನವಾಗಿದೆ. ಅವರು ಮುಂದಿನ ಪೀಳಿಗೆಗೆ ಪ್ರೇರಣೆ ಮತ್ತು ಯಕ್ಷಗಾನ ಕಲೆಯ ಬೆಳವಣಿಗೆಗೆ ಕಾರಣರಾದವರು. ಅಂಥವರ ಜನ್ಮಶತಮಾನೋತ್ಸವದ ಉದ್ದೇಶ ಅರ್ಥಪೂರ್ಣ ಎಂದು ಯಕ್ಷಗಾನ ಅರ್ಥಧಾರಿ ಉಮಾಕಾಂತ ಭಟ್ ಕೆರೆಕೈ ಹೇಳಿದರು.ಕೋಣಾರೆಯ ಮಹಾವಿಷ್ಣು ದೇವಸ್ಥಾನದಲ್ಲಿ ಮೂರೂರಿನ ದಿ. ದೇವರು ಹೆಗಡೆ ಅವರ ಜನ್ಮಶತಮಾನೋತ್ಸವ ಪ್ರಯುಕ್ತ ದೇವರು ಹೆಗಡೆ ಯಕ್ಷವೇದಿಕೆ ಆಶ್ರಯದಲ್ಲಿ ಮೂರು ದಿನಗಳ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಉದ್ಯಮಿ ಮಂಜುನಾಥ ಭಟ್ ಸುವರ್ಣಗದ್ದೆ ಮಾತನಾಡಿ, ದೇವರು ಹೆಗಡೆಯಂಥವರನ್ನು ಕಂಡ ಇಲ್ಲಿ ಸಂಪೂರ್ಣ ಸಮಾಜದ ಸಾರ ಅದ್ಭುತವಾಗಿ ಮೇಳೈಸಿದೆ. ಈ ಮಣ್ಣಿಗೆ ಅಂಥ ಸತ್ವ ಅಡಗಿದ್ದು, ದೇವರು ಹೆಗಡೆ, ವೆಂಕಟ್ರಮಣ ಹೆಗಡೆ ಅಂಥವರು ಮತ್ತೆ ಹುಟ್ಟಿ ಬರಲಿ ಎಂದರು. ದೇವರು ಹೆಗಡೆ ಪ್ರತಿಷ್ಠಾನದ ನಿಕಟಪೂರ್ವ ಅಧ್ಯಕ್ಷ ವಿ.ಎಸ್.ಹೆಗಡೆ ಹಟ್ಟೀಕೇರಿ ಪ್ರಾಸ್ತಾವಿಕ ಮಾತನಾಡಿದರು. ನಿವೃತ್ತ ಪ್ರಾಚಾರ್ಯ ಮಹೇಶ ಅಡ್ಕೋಳಿಯವರು ದಿ. ವೆಂಕಟ್ರಮಣ ಹೆಗಡೆ ಹುಳಸೆಮಕ್ಕಿ ಅವರ ಸಂಸ್ಮರಣೆ ನಡೆಸಿದರು.ದೇವರು ಹೆಗಡೆ ಯಕ್ಷವೇದಿಕೆ ಅಧ್ಯಕ್ಷ ಸುಬ್ರಾಯ ಭಟ್ ಕೋಣಾರೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ದಿ.ದೇವರು ಹೆಗಡೆ ಅವರ ಸ್ಮರಣೆಯಲ್ಲಿ ಲಕ್ಷ್ಮೀ ದೇವರು ಹೆಗಡೆ ಅವರಿಗೆ ಗೌರವ ಸಮರ್ಪಿಸಲಾಯಿತು. ದಿ.ವೆಂಕಟ್ರಮಣ ಹೆಗಡೆ ಹುಳಸೆಮಕ್ಕಿ ಸ್ಮರಣೆಯಲ್ಲಿ ಜಿ.ವಿ.ಹೆಗಡೆ ಹುಳಸೆಮಕ್ಕೆ ಅವರಿಗೆ ಸನ್ಮಾನಿಸಲಾಯಿತು. ಗೋವಿಂದ ಭಟ್ ಸ್ವಾಗತಿಸಿ ಪರಿಚಯಿಸಿದರು. ಕಾರ್ಯದರ್ಶಿ ಕೃಷ್ಣ ಹೆಗಡೆ, ದೇವಸ್ಥಾನದ ಅಧ್ಯಕ್ಷ ವಿ.ವಿ.ಹೆಗಡೆ, ಜಿ.ಐ.ಹೆಗಡೆ ಇತರರು ಇದ್ದರು. ರಾಘವೇಂದ್ರ ಭಟ್ ನಿರೂಪಿಸಿದರು. ಬಳಿಕ ಹಿಮ್ಮೇಳದಲ್ಲಿ ಅನಂತ ಹೆಗಡೆ ದಂತಳಿಗೆ, ನರಸಿಂಹ ಹೆಗಡೆ ಮೂರೂರು, ವಿನಾಯಕ ಭಟ್ರಮನೆ, ಮುಮ್ಮೇಳದಲ್ಲಿ ತಿಮ್ಮಪ್ಪ ಹೆಗಡೆ ಶಿರಳಗಿ, ಕೆರೆಮನೆ ಶಿವಾನಂದ ಹೆಗಡೆ, ಈಶ್ವರ ಭಟ್ಟ ಹಂಸಳ್ಳಿ, ವಿಘ್ನೇಶ್ವರ ಹಾವಗೋಡಿ, ಕೆರೆಮನೆ ಶ್ರೀಧರ ಹೆಗಡೆ, ಸದಾಶಿವ ಮಲವಳ್ಳಿ, ಮಹಾವೀರ ಜೈನ್, ಚಂದ್ರಶೇಖರ ಎನ್., ಗಣಪತಿ ಕುಣಬಿ, ವಿನಾಯಕ ನಾಯ್ಕ, ನಕುಲ ಗೌಡ, ಕೃಷ್ಣ ಮರಾಠಿ, ಪುನೀತ ನಾಯ್ಕ ಅಂಕೋಲಾ ಅಕ್ಷಯ ಶೇರುಗಾರ ಮುಂತಾದ ಕಲಾವಿದರಿಂದ ''''''''ಸೀತಾಪಹಾರ'''''''' ಎಂಬ ಯಕ್ಷಗಾನದ ಆಖ್ಯಾನ ಪ್ರದರ್ಶನಗೊಂಡಿತು.