ಕನ್ನಡ ವಿಶ್ವವಿದ್ಯಾಲಯ ಡಾ. ಚಂದ್ರಶೇಖರ ಕಂಬಾರರ ಕಾಲದಿಂದಲೂ ರಂಗಭೂಮಿ ಚಟುವಟಿಕೆಯಲ್ಲಿ ತೊಡಗಿಕೊಂಡು ಇಂದಿನ ವರೆಗೂ ಮುಂದುವರಿಸಿಕೊಂಡು ಬಂದಿದೆ ಎಂದು ರಂಗಕರ್ಮಿ ಹಾಗೂ ಭಾವೈಕ್ಯತಾ ವೇದಿಕೆಯ ಅಧ್ಯಕ್ಷ ಪಿ. ಅಬ್ದುಲ್ಲಾ ಹೇಳಿದರು.
ಹೊಸಪೇಟೆ: ಕನ್ನಡ ವಿಶ್ವವಿದ್ಯಾಲಯ ಡಾ. ಚಂದ್ರಶೇಖರ ಕಂಬಾರರ ಕಾಲದಿಂದಲೂ ರಂಗಭೂಮಿ ಚಟುವಟಿಕೆಯಲ್ಲಿ ತೊಡಗಿಕೊಂಡು ಇಂದಿನ ವರೆಗೂ ಮುಂದುವರಿಸಿಕೊಂಡು ಬಂದಿದೆ ಎಂದು ರಂಗಕರ್ಮಿ ಹಾಗೂ ಭಾವೈಕ್ಯತಾ ವೇದಿಕೆಯ ಅಧ್ಯಕ್ಷ ಪಿ. ಅಬ್ದುಲ್ಲಾ ಹೇಳಿದರು.
ಕನ್ನಡ ವಿಶ್ವವಿದ್ಯಾಲಯ ನಾಟಕ ವಿಭಾಗ ನುಡಿ ಕಟ್ಟಡದಲ್ಲಿ ಆಯೋಜಿಸಿದ್ದ ಕನ್ನಡ ವಿಶ್ವವಿದ್ಯಾಲಯದ ಸಂಸ್ಥಾಪಕ ಕುಲಪತಿ ಡಾ. ಚಂದ್ರಶೇಖರ ಕಂಬಾರ ಅವರ 89ನೇ ಹುಟ್ಟುಹಬ್ಬದ ಪ್ರಯುಕ್ತ ಜೋಕುಮಾರಸ್ವಾಮಿ ನಾಟಕ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.ಇವತ್ತಿನ ಜನರು ಒಂದಲ್ಲ ಒಂದು ರೀತಿಯಲ್ಲಿ ಮಾನಸಿಕ ತೊಳಲಾಟ, ಕೀಳರಿಮೆಯಿಂದ ಬಳಲುತ್ತಿರುತ್ತಾರೆ. ಇನ್ನೂ ಕೆಲವರಿಗೆ ನಾನು ಎಲ್ಲವನ್ನು ಮಾಡಬಲ್ಲೆ ಎನ್ನುವ ಅಹಂ ಇರುತ್ತದೆ. ಇವುಗಳೆಲ್ಲವನ್ನು ಕಳೆದುಕೊಳ್ಳಲು ರಂಗಭೂಮಿ ಒಂದು ವೇದಿಕೆ. ಒಮ್ಮೆ ರಂಗಭೂಮಿ ವೇದಿಕೆ ಮೇಲೆ ನಾಟಕದಲ್ಲಿ ಮಾತನಾಡಲು ಪ್ರಾರಂಭಿಸಿದರೆ ಎಲ್ಲ ಕೀಳರಿಮೆಗಳು ತನ್ನಿಂದತಾನೆ ಮಾಯವಾಗುತ್ತವೆ. ಕನ್ನಡ ವಿಶ್ವವಿದ್ಯಾಲಯ ಸಮಗ್ರವಾಗಿ ರಂಗಶಿಕ್ಷಣವನ್ನು ತನ್ನ ಶೈಕ್ಷಣಿಕ ಚಟುವಟಿಕೆಯಲ್ಲಿ ಬಳಸಿಕೊಳ್ಳಬೇಕಾಗಿದೆ. ಇದಕ್ಕೆ ಕನ್ನಡ ವಿಶ್ವವಿದ್ಯಾಲಯ ನಾಡಿನಾದ್ಯಂತ ಇರುವ ಎಲ್ಲ ಕಲಾ ತಂಡಗಳೊಂದಿಗೆ ಚಟುವಟಿಕೆಯಲ್ಲಿ ತೊಡಗಿಕೊಂಡು ಕಾರ್ಯ ನಿರ್ವಹಿಸಬೇಕು. ಇದರಿಂದ ಕನ್ನಡ ವಿಶ್ವವಿದ್ಯಾಲಯದ ರಂಗ ಚಟುವಟಿಕೆಗಳು ಉಳಿಯುತ್ತದೆ ಎಂದರು.ಸಾಗರದ ರಂಗಕರ್ಮಿ ಸಿ.ಟಿ. ಬ್ರಹ್ಮಾಚಾರ್ ಮಾತನಾಡಿ, ಕಂಬಾರರು ಕನ್ನಡ ವಿಶ್ವವಿದ್ಯಾಲಯವನ್ನು ಕಲ್ಲಿನಲ್ಲಿ ಅದ್ಭುತವಾಗಿ ಕಟ್ಟಿದ್ದಾರೆ. ಕಂಬಾರರು ಸಾಹಿತ್ಯ, ಸಂಗೀತ, ನಾಟಕ ಕಲೆ ಎಲ್ಲವನ್ನೂ ಕನ್ನಡ ವಿಶ್ವವಿದ್ಯಾಲಯದ ಭೂಮಿಯಲ್ಲಿ ಬಿತ್ತಿದ್ದಾರೆ. ಈ ಭೂಮಿಯಲ್ಲಿ ನಾಟಕ ಕಲೆಯನ್ನು ಉಳಿಸಿ ಬೆಳೆಸಬೇಕಾದರೆ ಕರ್ನಾಟಕದ ಎಲ್ಲ ಕಾಲೇಜುಗಳ ಕಲಾತಂಡಗಳಿಂದ ಕಂಬಾರರ ನಾಟಕಗಳ ನಾಟಕೋತ್ಸವವನ್ನು ನಡೆಸಬೇಕು. ಕಂಬಾರರ ಸಮಗ್ರ ಸಾಹಿತ್ಯದ ಉತ್ಸವ ನಡೆಯಬೇಕು, ಹಾಗಿದ್ದಲ್ಲಿ ಮಾತ್ರ ಕಂಬಾರರ ಕನಸ್ಸನ್ನು ನನಸು ಮಾಡಿದಂತಾಗುತ್ತದೆ ಎಂದರು.
ವಿವಿ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಅಧ್ಯಕ್ಷತೆ ವಹಿಸಿ, ಜೋಕುಮಾರಸ್ವಾಮಿ ಕಂಬಾರರ ಅತ್ಯುತ್ತಮ ನಾಟಕ. ಈ ನಾಟಕವು ಉತ್ತರ ಕರ್ನಾಟಕದ ಭಾಷೆ ಮತ್ತು ವಿಶಿಷ್ಟವಾದ ಕಥೆಗಳನ್ನೊಳಗೊಂಡಿದ್ದು ಕರ್ನಾಟಕದ ಆಧುನಿಕ ರಂಗಭೂಮಿಯಲ್ಲಿ ಹೊಸ ಬಿರುಗಾಳಿಯನ್ನು ಎಬ್ಬಿಸಿತ್ತು. ಒಂದು ಕಾಲದಲ್ಲಿ ಗ್ರಾಮೀಣ ಭಾಗದ ಪ್ರತಿ ಗಾಮದಲ್ಲಿ ವರ್ಷಕ್ಕೊಮ್ಮೆಯಾದರೂ ಒಂದು ನಾಟಕ ಆಡುವ ಪರಿಪಾಠವಿತ್ತು. ಆದರೆ, ಇಂದು ಅದು ನೇಪಥ್ಯಕ್ಕೆ ಸರಿದಿದೆ. ಇವತ್ತು ಸಿನಿಮಾ ಎನ್ನುವ ಫ್ಲಡ್ ಲೈಟ್‌ನ ಪ್ರಖರವಾದ ಬೆಳಕಿನ ಮುಂದೆ ನಾಟಕದ ಪಂಜಿನ ಬೆಳಕು ಮಂಜಾಗುತ್ತಿದೆ. ನಾಟಕ ಕಲೆ ಶ್ರೇಷ್ಠ ಕಲೆ ಎಂಬುದನ್ನು ನಾವು ಅರಿಯಬೇಕಾಗಿದೆ. ಚಂದ್ರಶೇಖರ ಕಂಬಾರರ ಜೋಕುಮಾರಸ್ವಾಮಿ ನಾಟಕದ ತರಬೇತಿಯನ್ನು ಪಡೆದು ಅತ್ಯುತ್ತಮ ನಾಟಕವನ್ನು ಪ್ರದರ್ಶಿಸಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.ನಾಟಕ ವಿಭಾಗದ ಮುಖ್ಯಸ್ಥ ಡಾ. ವೀರೇಶ ಬಡಿಗೇರ ಪ್ರಾಸ್ತಾವಿಕ ಮಾತನಾಡಿದರು. ಸಂಗೀತ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಗೋಣಿಬಸಪ್ಪ ನಿರ್ವಹಿಸಿದರು.