ರಾಮನಗರ: ಧರ್ಮ, ಸಂಸ್ಕೃತಿ, ಸೌಹಾರ್ದತೆ ಇತ್ಯಾದಿ ಬಹು ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜವನ್ನು ಸುಸ್ಥಿತಿಯಲ್ಲಿಡುವ ಶಕ್ತಿ ರಂಗಭೂಮಿಗಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.

ತಾಲೂಕಿನ ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ಕೆರೆಮೇಗಳದೊಡ್ಡಿಯ ಮುದ್ದುಶ್ರೀ ದಿಬ್ಬದಲ್ಲಿ ಆಯೋಜಿಸಿದ್ದ ಶಿವಮೊಗ್ಗ ರಂಗಾಯಣ ನಿರ್ಮಿತ ಜನಪ್ರಿಯ ಕಥೆಗಾರ ಮತ್ತು ಕಾದಂಬರಿಕಾರ ಬೋಳುವಾರು ಮಹಮ್ಮದ್ ಕುಂಞ ಅವರ ಕಾದಂಬರಿ ಆಧಾರಿತ ನಾಟಕ "ಸ್ವಾತಂತ್ರ‍್ಯದ ಓಟ " ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶದ ರಂಗ ಚಟುವಟಿಕೆಗಳು ಮನಸುಗಳನ್ನು ಬೆಸೆವ, ಜಾತಿ ಧರ್ಮಗಳ ಬೇಧವನ್ನು ಹೊಡೆದೋಡಿಸುವ ನೆಲೆಯಲ್ಲಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕಾಗಿದೆ. ಆಗ ಮಾತ್ರ ಸಮಸಮಾಜ ನಿರ್ಮಾಣ ಸಾಧ್ಯ. ಇದು ನಾಡಿನಾದ್ಯಂತ ಪಸರಿಸಬೇಕಾದ ಅವಶ್ಯಕತೆ ಇದೆ. ಕನ್ನಡದ ಕಥೆ-ಕಾದಂಬರಿಕಾರರು ಯಾರಿಗೂ ಕಡಿಮೆ ಇಲ್ಲದಂತೆ ಅದ್ಭುತ ವಿಚಾರಗಳನ್ನು ತಮ್ಮ ಬರಹಗಳಿಂದ ಕಟ್ಟಿಕೊಟ್ಟಿದ್ದಾರೆ. ಅಂತವುಗಳನ್ನು ಹೀಗೆ ರಂಗಪಟ್ಟಿಗಳನ್ನಾಗಿ ನಿರ್ಮಿಸಿ ಹತ್ತಾರು ಕಡೆ ಪ್ರದರ್ಶನ ನೀಡಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.

ಕೆಎಸ್ ಮುದ್ದಪ್ಪ ಸ್ಮಾರಕ ಟ್ರಸ್ಟ್ ಕಾರ್ಯದರ್ಶಿ ಡಾ.ಎಂ.ಬೈರೇಗೌಡ ಮಾತನಾಡಿ, ರಂಗಭೂಮಿ ಮೂಲಕವೇ ನಮ್ಮ ನೆಲದ ಸೊಗಡನ್ನು ಪಸರಿಸುವ ಕಾರ್ಯದಲ್ಲಿ ನಿರತರಾಗಲು ಸಾರ್ವಜನಿಕರು ಮತ್ತು ಸರ್ಕಾರದ ಸಹಭಾಗಿತ್ವ, ಸಹಕಾರ ಅಗತ್ಯ. ಜನರ ಆಲೋಚನೆಗಳ ಅಭಿರುಚಿಯ ಅಭಿವೃದ್ಧಿಗೆ ತಕ್ಕಂತೆ ಕಾರ್ಯಕ್ರಮಗಳನ್ನು ರೂಪಿಸುವ ಹೊಣೆಗಾರಿಕೆ ಸಂಘ ಸಂಸ್ಥೆಗಳ ಮೇಲಿದೆ. ಹಾಗೆಯೇ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಿ ಶೈಕ್ಷಣಿಕ ಬೆಳವಣಿಗೆಯಲ್ಲಿ ಮುಂಚೂಣಿಯಲ್ಲಿರುವ ರಂಗಭೂಮಿಗೆ ಕಾಯಕಲ್ಪ ಆಗಬೇಕಾಗಿದೆ. ಜನರ ಬದುಕಿನ ರೀತಿ ರಿವಾಜುಗಳನ್ನು ತೆರೆದು ತೋರಿಸುವ ವಿಶೇಷ ಶಕ್ತಿ ರಂಗಭೂಮಿಗಿದೆ. ಇಂತಹ ಅಭೂತಪೂರ್ವ ಶಕ್ತಿ ಪಡೆದಿರುವ ರಂಗ ಚಟುವಟಿಕೆಗಳನ್ನು ಮತ್ತು ರಂಗ ಪಠ್ಯಗಳನ್ನು ಶಿಕ್ಷಣದಲ್ಲಿ ಅಳವಡಿಸಿ ಪ್ರಾತ್ಯಕ್ಷಿಕೆಗಳ ನಿರ್ಮಾಣ ಮಾಡಿದಲ್ಲಿ ರಂಗಭೂಮಿ ಪ್ರಬಲ ಮಾಧ್ಯಮವೊಂದು ಬಳಕೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ನಾಡಿನ ಶಿಕ್ಷಣ ತಜ್ಞರು ಕಾರ್ಯ ತತ್ಪರರಾಗಬೇಕು ಎಂದು ಹೇಳಿದರು.

ಶಿವಮೊಗ್ಗ ರಂಗಾಯಣದ ನಿರ್ದೇಶಕ ಪ್ರಸನ್ನ ಮಾತನಾಡಿ, ಇದು ಸರ್ಕಾರದ ಒಂದು ಮಹತ್ವದ ಯೋಜನೆ. ಈ ಯೋಜನೆಯ ಫಲ ಕನ್ನಡ ನಾಡಿನಾದ್ಯಂತ ಹಂಚಿಕೆಯಾಗಬೇಕೆಂಬ ಮಹತ್ವಾಕಾಂಕ್ಷೆಯಿಂದ ತನ್ನ ಕೆಲಸವನ್ನು ಆರಂಭಿಸಿದೆ. ಈ ನಿಟ್ಟಿನಲ್ಲೇ ನಾಟಕ ನಿರ್ಮಿಸಲಾಗಿದೆ. ಈಗಾಗಲೇ 15ಕ್ಕೂ ಹೆಚ್ಚು ಪ್ರದರ್ಶನಗಳನ್ನು ನಾಡಿನ ವಿವಿಧ ಭಾಗಗಳಲ್ಲಿ ಪ್ರದರ್ಶನಗೊಂಡು ಜನಮೆಚ್ಚುಗೆಗೆ ಗಳಿಸಿದೆ. ಈ ಬಗೆಯ ರಂಗ ಚಟುವಟಿಕೆಗಳಿಗೆ ಸರ್ಕಾರ ಅನುದಾನ ನೀಡಿ ಪ್ರೋತ್ಸಾಹಿಸುವ ತುರ್ತು ಅಗತ್ಯವಿದೆ ಎಂದರು.


ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚೇತನ ಕುಮಾರ್ ಉಪಸ್ಥಿತರಿದ್ದರು.

ಬಾಕ್ಸ್‌.........

"ಸ್ವಾತಂತ್ರ್ಯದ ಓಟ " ನಾಟಕ ಪ್ರದರ್ಶನ

ಮುದ್ದುಶ್ರೀ ದಿಬ್ಬದ ವಿಶಾಲ ಬಯಲು ರಂಗದಲ್ಲಿ ಪ್ರದರ್ಶನಗೊಂಡ "ಸ್ವಾತಂತ್ರ್ಯದ ಓಟ " ನಾಟಕ ಜನ ಮೆಚ್ಚುಗೆಗೆ ಗಳಿಸಿತು. ರಂಗನಿರ್ದೇಶಕ ನಟರಾಜ್ ಹೊನ್ನವಳ್ಳಿ ರಂಗಪಠ್ಯ ಸಿದ್ಧಪಡಿಸಿ, ವಿನ್ಯಾಸಗೊಳಿಸಿ ನಿರ್ದೇಶಿಸಿದ್ದರು. ಗೋಮಾರನಹಳ್ಳಿ ಮಂಜುನಾಥ್ ನಾಟಕವನ್ನು ರೂಪಾಂತರಿಸಿದರೆ, ಸಹನಿರ್ದೇಶನ ಸಲ್ಮಾ ದಂಡಿನ್. ಸಂಗೀತ ನಿರ್ದೇಶನ ರಾಘವ ಕಮ್ಮಾರ, ರಂಗಸಜ್ಜಿಕೆ ಮದುಸೂಧನ್, ರಮೇಶ್ ಎಸ್ ಮೈಸೂರು, ಶಂಕರ್ ಕೆ. ಬೆಳಲಕಟ್ಟೆ, ಬೆಳಕಿನ ವಿನ್ಯಾಸ ಮಂಜುನಾರಾಯಣ್. ವಸ್ತ್ರ ವಿನ್ಯಾಸ ಸಹನಾ ಪಿಂಜಾರ್ ಎಲ್ಲರ ಶ್ರಮ ಸ್ವಾತಂತ್ರ್ಯದ ಓಟ ನಾಟಕ ಪ್ರದರ್ಶನದಲ್ಲಿ ಎದ್ದು ಕಾಣುತ್ತಿತ್ತು. 21ಕ್ಕೂ ಹೆಚ್ಚು ಕಲಾವಿದರಿಂದ ನಾಟಕ ಪ್ರದರ್ಶನಗೊಂಡಿತು.

12ಕೆಆರ್ ಎಂಎನ್ 2.ಜೆಪಿಜಿ

ರಾಮನಗರ ತಾಲೂಕಿನ ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ಕೆರೆಮೇಗಳದೊಡ್ಡಿಯ ಮುದ್ದುಶ್ರೀ ದಿಬ್ಬದಲ್ಲಿ ನಡೆದ ಸ್ವಾತಂತ್ರ‍್ಯದ ಓಟ ನಾಟಕ ಪ್ರದರ್ಶನದಲ್ಲಿ ಶಾಸಕ ಇಕ್ಬಾಲ್ ಹುಸೇನ್ ಅವರನ್ನು

ಕೆಎಸ್ ಮುದ್ದಪ್ಪ ಸ್ಮಾರಕ ಟ್ರಸ್ಟ್ ಕಾರ್ಯದರ್ಶಿ ಡಾ. ಎಂ. ಬೈರೇಗೌಡ ಅಭಿನಂದಿಸಿದರು.

------------------------