ದೊಡ್ಡಬಳ್ಳಾಪುರ: ಇಲ್ಲಿನ ಹಿರಿಯ ರಾಜಕಾರಣಿ, ಮಾಜಿ ಶಾಸಕ ಆರ್.ಜಿ.ವೆಂಕಟಾಚಲಯ್ಯ(90) ಶುಕ್ರವಾರ ಬೆಳಗಿನ ಜಾವ ನಿಧನರಾಗಿದ್ದಾರೆ. ಅವರಿಗೆ ಮೂವರು ಪುತ್ರಿಯರಿದ್ದಾರೆ. ಕಳೆದ ಕೆಲ ವರ್ಷಗಳಿಂದ ವಯೋಸಹಜ ಅನಾರೋಗ್ಯದಿಂದ ಅವರು ಬಳಲುತ್ತಿದ್ದರು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು.

ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ 1996ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ಅವರು, 1999 ಮತ್ತು 2008ರಲ್ಲಿ ನಡೆದ ಚುನಾವಣೆಗಳಲ್ಲಿ ಸೋಲು ಕಂಡಿದ್ದರು. ಜಾಲಪ್ಪ ಅವರ ಒಡನಾಡಿಯಾಗಿದ್ದ ಅವರು, ಪಿಎಲ್‌ಡಿ ಬ್ಯಾಂಕ್‌, ಬಿಡಿಸಿಸಿ ಬ್ಯಾಂಕ್, ಟಿಎಪಿಎಂಸಿಎಸ್‌, ಎಪಿಎಂಸಿ ಸೇರಿ ಸಹಕಾರ ಕ್ಷೇತ್ರದಲ್ಲೂ ಛಾಪು ಮೂಡಿಸಿದ್ದರು. ಅವಿಭಜಿತ ಬೆಂ.ಗ್ರಾ ಜಿಲ್ಲಾ ಪಂಚಾಯತಿ ಸದಸ್ಯರಾಗಿ, ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

ದೊಡ್ಡಬಳ್ಳಾಪುರದಲ್ಲಿ ಅಂತಿಮ ನಮನ:

ಬೆಂಗಳೂರಿನಿಂದ ಮೃತರ ಪಾರ್ಥೀವ ಶರೀರವನ್ನು ಶುಕ್ರವಾರ ಮಧ್ಯಾಹ್ನ ದೊಡ್ಡಬಳ್ಳಾಪುರಕ್ಕೆ ತರಲಾಯಿತು. ಇಲ್ಲಿನ ರೈಲು ನಿಲ್ದಾಣ ಬಳಿಯ ವಿ.ಕೃ.ಗೋಕಾಕ್‌ ವೃತ್ತದಿಂದ ಮೃತರ ಪಾರ್ಥೀವ ಶರೀರದ ಅಂತಿಮ ಯಾತ್ರೆ ಆಯೋಜಿಸಲಾಗಿತ್ತು. ಅಪಾರ ಅಭಿಮಾನಿಗಳು ಅಗಲಿದ ನಾಯಕನ ಅಂತಿಮ ದರ್ಶನ ಪಡೆದರು. ಬಸ್‌ ನಿಲ್ದಾಣ, ಡಿಕ್ರಾಸ್‌, ತಾಲೂಕು ಕಚೇರಿ ವೃತ್ತ, ಪ್ರವಾಸಿ ಮಂದಿರ ವೃತ್ತಗಳಲ್ಲೂ ವೆಂಕಟಾಚಲಯ್ಯ ಅವರಿಗೆ ಗೌರವ ಸಲ್ಲಿಸಲಾಯಿತು.

ಬಳಿಕ, ಅವರ ಸ್ವಗ್ರಾಮ ಹಣಬೆಯಲ್ಲಿನ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಶುಕ್ರವಾರ ಸಂಜೆ ಹಣಬೆ ಗ್ರಾಮದಲ್ಲೇ ಮೃತರ ಅಂತ್ಯ ಸಂಸ್ಕಾರ ಬ್ರಾಹ್ಮಣರ ಸಂಪ್ರದಾಯದಂತೆ ನಡೆಯಿತು.


ಮುಖ್ಯಮಂತ್ರಿ ಸೇರಿ ಗಣ್ಯರ ಸಂತಾಪ:

ಆರ್.ಜಿ.ವೆಂಕಟಾಚಲಯ್ಯ ಅವರ ನಿಧನಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಾಮಾಜಿಕ ಮಾಧ್ಯಮದ ಮೂಲಕ ಸಂತಾಪ ಸೂಚಿಸಿದ್ದಾರೆ. ಜನ ಕೇಂದ್ರಿತ ನಾಯಕರಾಗಿದ್ದ ಅವರು, ತಮ್ಮದೇ ಆದ ವಿಶಿಷ್ಟ ವರ್ಚಸ್ಸು ಹೊಂದಿದ್ದರು. ದೊಡ್ಡಬಳ್ಳಾಪುರ ಭಾಗದ ಅಭಿವೃದ್ದಿಗೆ ಅವರ ಕೊಡುಗೆ ಅಪಾರ ಎಂದು ಮುಖ್ಯಮಂತ್ರಿ ತಮ್ಮ ಸಂತಾಪದಲ್ಲಿ ತಿಳಿಸಿದ್ದಾರೆ.

ಸಚಿವ ಕೆ.ಎಚ್.ಮುನಿಯಪ್ಪ, ಸಾರ್ವಜನಿಕ ಜೀವನದಲ್ಲಿ ಬಹುಕಾಲ ಸೇವೆ ಸಲ್ಲಿಸಿದ ಅವರ ಜನಪರ ಕಾಳಜಿ, ಆತ್ಮೀಯ ವ್ಯಕ್ತಿತ್ವ ಸದಾ ಸ್ಮರಣೀಯ ಎಂದು ಸಂತಾಪ ಸೂಚಿಸಿದ್ದಾರೆ. ಉಳಿದಂತೆ, ಮಾಜಿ ಮುಖ್ಯಮಂತ್ರಿ ವೀರಪ್ಪಮೊಯ್ಲಿ, ಶಾಸಕ ಧೀರಜ್‌ ಮುನಿರಾಜ್, ಮಾಜಿ ಶಾಸಕ ಟಿ.ವೆಂಕಟರಮಣಯ್ಯ, ಕಾಂಗ್ರೆಸ್‌ ಪಕ್ಷದ ಅನೇಕ ಮುಖಂಡರು ಸಂತಾಪ ಸೂಚಿಸಿದ್ದಾರೆ.12ಕೆಡಿಬಿಪಿ7- ಆರ್.ಜಿ.ವೆಂಕಟಾಚಲಯ್ಯ.12ಕೆಡಿಬಿಪಿ8-

ದೊಡ್ಡಬಳ್ಳಾಪುರದಲ್ಲಿ ಆರ್.ಜಿ.ವೆಂಕಟಾಚಲಯ್ಯ ಪಾರ್ಥಿವ ಶರೀರದ ಅಂತಿಮ ಯಾತ್ರೆಯಲ್ಲಿ ಸಚಿವ ಕೆ.ಎಚ್.ಮುನಿಯಪ್ಪ ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು.