ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶಗಳಿವೆ; ಶಾಸಕ ಗುರ್ಮೆ ಸುರೇಶ್ ಶೆಟ್ಟಿ

| Published : Sep 08 2025, 01:01 AM IST

ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶಗಳಿವೆ; ಶಾಸಕ ಗುರ್ಮೆ ಸುರೇಶ್ ಶೆಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಹೋಟೆಲ್ ಉದ್ಯಮದಲ್ಲಿ ಉದ್ಯೋಗ ಅವಕಾಶಗಳು ವಿಪುಲವಾಗಿದ್ದು, ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಬೇಕು.

ಜಿಲ್ಲಾ ವಾಣಿಜ್ಯ, ಕೈಗಾರಿಕಾ ಸಂಸ್ಥೆಯ ಜಿಲ್ಲಾ ಸಮನ್ವಯ ಸಭೆ

ಕನ್ನಡಪ್ರಭ ವಾರ್ತೆ ಬಳ್ಳಾರಿ

ಹೋಟೆಲ್ ಉದ್ಯಮದಲ್ಲಿ ಉದ್ಯೋಗ ಅವಕಾಶಗಳು ವಿಪುಲವಾಗಿದ್ದು, ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಕರ್ನಾಟಕ ರಾಜ್ಯ ಹೋಟೆಲ್ ಸಂಘ ಹಾಗೂ ಬಳ್ಳಾರಿ ಜಿಲ್ಲಾ ಹೋಟೆಲ್ ಸಂಘದ ಸಹಯೋಗದಲ್ಲಿ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಆಡಿಟೋರಿಯಂನಲ್ಲಿ ನಡೆದ ಜಿಲ್ಲಾ ಸಮನ್ವಯ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶಗಳಿವೆ. ಈ ಅವಕಾಶಗಳನ್ನು ಬಳಸಿಕೊಂಡು ಉದ್ಯಮದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಯಲು ಆಸಕ್ತಿ ಇರುವವರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳನ್ನು ಸದುಪಯೋಗ ಮಾಡಿಕೊಳ್ಳುವಂತಾಗಬೇಕು ಎಂದರು.

ಬಳ್ಳಾರಿಯಲ್ಲಿಯ ತಮ್ಮ ಬಾಲ್ಯ ಮತ್ತು ಯೌವ್ವನದ ದಿನಗಳನ್ನು ಮೆಲುಕು ಹಾಕಿದ ಶಾಸಕ ಗುರ್ಮೆ ಸುರೇಶ ಶೆಟ್ಟಿ ಅವರು, ನಾನು, ಬಳ್ಳಾರಿಯಲ್ಲಿ ಕೇವಲ ಹೋಟಲ್ ಉದ್ಯಮಿ ಆಗಿರಲಿಲ್ಲ. ಇಲ್ಲಿಯ ನೆಲ, ಜಲ, ನುಡಿ – ಜನರ ಜೊತೆಯಲ್ಲಿ ಬೆರತು ಈ ಮಟ್ಟಕ್ಕೆ ಬೆಳೆದಿದ್ದೇನೆ. ನಾನು, ನನ್ನ ಕುಟುಂಬ ಬಳ್ಳಾರಿಯನ್ನು ಸದಾಕಾಲ ಸ್ಮರಿಸುತ್ತೇವೆ ಎಂದರು.

ಮುಖ್ಯ ಅತಿಥಿಯಾಗಿದ್ದ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ ಮಾತನಾಡಿ, ಕರ್ನಾಟಕದಲ್ಲಿ ಹೋಟೆಲ್‌ ಉದ್ಯಮದ ಜೊತೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಹಯೋಗಕ್ಕೆ ಬಳ್ಳಾರಿಯಿಂದ ಶ್ರೀಕಾರ ಹಾಕಿರುವುದು ಅತ್ಯುತ್ತಮವಾದ ಬೆಳವಣಿಗೆ. ಬಳ್ಳಾರಿ ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಿ ಸ್ಥಳೀಯ ಆರ್ಥಿಕತೆಯನ್ನು ಬಲಪಡಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಬಳ್ಳಾರಿಯಾದ್ಯಂತ ಉದ್ಯಮಕ್ಕೆ ಅತ್ಯುತ್ತಮವಾದ ಅವಕಾಶಗಳಿವೆ ಎಂದರು.

ಹೋಟೆಲ್ ಸೇರಿ ನವ ಮತ್ತು ಯುವ ಉದ್ಯಮಿಗಳ ಪ್ರೋತ್ಸಾಹಕ್ಕೆ ಅಗತ್ಯವಾಗಿರುವ ಮಾರ್ಗದರ್ಶನ, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳು - ಸೌಲಭ್ಯಗಳ ಕುರಿತಾಗಿ ಮಾಹಿತಿ ನೀಡಲು ಶೀಘ್ರದಲ್ಲೇ `ಚೇಂಬರ್ ಇಂಕ್ಯುಬೇಷನ್ ಸೆಂಟರ್’ ಅನ್ನು ಪ್ರಾರಂಭಿಸುತ್ತಿದ್ದೇವೆ ಎಂದರು.

ಅಬಕಾರಿ ಇಲಾಖೆಯ ಆಯುಕ್ತ ಮಂಜುನಾಥ್ ಮತ್ತು ಜಿಎಸ್‌ಟಿ ಅಧಿಕಾರಿ ಜಿ. ವಿಶ್ವನಾಥ್ ಹೋಟೆಲ್ ಉದ್ಯಮ ಹಾಗೂ ತೆರಿಗೆ ಕುರಿತು ಮಾತನಾಡಿದರು. ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕರಾದ ಡಾ. ಎಸ್. ತಿಪ್ಪೇಸ್ವಾಮಿ ಪ್ರವಾಸೋದ್ಯಮ ಮತ್ತು ಹೋಟಲ್ ಉದ್ಯಮದ ಅವಕಾಶಗಳ ಕುರಿತು ಮಾತನಾಡಿದರು.

ಕರ್ನಾಟಕ ರಾಜ್ಯ ಹೋಟೆಲ್ ಸಂಘದ ವಿಶ್ವನಾಥ ಶೆಟ್ಟಿ ಸ್ವಾಗತ ಕೋರಿದರು. ರೂಪಾ ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು.

ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘದ ಅಧ್ಯಕ್ಷ ಜಿ.ಕೆ. ಶೆಟ್ಟಿ, ಕರ್ನಾಟಕ ರಾಜ್ಯ ಹೋಟಲ್ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎ. ಮಧುಸೂಧನ್, ವೇದಿಕೆಯಲ್ಲಿ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಅವ್ವಾರು ಮಂಜುನಾಥ್, ಬಳ್ಳಾರಿ ಜಿಲ್ಲಾ ಗೌರವ ಕಾರ್ಯದರ್ಶಿ ವಿಕ್ರಂ ಪೋಲಾ ಕರ್ನಾಟಕ ರಾಜ್ಯ ಹೋಟಲ್ ಸಂಘದ ಗೌರವ ಕಾರ್ಯದರ್ಶಿಗಳಾದ ಎಂ.ವಿ. ರಾಘವೇಂದ್ರ,

ಸಂಸ್ಥೆಯ ಉಪಾಧ್ಯಕ್ಷರಾದ, ಎಸ್.ದೊಡ್ಡನಗೌಡ, ಸೊಂತಗಿರಿಧರ ಗೌರವ ಕಾರ್ಯದರ್ಶಿಗಳಾದ, ಕೆ.ಸಿ. ಸುರೇಶಬಾಬು, ಜಂಟಿ ಕಾರ್ಯದರ್ಶಿಗಳಾದ, ಡಾ.ಮರ್ಚೇಡ್ ಮಲ್ಲಿಕಾರ್ಜುನಗೌಡ, ವಿ.ರಾಮಚಂದ್ರ, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಹೋಟಲ್ ಸಂಘದ ಸದಸ್ಯರ ಉಪಸ್ಥಿತರಿದ್ದರು.