ರಾಜ್ಯದಲ್ಲಿ ಈ ವರೆಗೆ 24 ಸಭಾಪತಿಗಳು ಆಗಿ ಹೋಗಿದ್ದಾರೆ. ಆದರೆ ಯಾರ ಮೇಲೆಯೂ ಅವಿಶ್ವಾಸ ಮಂಡನೆಯಾಗಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡುವರು ಸಭಾಪತಿಯಾಗಿರಬೇಕು. ನಾನೂ ಅತ್ಯಂತ ಪ್ರಾಮಾಣಿಕ, ನಿಷ್ಪಕ್ಷಪಾತವಾಗಿ ಕೆಲಸ ಮಾಡಿದ್ದೇನೆ ಎಂದು ಬಸವರಾಜ ಹೊರಟ್ಟಿ ಹೇಳಿದರು.
ಹುಬ್ಬಳ್ಳಿ:
ನನ್ನ ವಿರುದ್ಧ ಅವಿಶ್ವಾಸ ಮಂಡಿಸಲು ಯಾವುದೇ ಕಾರಣಗಳಿಲ್ಲ. ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಿದ್ದೇನೆ. ಒಂದು ವೇಳೆ ಮಂಡಿಸಿದರೆ ಕಾರಣ ಕೇಳುತ್ತೇನೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಭಾಪತಿಗಳು ಭ್ರಷ್ಟಾಚಾರ, ಏಕಪಕ್ಷೀಯವಾಗಿ ವರ್ತಿಸಿದರೆ ಮಾತ್ರ ಅವಿಶ್ವಾಸ ಮಂಡನೆ ಮಾಡಬೇಕು. ಆದರೆ, ನನ್ನ ಮೇಲೆ ಅಂತಹ ಯಾವುದೇ ಆರೋಪಗಳಿಲ್ಲ. ಅವಿಶ್ವಾಸ ಮಂಡನೆಗೆ ಏನಾದರೂ ಕಾರಣ ಬೇಕಲ್ಲವೇ? ನಾನು ಸಭಾಪತಿಯಾಗಿ ಪ್ರಾಮಾಣಿಕ ಕೆಲಸ ಮಾಡಿದ್ದೇನೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪರಿಷತ್ ಸದಸ್ಯರ ಅಧಿಕಾರದ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಈ ವರೆಗೆ 24 ಸಭಾಪತಿಗಳು ಆಗಿ ಹೋಗಿದ್ದಾರೆ. ಆದರೆ ಯಾರ ಮೇಲೆಯೂ ಅವಿಶ್ವಾಸ ಮಂಡನೆಯಾಗಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡುವರು ಸಭಾಪತಿಯಾಗಿರಬೇಕು. ನಾನೂ ಅತ್ಯಂತ ಪ್ರಾಮಾಣಿಕ, ನಿಷ್ಪಕ್ಷಪಾತವಾಗಿ ಕೆಲಸ ಮಾಡಿದ್ದೇನೆ. ನನ್ನ ವಿರುದ್ಧ ಅವಿಶ್ವಾಸ ಮಂಡನೆಗೆ ಯಾವುದೇ ಕಾರಣಗಳಿಲ್ಲ. ಹಾಗೊಂದು ವೇಳೆ ಅವರು ಅವಿಶ್ವಾಸ ಮಂಡನೆ ಮಾಡಲೇಬೇಕು ಎಂದಾದರೆ ಮಾಡಲಿ. ನಂತರದಲ್ಲಿ ಯಾವ ಕಾರಣಕ್ಕೆ ಅವಿಶ್ವಾಸ ಮಾಡಿದ್ದೀರಾ? ಎಂದು ಪ್ರಶ್ನಿಸುತ್ತೇನೆ ಎಂದರು.ಬಾವಿಗೆ ಇಳಿಯಬೇಡಿ:
ಬೆಳಗಾವಿ ಅಧಿವೇಶನ ಶಾಂತಿಯುತ ಹಾಗೂ ಸುಸೂತ್ರವಾಗಿ ನಡೆಯುತ್ತದೆ. ಉಕ ಭಾಗದ ಪ್ರಶ್ನೆಗಳಿಗೆ ಹೆಚ್ಚಿನ ಅವಕಾಶ ನೀಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿರುವ ಹೊರಟ್ಟಿ, ಎಲ್ಲ ಶಾಸಕ-ಸಚಿವರು ಆಸಕ್ತಿ ವಹಿಸಿ ಸದನದಲ್ಲಿ ಭಾಗಿಯಾಗಬೇಕು. ಕೇವಲ ಪ್ರತಿಭಟನೆ ಮಾಡುವುದು, ಬಾವಿಗೆ ಇಳಿದು ಕೂರುವುದು ಮಾಡಬೇಡಿ ಎಂದು ಎಲ್ಲರಿಗೂ ಹೇಳಿದ್ದೇನೆ. ಶಾಸಕರು ತಂಗಲು ಶಾಸಕರ ಭವನ ಕಟ್ಟಿಸುವ ಅವಶ್ಯಕತೆ ಇದೆ. ಈ ಬಗ್ಗೆ ಸಿಎಂ ಜೊತೆ ಚರ್ಚಿಸಲಾಗುವುದು. ಅನೇಕ ಶಾಸಕರು-ಸಚಿವರು ಇಂತಹದೇ ಹೋಟೆಲ್‌ನಲ್ಲಿ ಕೋಣೆ ಬೇಕು ಎಂದು ಪತ್ರ ಬರೆದಿದ್ದಾರೆ. ಅದನ್ನು ಮುಖ್ಯ ಕಾರ್ಯದರ್ಶಿಗೆ ತಿಳಿಸಿದ್ದೇನೆ ಎಂದರು.ಬೆಳಗಾವಿ ಅಧಿವೇಶನದ ವೇಳೆ ಬರೀ ಪ್ರತಿಭಟನೆಗಳು ನಡೆಯುವುದರಿಂದ ಮೈಸೂರು, ಬೆಂಗಳೂರಿನಿಂದ ಬರುವ ಶಾಸಕ-ಸಚಿವರು ಹಾಗೂ ಅಧಿಕಾರಿಗಳು ಶುಕ್ರವಾರವೇ ವಾಪಸ್ ಹೋಗಿ ಬಿಡುತ್ತಾರೆ. ಆದ್ದರಿಂದ ಉತ್ತರ ಕರ್ನಾಟಕ ಸಮಸ್ಯೆಗಳ ಚರ್ಚೆಗೆ ಬುಧವಾರ ಅವಕಾಶ ನೀಡಲಾಗುತ್ತಿದೆ ಎಂದರು.
ಜನಪರ ಕೆಲಸ ಮಾಡಿ:ರಾಜ್ಯದಲ್ಲಿನ ಕ್ರಾಂತಿ ಬಗ್ಗೆ ನನಗೇನು ಗೊತ್ತಿಲ್ಲ. ಆದರೆ, ಸರ್ಕಾರ ಒಳ್ಳೆಯ ಕೆಲಸ ಮಾಡಲಿ. ರಾಜ್ಯದಲ್ಲಿ ರಾಜಕೀಯ ಗೊಂದಲದ ವಿಚಾರಗಳು ಸಾಕಷ್ಟು ಸುದ್ದಿಯಾಗುತ್ತಿದೆ. ಜನರ ಸಲುವಾಗಿ ಸರ್ಕಾರ ಸ್ಪಂದಿಸಬೇಕು. ನಿಮ್ಮ ಗೊಂದಲಗಳು ಏನೇ ಇರಲಿ, ಜನರ ಪರವಾಗಿ ಕೆಲಸ ಮಾಡಬೇಕು ಎಂದು ಹೊರಟ್ಟಿ ಕಿವಿಮಾತು ಹೇಳಿದರು. ಸರ್ಕಾರ ಒಳ್ಳೆಯ ಕೆಲಸ ಮಾಡಿ, ಜನರಿಗೆ ಸ್ಪಂದಿಸಬೇಕು. ಜನರಿಗೆ ಭರವಸೆ ಕೊಟ್ಟಿರುವಂತೆ ಉತ್ತಮ ಆಡಳಿತ ನೀಡಬೇಕು ಎಂದು ಸಲಹೆ ನೀಡಿದರು.