ಚನ್ನಪಟ್ಟಣ ನಿಜಕ್ಕೂ ಕಲೆಗಳ ತವರೂರು. ಇಲ್ಲಿ ಎಲ್ಲಾ ಪ್ರಕಾರದ ಕಲಾವಿದರು, ಹೋರಾಟಗಾರರು, ರಾಜಕೀಯ ನಾಯಕರು, ಕಲಾ ಪೋಷಕರು ಇದ್ದಾರೆ. ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ಗುಣವನ್ನು ಈ ಪುಣ್ಯಭೂಮಿ ಹೊಂದಿದೆ .

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ಕಲಾವಿದರು ಶ್ರೀಮಂತರಲ್ಲದಿದ್ದರೂ ಕಲೆಯನ್ನು ಮೈಗೂಡಿಸಿಕೊಂಡಿರುವ ಕಲಾವಿದರು ಶ್ರೀಮಂತರು. ಕಲೆಗಿಂತ ದೊಡ್ಡ ಶ್ರೀಮಂತಿಕೆ ಬೇರೊಂದಿಲ್ಲ ಎಂದು ಅಖಿಲ ಭಾರತ ಸನಾತನ ಧರ್ಮ ಜಾಗರಣ ಮಂಚ್ ದಕ್ಷಿಣ ಭಾರತದ ಮುಖ್ಯಸ್ಥರು, ಕೇಂದ್ರ ಕಿಸಾನ್ ಸಮಿತಿ ನಿರ್ದೇಶಕರೂ ಆದ ಡಾ.ಆರ್.ಎಸ್.ರಾಜು ಅಭಿಪ್ರಾಯಪಟ್ಟರು.

ನಗರದ ಶತಮಾನೋತ್ಸವ ಭವನದಲ್ಲಿ ಗಾಯಕ ಹಾಗೂ ಸಾಂಸ್ಕೃತಿಕ ಸಂಘಟಕ ಡಾ.ರಾ.ಬಿ.ನಾಗರಾಜ್ ಸಾರಥ್ಯದಲ್ಲಿ ಸಂಗೀತ ಸೌರಭ ವಾದ್ಯಗೋಷ್ಠಿ ತಂಡದಿಂದ ಆಯೋಜಿಸಿದ್ದ ಎಂದೂ ಮರೆಯದ ಹಾಡುಗಳ ಸಂಗೀತ ಸಂಜೆ ಹಾಗೂ ಕಲಾ ಪೋಷಕರಿಗೆ ಗೌರವಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಹಿಂದಿನ ಹಳೆಯ ಚಿತ್ರಗೀತೆಗಳು ಮನಸ್ಸಿಗೆ ತಂಪು, ಶಾಂತಿ, ನೆಮ್ಮದಿ ಮತ್ತು ಹಿತವನ್ನು ಕೊಡುತ್ತವೆ. ಮನಸ್ಸಿನ ನೋವು, ಚಿಂತೆಯನ್ನು ದೂರ ಮಾಡುತ್ತವೆ. ಅಷ್ಟರ ಮಟ್ಟಿಗೆ ಹಿಂದಿನ ಹಾಡುಗಳು ಸಾಹಿತ್ಯ ಮತ್ತು ಸಂಗೀತದಲ್ಲಿ ತನ್ನ ಗಟ್ಟಿತನ, ಜನರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿಯನ್ನು ಹೊಂದಿವೆ. ಪ್ರತಿಯೊಬ್ಬರೂ ಕಲೆ ಮತ್ತು ಕಲಾವಿದರನ್ನು ಗೌರವಿಸುವ ಕೆಲಸ ಮಾಡಿದಾಗ ಕಲೆ ಮತ್ತು ಕಲಾವಿದ ಉಳಿಯುತ್ತಾನೆ ಎಂದರು.

ಗಾಯಕ ಡಾ.ರಾ.ಬಿ.ನಾಗರಾಜ್ ಅವರು ಒಬ್ಬ ಕಲಾವಿದರರಾಗಿ, ಕಲಾವಿದರ ತಂಡವನ್ನು ಕಟ್ಟಿಕೊಂಡು ಕಳೆದ ೨೫-೩೦ ವರ್ಷಗಳಿಂದ ನಾಡಿನಾದ್ಯಂತ ಇಂತಹ ಕಾರ್ಯಕ್ರಮಗಳನ್ನು ನಡೆಸಿಕೊಂಡು ಕಲೆಯನ್ನು ಉಳಿಸಿ ಬೆಳೆಸುವ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.

ಕಲಾಪೋಷಕ ಗೌರವವನ್ನು ಸ್ವೀಕರಿಸಿದ ಕಲಾವಿದರಾದ ಎಂ.ಜಯರಾಮು, ಕಸಾಪ ಜಿಲ್ಲಾ ಮಾಜಿ ಅಧ್ಯಕ್ಷ ಬಿ.ಟಿ.ಚಿಕ್ಕಪುಟ್ಟೇಗೌಡ, ಹಿರಿಯ ರಂಗಭೂಮಿ ಕಲಾವಿದರು, ಎಲೇಕೇರಿ ರವೀಶ್ ಮಾತನಾಡಿ, ಗಾಯಕ ರಾ.ಬಿ.ನಾಗರಾಜ್ ಅವರ ಕಲಾಸೇವೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ,ಇಂತಹ ಕಾರ್ಯಕ್ರಮಗಳಿಗೆ ನಮ್ಮೆಲ್ಲರ ಸಹಕಾರ, ಪ್ರೋತ್ಸಾಹ ಸದಾ ಇರುತ್ತದೆ ಎಂದರು.

ಗಾಯಕ ಡಾ.ರಾ.ಬಿ.ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ಚನ್ನಪಟ್ಟಣ ನಿಜಕ್ಕೂ ಕಲೆಗಳ ತವರೂರು. ಇಲ್ಲಿ ಎಲ್ಲಾ ಪ್ರಕಾರದ ಕಲಾವಿದರು, ಹೋರಾಟಗಾರರು, ರಾಜಕೀಯ ನಾಯಕರು, ಕಲಾ ಪೋಷಕರು ಇದ್ದಾರೆ. ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ಗುಣವನ್ನು ಈ ಪುಣ್ಯಭೂಮಿ ಹೊಂದಿದೆ ಎಂದು ಹೇಳಿ, ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು.

ಸಂದರ್ಭದಲ್ಲಿ ಹಲವರಿಗೆ ಕಲಾ ಪೋಷಕ ಗೌರವ ನೀಡಿ ಅಭಿನಂದಿಸಲಾಯಿತು.

ಗಾಯಕರಾದ ಡಾ.ರಾ.ಬಿ.ನಾಗರಾಜ್, ಮೈಸೂರು ಜಯರಾಂ, ಮಂಡ್ಯ ರಾಘವೇಂದ್ರ, ರಾಧಾಕೃಷ್ಣ ಸಾಗರ, ಮೈಸೂರು ಶ್ರೀಹರಿ, ಹೇಮಾ ಆನಂದ್, ಶಿವಶಂಕರ್ ಹಾಗೂ ಸ್ಥಳೀಯ ಕಲಾವಿದರಾದ ಎಂ.ಜಿ.ಮಹೇಶ್, ಉಮೇಶ್ ಸೇರಿ ಹಲವರು ಹಳೆಯ ಚಿತ್ರಗೀತೆಗಳನ್ನು ಹಾಡಿ ನೆರೆದಿದ್ದ ಪ್ರೇಕ್ಷಕರ ಮನಸ್ಸನ್ನು ಮುದಗೊಳಿಸಿದರು.