ಸಾಕಷ್ಟು ರಂಗಕಲಾವಿದರಿದ್ದರೂ ರಂಗಮಂದಿರವೇ ಇಲ್ಲದಂತಾಗಿದೆ.

ಸಿ. ಕೆ. ನಾಗರಾಜ

ಮರಿಯಮ್ಮನಹಳ್ಳಿ: ರಂಗಕಲೆಗಳ ತವರೂರು ಮರಿಯಮ್ಮನಹಳ್ಳಿಯಲ್ಲಿ ನಿರಂತರ ರಂಗ ಚಟುವಟಿಕೆ ನಡೆಸಲು ಸುಸಜ್ಜಿತ ರಂಗಮಂದಿರ ಇಲ್ಲದಿರುವುದು ಕಲಾವಿದರಲ್ಲಿ ಬೇಸರ ಮೂಡಿಸಿದೆ.

ಮರಿಯಮ್ಮನಹಳ್ಳಿ ಎಂದರೆ ನಾಟಕಗಳ ರಾಜಧಾನಿ. ರಂಗಭೂಮಿಗೆ ಇಲ್ಲಿಯ ಕಲಾವಿದರು ನೀಡಿದ ಕೊಡುಗೆ ಅನನ್ಯ. ಸಾಕಷ್ಟು ರಂಗಕಲಾವಿದರಿದ್ದರೂ ರಂಗಮಂದಿರವೇ ಇಲ್ಲದಂತಾಗಿದೆ.

ನಾಲ್ಕು ದಶಕಗಳ ಹಿಂದೆ ಮಾಜಿ ಉಪಮುಖ್ಯಮಂತ್ರಿಯಾಗಿದ್ದ ಎಂ.ಪಿ. ಪ್ರಕಾಶ್‌ ಬಯಲು ರಂಗಮಂದಿರ ನಿರ್ಮಿಸಿ ಕೊಟ್ಟಿದ್ದರು. ಆಗ ಹೆಗ್ಗೋಡಿನ ನೀನಾಸಂನ ಸಂಸ್ಥಾಪಕ ಕೆ.ವಿ. ಸುಬ್ಬಣ್ಣ ರಂಗಮಂದಿರದ ವಿನ್ಯಾಸ ರೂಪಿಸಿದ್ದರು. ಇದಕ್ಕೆ ಹಿರಿಯ ರಂಗಕಲಾವಿದ ಡಿ. ದುರ್ಗಾದಾಸ್‌ ಹೆಸರು ಇಡಲಾಯಿತು. ದುರ್ಗಾದಾಸ್‌ ರಂಗಮಂದಿರಕ್ಕೆ ಈಗ ಅಭಿವೃದ್ಧಿಯ ಕಾಯಕಲ್ಪ ಬೇಕಾಗಿದೆ.

ಆರ್‌ಸಿಸಿ ಚಾವಣಿ:

ಕೆ. ನೇಮರಾಜ್‌ ನಾಯ್ಕ್ ಅವರು 2008ರಲ್ಲಿ ಶಾಸಕರಾಗಿದ್ದ ಸಂದರ್ಭದಲ್ಲಿ ರಂಗಮಂದಿರದ ತಗಡಿನ ಶೀಟ್‌ ತೆಗೆದು ಆರ್‌ಸಿಸಿ ಚಾವಣಿ ಹಾಕಿಸಿಕೊಟ್ಟಿದ್ದರು. ನಂತರ ಶಾಸಕರಾಗಿದ್ದ ಎಸ್‌. ಭೀಮಾನಾಯ್ಕ ರಂಗಮಂದಿರದ ಸುತ್ತ ಕಾಂಪೌಂಡ್‌ ನಿರ್ಮಿಸಿಕೊಟ್ಟಿದ್ದರು. ಇಬ್ಬರು ಶಾಸಕರು ತಮ್ಮ ಅಧಿಕಾರಾವಧಿಯಲ್ಲಿ ರಂಗಮಂದಿರದ ಮುಂದಿನ ಪ್ರೇಕ್ಷಗಾರಕ್ಕೆ ತಗಡಿನ ಶೀಟಿನ ಹೊದಿಕೆ ಹಾಕಲು ₹10 ಲಕ್ಷ ಅನುದಾನ ಮಂಜೂರು ಮಾಡಿಸಿದ್ದೇವೆ ಎಂದು ಹೇಳುತ್ತಾ ಬಂದರೆ ವಿನಃ ಅದು ಈ ವರೆಗೆ ಕೈಗೂಡಿಲ್ಲ.

ನಾಲ್ಕು ದಶಕಗಳ ಹಿಂದೆ ನಿರ್ಮಾಣವಾದ ಬಯಲು ರಂಗ ಮಂದಿರ ವೇದಿಕೆ ಈಗ ನೆಲಸಮವಾಗಿದೆ. ಮಳೆ ಬಂದರೆ ನಾಟಕ ನೋಡುವ ಪ್ರೇಕ್ಷಕರು ತೊಯ್ಸಿಕೊಳ್ಳುತ್ತಾರೆ. ಮತ್ತು ನಾಟಕ ಬಂದ್‌ ಆಗುತ್ತದೆ.

ಬಯಲು ರಂಗಮಂದಿರಕ್ಕೆ ಸೂಕ್ತ ನಿರ್ವಹಣೆ ಇಲ್ಲ. ಕುಡಿದು ಬಿಟ್ಟು ಹೋದ ಗಾಜಿನ ಬಾಟಲಿಗಳು ಮತ್ತು ಗಾಜಿನ ಚೂರುಗಳು, ಬೀಡಿ, ಸಿಗರೆಟು, ಗುಟ್ಕಾ ಚೀಟಿಗಳು ರಾಶಿಯಾಗಿ ಬಿದ್ದಿರುತ್ತವೆ. ಯಾವಾಗಲಾದರೂ ನಾಟಕ ಪ್ರದರ್ಶನ ನಡೆಸಬೇಕು ಎಂದಾದರೆ ಕಲಾದವಿದರು ಬಂದು ಸ್ವಚ್ಛಗೊಳಿಸಿಕೊಳ್ಳುತ್ತಾರೆ.

ಈ ಎಲ್ಲ ಸಮಸ್ಯೆಗಳಿಂದ ಮರಿಯಮ್ಮನಹಳ್ಳಿಯಲ್ಲಿ ಈಗ ರಂಗಚಟುವಟಿಕೆ ಕಡಿಮೆಯಾಗುತ್ತಿದೆ. ಸುಸಜ್ಜಿತವಾದ ರಂಗಮಂದಿರ ನಿರ್ಮಿಸುವ ಅವಶ್ಯಕತೆ ಇದೆ. ಬಯಲು ರಂಗಮಂದಿದ ಕಾಲುಭಾಗ ಇದೀಗ ರೈಲ್ವೆ ಇಲಾಖೆ ವ್ಯಾಪ್ತಿಗೆ ಹೋಗಿದೆ. ಉಳಿದ ಇದೇ ಸ್ಥಳದಲ್ಲಿಯಾಗಲಿ ಅಥ‍ವಾ ಬೇರೆ ಸ್ಥಳದಲ್ಲಿಯಾಗಲಿ ಸುಸಜ್ಜಿತ ರಂಗ ಮಂದಿರ ನಿರ್ಮಾಣ ಮಾಡಬೇಕು ಎಂಬುದು ಕಲಾವಿದರ ಬೇಡಿಕೆಯಾಗಿದೆ.

ಮರಿಯಮ್ಮನಹಳ್ಳಿಯಲ್ಲಿ ನಿರಂತರ ರಂಗ ಚಟುವಟಿಕೆ ನಡೆಯುತ್ತಿವೆ. ಎಲ್ಲ ಸಂಘ-ಸಂಸ್ಥೆಗಳು ಒಗ್ಗಟ್ಟಾಗಿ ಜನಪ್ರನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಸುಸಜ್ಜಿತವಾದ ರಂಗಮಂದಿರ ನಿರ್ಮಾಣಕ್ಕೆ ಮನವಿ ಸಲ್ಲಿಸುವ ಮೂಲಕ ಒತ್ತಾಯಿಸಬೇಕು ಎನ್ನುತ್ತಾರೆ ಗುಬ್ಬಿವೀರಣ್ಣ ಪ್ರಶಸ್ತಿ ಪುರಸ್ಕೃತೆ ಕಲಾವಿದೆ ಡಾ. ಕೆ. ನಾಗರತ್ನಮ್ಮ.

ಕಲೆಯ ತವರೂರು ಎಂದೇ ಪ್ರಖ್ಯಾತಿ ಪಡೆದಿರುವ ಮರಿಯಮ್ಮನಹಳ್ಳಿಯಲ್ಲಿ ಒಂದು ಸುಸಜ್ಜಿತವಾದ ರಂಗಮಂದಿರ ಇಲ್ಲದಿರುವುದು ದುರಂತ ಸಂಗತಿಯಾಗಿದೆ ಎನ್ನುತ್ತಾರೆ ರಂಗಕರ್ಮಿ ಬಿ.ಎಂ.ಎಸ್‌. ಪ್ರಭು.