ಅಂಕೋಲಾ ತಾಲೂಕಿನ ಅವರ್ಸಾದ ಪ್ರತಿಷ್ಠಿತ ಶ್ರೀ ಕಾತ್ಯಾಯನಿ ಪ್ರೌಢಶಾಲೆಯು 75 ವರ್ಷ ಪೂರೈಸಿದ್ದು, ಡಿ. 26ರಿಂದ 28 ರವರೆಗೆ ಮೂರು ದಿನಗಳ ಕಾಲ ಅದ್ಧೂರಿ ಅಮೃತ ಮಹೋತ್ಸವವನ್ನು ಆಚರಿಸಲು ಸಜ್ಜಾಗಿದೆ.

26 ರಿಂದ 3 ದಿನಗಳ ಕಾಲ ವೈಭವದ ಅಮೃತ ಮಹೋತ್ಸವ: ಸಭಾಪತಿ ಹೊರಟ್ಟಿ ಚಾಲನೆ

ಕನ್ನಡಪ್ರಭ ವಾರ್ತೆ ಕಾರವಾರ

ಅಂಕೋಲಾ ತಾಲೂಕಿನ ಅವರ್ಸಾದ ಪ್ರತಿಷ್ಠಿತ ಶ್ರೀ ಕಾತ್ಯಾಯನಿ ಪ್ರೌಢಶಾಲೆಯು 75 ವರ್ಷ ಪೂರೈಸಿದ್ದು, ಡಿ. 26ರಿಂದ 28 ರವರೆಗೆ ಮೂರು ದಿನಗಳ ಕಾಲ ಅದ್ಧೂರಿ ಅಮೃತ ಮಹೋತ್ಸವವನ್ನು ಆಚರಿಸಲು ಸಜ್ಜಾಗಿದೆ ಎಂದು ಶಾಲೆಯ ನಿವೃತ್ತ ಮುಖ್ಯಾಧ್ಯಾಪಕ ಡಿ.ಆರ್. ಹಿಚ್ಕಡ ಮಾಹಿತಿ ನೀಡಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಡಿ.26ರಂದು ಸಂಜೆ 4 ಗಂಟೆಗೆ ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆ ವಹಿಸಲಿದ್ದು, ಶಾಸಕ ಸತೀಶ್ ಸೈಲ್, ಐಸಿಎಂಆರ್ ಮಾಜಿ ನಿರ್ದೇಶಕಿ ಡಾ. ಸ್ಮಿತಾ ಡಿ.ಮಹಾಲೆ, ಕೆಎಲ್‌ಇ ತಾಂತ್ರಿಕ ಮಹಾವಿದ್ಯಾಲಯದ ಉಪಕುಲಪತಿ ಡಾ. ಪ್ರಕಾಶ ತೆವರಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಇದೇ ವೇಳೆ ಜ್ಞಾನಮೃತ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಗುವುದು. ಅಂದು ರಾತ್ರಿ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈಭವ ಜರುಗಲಿದೆ.

ಡಿ.27ರಂದು ಸಂಜೆ 4 ಗಂಟೆಗೆ ನಡೆಯುವ ಸಮಾರಂಭದಲ್ಲಿ ಈವರೆಗಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ಶಾಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು, ಹಳೆಯ ಮತ್ತು ಹಾಲಿ ಶಿಕ್ಷಕರು, ಆಡಳಿತ ಮಂಡಳಿ ಸದಸ್ಯರು ಹಾಗೂ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮದಲ್ಲಿ ಎಂಎಲ್ಸಿ ಗಣಪತಿ ಉಳ್ವೇಕರ್, ಬಿಇಒ ಮಂಗಳಲಕ್ಷ್ಮೀ ಪಾಟೀಲ ಮುಂತಾದವರು ಭಾಗವಹಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪ್ರಖ್ಯಾತ ಮೂರು ಮುತ್ತು ತಂಡದವರಿಂದ ಗುಜ್ರಿ ಗೋವಿಂದ ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ.

ಡಿ.28ರ ಸಂಜೆ 4ಕ್ಕೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಶಾಸಕಿ ರೂಪಾಲಿ ನಾಯ್ಕ ವಹಿಸಲಿದ್ದಾರೆ. ಸಮಿತಿ ಅಧ್ಯಕ್ಷ ರಾಜನ್ ವಾಮನ ಅಣ್ವೇಕರ, ಜೆಎನ್‌ಪಿಟಿ ನಿವೃತ್ತ ಸಿಇಒ ರವೀಂದ್ರ ರೇವಣಕರ ಉಪಸ್ಥಿತರಿರುವರು. ರಾತ್ರಿ 9 ಗಂಟೆಗೆ ಝೆಂಕಾರ್ ಮೆಲೋಡಿಸ್ ತಂಡದಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.

ಅಮೃತ ಮಹೋತ್ಸವದ ನೆನಪಿಗಾಗಿ ಶಾಲಾ ಸಭಾಭವನ ನವೀಕರಣ, ಉದ್ಯಾನವನ ಮತ್ತು ಕ್ರೀಡಾಂಗಣದ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳಿಗಾಗಿ ಕಾರ್ಪಸ್ ಫಂಡ್ ಸ್ಥಾಪನೆಯಂತಹ ಮಹತ್ವದ ಯೋಜನೆಗಳನ್ನು ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಐಟಿಐ ಮತ್ತು ಡಿಪ್ಲೋಮಾ ತಾಂತ್ರಿಕ ಕೋರ್ಸ್‌ಗಳನ್ನು ಆರಂಭಿಸುವ ಗುರಿ ಹೊಂದಲಾಗಿದೆ ಎಂದು ಡಿ.ಆರ್. ಹಿಚ್ಕಡ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅಮೃತ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಎಂ.ಎಸ್. ಪ್ರಭು, ಕಾತ್ಯಾಯನಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎನ್.ವಿ. ರೇವಣಕರ, ಮುಖ್ಯಾಧ್ಯಾಪಕ ಗಂಗಾಧರ ಸಿ.ನಾಯ್ಕ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.