ತಾಲೂಕಿನಾದ್ಯಂತ ಸಾಕಷ್ಟು ಫಲಾನುಭವಿಗಳ ಪಡಿತರ ಚೀಟಿಗಳು ಬಿಪಿಎಲ್ ನಿಂದ ಎಪಿಎಲ್ ವರ್ಗಾವಣೆಯಾಗಿರುವುದು ಕಂಡುಬಂದಿವೆ
ಕನಕಗಿರಿ: ಸರ್ಕಾರದ ಮಾರ್ಗಸೂಚಿಯಂತೆ ಪಡಿತರ ಚೀಟಿ ಬದಲಾವಣೆಯಾಗುತ್ತಿದ್ದು, ಫಲಾನುಭವಿಗಳು ಆತಂಕಪಡುವ ಅಗತ್ಯವಿಲ್ಲ. ಬದಲಾವಣೆಯಾದ ಪಡಿತರ ಚೀಟಿದಾರರು 45 ದಿನಗಳ ಕಾಲಾವಕಾಶ ಇದ್ದು, ಸೂಕ್ತ ದಾಖಲೆ ಸಲ್ಲಿಸಿ ಸರಿಪಡಿಸಿಕೊಳ್ಳಬಹುದು ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹಜರತಹುಸೇನ್ ಹೇಳಿದರು.
ಅವರು ತಾಲೂಕಿನ ಚಿಕ್ಕಮಾದಿನಾಳ ಗ್ರಾಪಂ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಚಿಕ್ಕಮಾದಿನಾಳ, ಮುಸಲಾಪುರ, ಬಸರಿಹಾಳ ಗ್ರಾಪಂ ವ್ಯಾಪ್ತಿಯ ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ಹಾಗೂ ಫಲಾನುಭವಿಗಳ ಜೊತೆ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಗ್ಯಾರಂಟಿ ಯೋಜನೆಗಳಿಂದ ಆಗಿರುವ ಪ್ರಗತಿ ಹಾಗೂ ಗ್ರಾಮೀಣ ಭಾಗದ ಅರ್ಹ ಫಲಾನುಭವಿಗಳು ಸರ್ಕಾರದ 5ಯೋಜನೆಗಳಿಂದ ಹೊರಗುಳಿಯಬಾರದು ಎನ್ನುವ ಉದ್ದೇಶದಿಂದ ಅನುಷ್ಠಾನ ಸಮಿತಿಯ ನಡೆ ಗ್ರಾಪಂ ಕಡೆ ಎಂಬ ಧ್ಯೇಯದೊಂದಿಗೆ ಗ್ಯಾರಂಟಿ ಯೋಜನೆಗಳ ಸಫಲತೆಯ ಬಗ್ಗೆ ಮಾತನಾಡಿ ಫಲಾನುಭವಿಗಳ ಜೊತೆ ಚರ್ಚಿಸಿದರು.
ಅಲ್ಲದೇ ಈಗಾಗಲೇ ತಾಲೂಕಿನಾದ್ಯಂತ ಸಾಕಷ್ಟು ಫಲಾನುಭವಿಗಳ ಪಡಿತರ ಚೀಟಿಗಳು ಬಿಪಿಎಲ್ ನಿಂದ ಎಪಿಎಲ್ ವರ್ಗಾವಣೆಯಾಗಿರುವುದು ಕಂಡುಬಂದಿವೆ. ಅಂತಹ ಫಲಾನುಭವಿಗಳು ಆತಂಕಪಡುವ ಅಗತ್ಯವಿಲ್ಲ. ಅಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಭೇಟಿ ನೀಡಿ ಸೂಕ್ತ ದಾಖಲೆಗಳೊಂದಿಗೆ ಅರ್ಜಿಸಲ್ಲಿಸಿದರೆ ಅಂತಹ ಪಡಿತರ ಚೀಟಿಯನ್ನು ಮೊದಲಿನಂತೆ ಬಿಪಿಎಲ್‌ಗೆ ಬದಲಾವಣೆ ಮಾಡಿಕೊಂಡು ಉಚಿತವಾಗಿ ಪಡಿತರ ಪಡೆಯಬಹುದು ಎಂದು ತಿಳಿಸಿದರು.ನಂತರ ಉಳಿದಂತೆ ಗೃಹಲಕ್ಷ್ಮೀ, ಯುವನಿಧಿ, ಗೃಹಜ್ಯೋತಿ ಹಾಗೂ ಶಕ್ತಿ ಯೋಜನೆಯ ಪ್ರಗತಿ ಪರಿಶೀಲಿಸಿ ಸದರಿ ಯೋಜನೆಯ ಅನುಷ್ಠಾನದಲ್ಲಿ ಇರುವ ತಾಂತ್ರಿಕ ಸಮಸ್ಯೆ ಹಾಗೂ ಇನ್ನಿತರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಸೂಕ್ತ ಪರಿಹಾರ ಒದಗಿಸಲು ಅಧಿಕಾರಿಗಳಿಗೆ ಸೂಚಿಸಿದರು.
ನಂತರ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಕೆ. ರಾಜಶೇಖರ ಮಾತನಾಡಿ, ಐದು ಗ್ಯಾರಂಟಿ ಯೋಜನೆ ಈಗಾಗಲೇ ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗಿದೆ. ಯೋಜನೆಗಳಿಂದ ಹೊರಗುಳಿದ ಫಲಾನುಭವಿಗಳು ಇದ್ದರೇ ಅಂತಹವರನ್ನು ಗುರುತಿಸಿ ಅವರನ್ನು ಸಹ ಯೋಜನೆ ವ್ಯಾಪ್ತಿಗೆ ಒಳಪಡಿಸಲು ತಿಳಿಸಿದರು.ಈ ವೇಳೆ ತಾಪಂ ಯೋಜನಾಧಿಕಾರಿ ಡಾ. ಹುಲುಗಪ್ಪ, ಚಿಕ್ಕಮಾದಿನಾಳ ಗ್ರಾಪಂ ಅಧ್ಯಕ್ಷೆ ಹನುಮವ್ವ ವಡ್ರಕಲ್, ಉಪಾಧ್ಯಕ್ಷೆ ಮಲ್ಲಮ್ಮ ಮಮ್ಮಳಿ, ತಾಲೂಕು ಗ್ಯಾರಂಟಿ ಸಮಿತಿ ಸದಸ್ಯ ಜಗದೀಶ ರಾಥೋಡ್, ನೀಲಕಂಠ ಬಡಿಗೇರ್, ಜಗದೀಶ್ ಚನ್ನವೀರಪ್ಪ, ಹನುಮಮ್ಮ ಪಾಟೀಲ್, ಗ್ಯಾನಪ್ಪ, ಭೀಮೇಶ್, ವಿರೇಶ್, ಯಮನೂರಪ್ಪ, ಚನ್ನಬಸಪ್ಪ, ಕನಕಪ್ಪ, ಪಿಡಿಒ ಬಸವರಾಜ ಸಂಕನಾಳ, ತಾಪಂ ವಿಷಯ ನಿರ್ವಾಹಕ ಕೊಟ್ರಯ್ಯ ಸೇರಿದಂತೆ ಗ್ರಾಪಂ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು ಇದ್ದರು.