- ಚಿಕ್ಕೇರಳ್ಳಿಯಲ್ಲಿ ನಿವೃತ್ತ ಯೋಧ ಎಚ್‌.ರಮೇಶ್‌ ಸನ್ಮಾನ ಕಾರ್ಯಕ್ರಮದಲ್ಲಿ ಶಾಸಕ ಶಾಂತನಗೌಡ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಸಾಮಾನ್ಯವಾಗಿ ಪೋಷಕರು ತಮ್ಮ ಮಕ್ಕಳು ಡಾಕ್ಟರ್, ಎಂಜಿನಿಯರ್ ಅಥವಾ ಉನ್ನತ ಅಧಿಕಾರಿಗಳಾಗಬೇಕೆಂದು ಬಯಸುತ್ತಾರೆ. ಆದರೆ, ದೇಶ ಕಾಯುವ ಸೈನ್ಯಕ್ಕೆ ಕಳಿಸಲು ಹಿಂದೇಟು ಹಾಕುತ್ತಾರೆ. ಇದೇ ರೀತಿ ಹೆಣ್ಣು ಹೆತ್ತವರು ಕೂಡ ಸೈನಿಕರಿಗೆ ಹಾಗೂ ರೈತರಿಗೆ ತಮ್ಮ ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಡಲು ಮುಂದೆ ಬರುವುದಿಲ್ಲ. ಇಂಥ ಮನೋಭಾವ ಸಲ್ಲದು ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.

22 ವರ್ಷ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಯೋಧ ಎಚ್.ರಮೇಶ್ (ಹವಾಲ್ದಾರ) ನಿವೃತ್ತಿ ಹೊಂದಿ ಶುಕ್ರವಾರ ಸ್ವಗ್ರಾಮ ಚಿಕ್ಕೇರಳ್ಳಿ ಗ್ರಾಮಕ್ಕೆ ಮರಳಿದ್ದ ಹಿನ್ನೆಲೆ ಸ್ವಗ್ರಾಮ ಸೇರಿದಂತೆ ಅಕ್ಕಪಕ್ಕದ ಗ್ರಾಮದವರು, ನಿವೃತ್ತ ಸೈನಿಕನ ಬಂಧುಗಳು, ಸ್ನೇಹಿತರು ರಾತ್ರಿ ಏರ್ಪಡಿಸಿದ್ದ ಅದ್ಧೂರಿ ಸ್ವಾಗತ ಮತ್ತು ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.


ಪ್ರತಿಯೊಬ್ಬ ಪುರುಷರ ಯಶಸ್ವಿ ಜೀವನದ ಹಿಂದೆ ಒಬ್ಬ ಮಹಿಳೆ ಇರುತ್ತಾರೆ ಎಂಬ ಮಾತಿದೆ. ಇದು ವಿಶೇಷವಾಗಿ ಸೈನಿಕರ ಧರ್ಮಪತ್ನಿ ಪಾತ್ರ ಹಿರಿದಾಗಿರುತ್ತೆ. ಇದಕ್ಕೆ ಉದಾಹರಣೆ ನಿವೃತ್ತ ಯೋಧ ರಮೇಶ್ ಪತ್ನಿ ರಂಜಿತಾ ಅವರ ತ್ಯಾಗ, ಸಹಕಾರ ಕೂಡ ಅವಿಸ್ಮರಣೀಯ ಎಂದು ಹೇಳಿದರು.

ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ನಮ್ಮ ಯೋಧ, ನಮ್ಮ ರೈತರು ನಮ್ಮ ಹೆಮ್ಮೆಯಾಗಿದ್ದಾರೆ. ಈ ಕಾರಣದಿಂದಲೇ ಮಾಜಿ ಪ್ರಧಾನಿ ದಿ. ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಜೈ ಜವಾನ್, ಜೈ ಕಿಸಾನ್ ಘೋಷವಾಕ್ಯವನ್ನು ದೇಶವಾಸಿಗಳಿಗೆ ನೀಡಿದ್ದಾರೆ. ದೇಶ, ಸಮಾಜಕ್ಕೆ ಯೋಧರು ಮತ್ತು ರೈತರು ಸಲ್ಲಿಸುತ್ತಿರುವ ಸೇವೆ ಕೇವಲ ಮಾತುಗಳಲ್ಲಿ ವರ್ಣಿಸಲು ಅಸಾಧ್ಯ ಎಂದರು.

ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಬಿ.ಮಂಜಪ್ಪ ಮಾತನಾಡಿ, ತಮ್ಮ ತಾಲೂಕಿನ 80 ಮನೆಗಳಿರುವ ಅತ್ಯಂತ ಚಿಕ್ಕಹಳ್ಳಿ ಚಿಕ್ಕೇರಳ್ಳಿಯಲ್ಲಿ ನಾಲ್ಕು ಜನ ಯೋಧರಾಗಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.

ಜಿಪಂ ಮಾಜಿ ಸದಸ್ಯ, ಡಿ.ಸಿ.ಸಿ. ಬ್ಯಾಂಕ್‌ ನಿರ್ದೇಶಕ, ಡಿ.ಜಿ.ವಿಶ್ವನಾಥ, ನೊಳಂಬ ಸಮಾಜದ ಜಿಲ್ಲಾಧ್ಯಕ್ಷ ಹಾಗೂ ಎನ್.ಎಸ್.ಎಸ್. ಸಂಯೋಜನಾಧಿಕಾರಿ ಡಾ. ಆಶೋಕ್ ಕುಮಾರ್ ವಿ. ಪಾಳೇದ, ಮಾಜಿ ಸೈನಿಕ ಎಂ.ವಾಸಪ್ಪ ಮಾತನಾಡಿದರು.

ನಿವೃ ತ್ತ ಯೋಧ ಎಚ್.ರಮೇಶ್ (ಹವಾಲ್ದಾರ್ ) ಗ್ರಾಮಸ್ಥರ ಸನ್ಮಾನ ಸ್ವೀಕರಿಸಿ, ತಮ್ಮ ಸೈನಿಕ ಜೀವನದ ಅನುಭವಗಳನ್ನು ಹಂಚಿಕೊಂಡರು, ಮಾಜಿ ಸೈನಿಕರಾದ ಎಂ.ನಾಗರಾಜ್,ಎಸ್. ರವಿಕುಮಾರ್, ದಿವಂಗತ ಹೇಮಗೌಡ ಅವರ ಕುಟುಂಬದವರಿಗೆ ಸಹ ಗ್ರಾಮದ ವತಿಯಿಂದ ಸನ್ಮಾನಿಸಲಾಯಿತು.

ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಕೆ.ಎಚ್. ಷಣ್ಮುಖಪ್ಪ, ರೈತ ಮುಖಂಡ ಎಚ್.ಕಡದಕಟ್ಟೆ ಜಗದೀಶ್, ರುದ್ರಪ್ಪ, ಸುಭಾಶ್‌, ಗ್ರಾ.ಪಂ. ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಗ್ರಾಮ ಮುಖಂಡರು, ಗ್ರಾಮಸ್ಥರು ಭಾಗವಹಿಸಿದ್ದರು. ನಿವೃತ್ತ ಯೋಧ ರಮೇಶ್ ಅವರನ್ನು ಹೊನ್ನಾಳಿಯಿಂದ ಗ್ರಾಮದವರೆಗೆ ತೆರೆದ ವಾಹನದಲ್ಲಿ ಮೆರ‍ವಣಿಗೆ ಮೂಲಕ ವೇದಿಕೆಗೆ ಕರೆ ತಂದಿದ್ದು ವಿಶೇಷವಾಗಿತ್ತು.

- - -

-2ಎಚ್.ಎಲ್.ಐ2: ಚಿಕ್ಕೇರಳ್ಳಿಯಲ್ಲಿ ಶುಕ್ರವಾರ ರಾತ್ರಿ ನಿವೃತ್ತ ಸೈನಿಕ ಎಚ್.ರಮೇಶ್ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು. ಶಾಸಕ ಡಿ.ಜಿ.ಶಾಂತನಗೌಡ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ. ಎಚ್.ಬಿ..ಮಂಜಪ್ಪ, ಡಿ.ಜಿ. ವಿಶ್ವನಾಥ,ಕೆ.ಎಚ್. ಷಣ್ಮುಖಪ್ಪ ಇತರರು ಇದ್ದರು.