ಜೀವ ಪಣಕ್ಕಿಟ್ಟು ಪ್ರಯಾಣಿಕರು ಪ್ರಯಾಣ । ನೀರು ಹಾಕುತ್ತಲೇ ಅಂಕೋಲಾಕ್ಕೆ ತಲುಪಿದ ಬಸ್‌

ಕನ್ನಡಪ್ರಭ ವಾರ್ತೆ ಅಂಕೋಲಾಚಲಿಸುತ್ತಿದ್ದ ಬಸ್‌ನಲ್ಲಿ ಏಕಾಏಕಿ ಎಂಜಿನ್ ಉಷ್ಣಾಂಶ ಹೆಚ್ಚಾಗಿ ದಟ್ಟ ಹೊಗೆ ಆವರಿಸಿದ ಪರಿಣಾಮ, ಪ್ರಯಾಣಿಕರು ಆತಂಕಕ್ಕೊಳಗಾದ ಘಟನೆ ಕುಮಟಾ–ಅಂಕೋಲಾ ಮಾರ್ಗದಲ್ಲಿ ಭಾನುವಾರ ಸಂಜೆ ಸಂಭವಿಸಿದೆ.ಸುಮಾರು ಸಂಜೆ 4.30ರ ವೇಳೆಗೆ ಕುಮಟಾದಿಂದ ಅಂಕೋಲಾಕ್ಕೆ ಹೊರಟಿದ್ದ ಸಾರಿಗೆ ಬಸ್‌ನಲ್ಲಿ ಸಾಕಷ್ಟು ಪ್ರಯಾಣಿಕರು ಇದ್ದರು. ಕುಮಟಾ ಬಸ್ ನಿಲ್ದಾಣದಿಂದ ಕೇವಲ 500 ಮೀ. ದೂರ ಸಾಗುತ್ತಿದ್ದಂತೆಯೇ ಎಂಜಿನ್ ಭಾಗದಿಂದ ಹೊಗೆ ಎದ್ದಿದ್ದು, ಕೆಲವೇ ಕ್ಷಣಗಳಲ್ಲಿ ಬಸ್ ಒಳಗೆ ಹೊಗೆ ಹರಡತೊಡಗಿತು. ಇದರಿಂದ ಪ್ರಯಾಣಿಕರಲ್ಲಿ ಭೀತಿ ಉಂಟಾಗಿ, ಕೆಲವರು ತುರ್ತಾಗಿ ಕೆಳಗಿಳಿಯಲು ಮುಂದಾದರು.ಚಾಲಕ ತಕ್ಷಣ ಬಸ್ ನಿಲ್ಲಿಸಿ ನೀರು ಹಾಕಿ ಎಂಜಿನ್ ತಂಪಾಗಿಸಲು ಯತ್ನಿಸಿದರು. ಆದರೂ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗದೆ, ಕುಮಟಾದಿಂದ ಅಂಕೋಲಾಕ್ಕೆ ಬರುವವರೆಗೂ ಮಧ್ಯ ಮಧ್ಯದಲ್ಲಿ ಬಸ್ ನಿಲ್ಲಿಸಿ ನೀರು ಹಾಕುತ್ತಲೇ ಪ್ರಯಾಣ ಮುಂದುವರಿಸಲಾಯಿತು. ಪ್ರಯಾಣಿಕರೂ ಆತಂಕದ ನಡುವೆಯೇ ಈ ಸಾಹಸ ಪ್ರಯಾಣ ಮುಂದುವರಿಸುವುದು ಅನಿವಾರ್ಯವಾಯಿತು.ಕೊನೆಗೂ ಬಸ್ ಅಂಕೋಲಾ ಬಸ್ ನಿಲ್ದಾಣ ತಲುಪಿದಾಗ ಪ್ರಯಾಣಿಕರು ನಿಟ್ಟುಸಿರು ಬಿಟ್ಟರು.ಅಂಕೋಲಾ ಸಾರಿಗೆ ಘಟಕದಲ್ಲಿ ಸಂಚರಿಸುತ್ತಿರುವ ಅನೇಕ ಬಸ್‌ಗಳು ಹಳೆಯವು, ದುರಸ್ತಿಯಲ್ಲಿರುವುದು ಬಹಿರಂಗವಾಗಿದ್ದು, ಇಂತಹ ಘಟನೆಗಳು ಮರುಕಳಿಸುವ ಭೀತಿಯನ್ನೂ ಹೆಚ್ಚಿಸಿದೆ. ಹಣ ಪಡೆದು ಪ್ರಯಾಣಿಕರನ್ನು ಅಪಾಯದ ನಡುವೆ ಸಾಗಿಸುವ ವ್ಯವಸ್ಥೆಯ ವಿರುದ್ಧ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ಅಧಿಕಾರಿಗಳು ಕ್ರಮ ಕೈಗೊಂಡು ಬಸ್‌ಗಳ ಸುರಕ್ಷತೆ ಖಚಿತಪಡಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.