ಲಿಕ್ಕರ್ ಶಾಪ್‌ಗಳಿಗೆ ನುಗ್ಗಿ ಹಣ, ಮದ್ಯ ದೋಚಿದ ಕಳ್ಳರು

| Published : May 18 2024, 12:33 AM IST

ಸಾರಾಂಶ

ಜಗಳೂರು ತಾಲೂಕಿನ ಸೊಕ್ಕೆ ಮತ್ತು ಬಿದರಕೆರೆ ಗ್ರಾಮಗಳಲ್ಲಿ ಲಿಕ್ಕರ್ ಶಾಪ್‌ಗಳಿಗೆ ನುಗ್ಗಿದ ಕಳ್ಳರು ಹಣ ಮತ್ತು ಮದ್ಯದ ಬಾಟಲಿಗಳನ್ನು ದೋಚಿರುವ ಘಟನೆ ಬೆಳಕಿಗೆ ಬಂದಿದೆ.

ಜಗಳೂರು: ತಾಲೂಕಿನ ಸೊಕ್ಕೆ ಮತ್ತು ಬಿದರಕೆರೆ ಗ್ರಾಮಗಳಲ್ಲಿ ಲಿಕ್ಕರ್ ಶಾಪ್‌ಗಳಿಗೆ ನುಗ್ಗಿದ ಕಳ್ಳರು ಹಣ ಮತ್ತು ಮದ್ಯದ ಬಾಟಲಿಗಳನ್ನು ದೋಚಿರುವ ಘಟನೆ ಬೆಳಕಿಗೆ ಬಂದಿದೆ.

ಸೊಕ್ಕೆ ಗ್ರಾಮದ ಎಂಎಸ್ಐಎಲ್ ಮದ್ಯದ ಅಂಗಡಿ ಟಾರ್ಗೆಟ್ ಮಾಡಿದ ಕಳ್ಳರು ಎಸ್.ಎನ್. ವೀರೇಶ್ ನಡೆಸುತ್ತಿದ್ದ ಲಿಕ್ಕರ್ ಅಂಗಡಿ ಶೆಟರ್ ಮುರಿದು ಕರಾಮತ್ತು ತೋರಿದ್ದಾರೆ. ರಾತ್ರಿ ಹೊತ್ತಿನಲ್ಲಿ ಮದ್ಯದ ಅಂಗಡಿಗೆ ನುಗ್ಗಿ ₹94 ಸಾವಿರ ನಗದು, ಲಿಕ್ಕರ್ ಶಾಪ್‌ಗೆ ಅಳವಡಿಸಿದ್ದ ಸಿಸಿಟಿವಿ, ಡಿವಿಆರ್ ಮತ್ತು ₹11 ಸಾವಿರ ಬೆಲೆ ಬಾಳುವ ಮದ್ಯದ ಬಾಟಲ್‌ಗಳನ್ನು ಕಳ್ಳರು ದೋಚಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ಬಿದರಕೆರೆ ಗ್ರಾಮದ ಪಾಲಯ್ಯ ಎಂಬವರ ಎಂಎಸ್ಐಎಲ್ ಮದ್ಯದ ಅಂಗಡಿಗೆ ಬುಧವಾರ ರಾತ್ರಿ ನುಗ್ಗಿದ ಕಳ್ಳರು ₹73 ಸಾವಿರ ನಗದು, ಒಂದು ಡಿವಿಆರ್, ಎರಡು ಸಿಸಿ ಕ್ಯಾಮರಾ ಸೇರಿದಂತೆ ಅಂದಾಜು ₹5 ಸಾವಿರ ಮೌಲ್ಯದ ಮದ್ಯದ ಬಾಟಲ್‌ಗಳನ್ನು ಕಳವು ಮಾಡಿದ್ದಾರೆ. ಪ್ರಕರಣ ಸಂಬಂಧ ಅಬಕಾರಿ ಇಲಾಖೆ ಮತ್ತು ಜಗಳೂರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪಾಲಯ್ಯ ಪ್ರಕರಣ ದಾಖಲಿಸಿದ್ದಾರೆ.

ಇನ್‌ಸ್ಪೆಕ್ಟರ್‌ ಡಿ.ಶ್ರೀನಿವಾಸ ರಾವ್, ಸಬ್‌ ಇನ್‌ಸ್ಪೆಕ್ಟರ್‌ ಎಸ್.ಡಿ.ಸಾಗರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.