ವಿಧಾನ ಪರಿಷತ್‌ ಚುನಾವಣೆ: ಬಾರ್, ಡಾಬಾ, ನಾನ್ ವೆಜ್ ಹೋಟೆಲ್ ಗಳು ಫುಲ್ ರಶ್!

| Published : May 18 2024, 12:33 AM IST

ವಿಧಾನ ಪರಿಷತ್‌ ಚುನಾವಣೆ: ಬಾರ್, ಡಾಬಾ, ನಾನ್ ವೆಜ್ ಹೋಟೆಲ್ ಗಳು ಫುಲ್ ರಶ್!
Share this Article
  • FB
  • TW
  • Linkdin
  • Email

ಸಾರಾಂಶ

ವಿಧಾನ ಪರಿಷತ್ತಿಗೆ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ನಡೆಯುತ್ತಿರುವ ಚುನಾವಣೆ ಹಿನ್ನೆಲೆ ಶಿಕ್ಷಕರು ಪ್ರಚಾರದಲ್ಲಿ ತೊಡಗಬಾರದೆಂಬ ಬಿಗಿ ನಿರ್ದೇಶನವನ್ನು ಚುನಾವಣಾ ಆಯೋಗ ನೀಡಿದೆ. ಆದರೆ ಎಲ್ರೂ ಒಟ್ಟಿಗೆ ಕುಳಿತು ಪಾರ್ಟಿ ಮಾಡಬಾರದು ಎಂದು ಎಲ್ಲಿ ಹೇಳಿದೆ ಎಂದು ಪ್ರಶ್ನಿಸುತ್ತಿದ್ದಾರೆ ಗಣ್ಯ ಮತದಾರರು!

ಚಿಕ್ಕಪ್ಪನಹಳ್ಳಿ ಷಣ್ಮುಖ

ಕನ್ನಡಪ್ರಭವಾರ್ತೆ, ಚಿತ್ರದುರ್ಗ

ಚಿತ್ರದುರ್ಗ ಜಿಲ್ಲೆಯ ಯಾವುದೇ ಬಾರುಗಳು,ರೆಸ್ಟೋರೆಂಟ್ ಗಳು, ತೋಟದ ಮನೆಗಳು, ಹೊರ ವಲಯದ ಒಂಟಿ ಮನೆಗಳು ಸೂರ್ಯ ಮುಳುಗುತ್ತಿದ್ದಂತೆ ರಶ್ ಆಗುತ್ತಿವೆ. ವಿಧಾನ ಪರಿಷತ್ತಿಗೆ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ನಡೆಯುತ್ತಿರುವ ಚುನಾವಣೆ ಇಂತಹದ್ದೊಂದು ವಾತಾವರಣ ಸೃಷ್ಟಿಸುತ್ತಿದೆ. ತಾಲೂಕು ಕೇಂದ್ರದ ಯಾವುದೇ ಬಾರುಗಳಿಗೆ ಹೋದರೂ ಪಾರ್ಟಿಗಳು ನಡೆಯುತ್ತಿರುವ ದೃಶ್ಯ ಕಾಣುತ್ತವೆ. ಇದಕ್ಕಾಗಿ ಹತ್ತಾರು ಟೇಬಲ್ ಗಳ ನೀಟಾಗಿ ಜೋಡಿಸಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಮತಗಳ ಹೇಗೆ ಗುಡ್ಡೆ ಹಾಕಬೇಕೆಂಬ ಬಗ್ಗೆಯೇ ಚರ್ಚೆಗಳು ಅಲ್ಲಿ ನಡೆಯುತ್ತವೆ. ಸಂಜೆ ಏಳರಿಂದ ಆರಂಭವಾದ ಪಾರ್ಟಿ ರಾತ್ರಿ ಹನ್ನೊಂದಾದರೂ ನಡೆಯುತ್ತಿರುತ್ತವೆ. ಈ ಟೇಬಲ್ ಗಳಲ್ಲಿ ವಿರಾಜಮಾನರಾಗಿ ಕುಳಿತವರು ಪರಿಷತ್ ಚುನಾವಣೆಯಲ್ಲಿ ಮತಚಲಾಯಿಸಲು ಅವಕಾಶ ಪಡೆದ ಮತದಾರರು ಎಂಬುದ ಗ್ರಹಿಸಲು ಸಮಯವೇನೂ ಬೇಕಾಗದು. ಇದರಿಂದಾಗಿ ನಿತ್ಯದ ಕುಡುಕರಿಗೆ ಬಾರ್ ಗಳಲ್ಲಿ ಜಾಗವಿಲ್ಲದೆ ಎಂಎಸ್ಐಲ್ ಮಳಿಗೆಗಳಿಗೆ ಹೋಗಿ ಮನೆಗಳಿಗೆ ಪಾರ್ಸೆಲ್ ಒಯ್ಯುವ ಸ್ಥಿತಿ ನಿರ್ಮಾಣವಾಗಿದೆ.

ಇವತ್ತು ಓರ್ವ ಅಭ್ಯರ್ಥಿಯ ಟೇಬಲ್ ನಲ್ಲಿ ಕಾಣಿಸಿಕೊಳ್ಳುವ ಗಣ್ಯ ಮತದಾರ ಮತ್ತೆ ನಾಳೆ ಇನ್ನೊಂದು ಕಡೆ ಪ್ರತ್ಯಕ್ಷರಾಗುತ್ತಾರೆ.ಇಂತಹ ಗುಂಪುಗಳನ್ನು ಅಭ್ಯರ್ಥಿ ಕಡೆಯ ಶಿಕ್ಷಕರೋರ್ವರು ನಿರ್ವಹಿಸುತ್ತಾರೆ. ಟೇಬಲ್ ಗಳಲ್ಲಿ ಕುಳಿತ ಶಿಕ್ಷಕರ ಗುಂಪು ಪೋಟೋಗಳ ಅಭ್ಯರ್ಥಿಗೆ ಕಳಿಸಿ ಗ್ಯಾರಂಟಿ ಪಡೆಯಲಾಗುತ್ತದೆ. ಅಷ್ಟರ ಮಟ್ಟಿಗೆ ಚುನಾವಣೆ ಪ್ರಚಾರ ವ್ಯವಸ್ಶಿತ ಅಕ್ರಮಗಳಿಗೆ ತೆರೆದುಕೊಂಡಿದೆ. ಬಿಲ್ಲು,ಬಾಣಗಳ ಎತ್ತಿ ಅಭ್ಯರ್ಥಿಗಳು ಸುಸ್ತಾಗುತ್ತಿದ್ದಾರೆ.ಇದೇ ಮೊದಲ ಬಾರಿಗೆ ಮಹಿಳಾ ಮತದಾರರಿಗೆ ಔತಣ ಕೂಟದ ಹೆಸರಲ್ಲಿ ಊಟದ ವ್ಯವಸ್ಥೆ ಕೂಡಾ ಜಾರಿಗೆ ಬಂದಿರುವುದು ಹೊಸ ಸೇರ್ಪಡೆ. ಗುಂಪಾಗಿ ಊಟಕ್ಕೆ ಬರುವ ಮಹಿಳೆಯರ ಚಿತ್ರಗಳು ಪ್ರತಿಷ್ಠಿತ ಹೋಟೆಲ್ ಗಳ ಸಿಸಿ ಟಿವಿಗಳಲ್ಲಿ ದಾಖಲಾಗಿದೆ.

ಪಾರ್ಟಿ ಮಾಡಬೇಡ ಅಂತ ಎಲ್ಲಿದೆ?ಶಿಕ್ಷಕರು ಪ್ರಚಾರದಲ್ಲಿ ತೊಡಗಬಾರದೆಂಬ ಬಿಗಿ ನಿರ್ದೇಶನವನ್ನು ಚುನಾವಣಾ ಆಯೋಗ ನೀಡಿದೆ. ಆದರೆ ಎಲ್ರೂ ಒಟ್ಟಿಗೆ ಕುಳಿತು ಪಾರ್ಟಿ ಮಾಡಬಾರದು ಎಂದು ಎಲ್ಲಿ ಹೇಳಿದೆ ಎಂದು ಪ್ರಶ್ನಿಸುತ್ತಿದ್ದಾರೆ ಗಣ್ಯ ಮತದಾರರು. ಪ್ರಾಥಮಿಕ ಶಾಲೆಗಳ ಶಿಕ್ಷಕರು ಮತದಾನದಿಂದ ಹೊರಗಿದ್ದಾರೆ. ಹೈಸ್ಕೂಲ್, ಜ್ಯೂನಿಯರ್ ಕಾಲೇಜು, ಪದವಿ ಕಾಲೇಜು, ಡಿಪ್ಲಮೋ, ಇಂಜಿನಿಯರಿಂಗ್, ಮೆಡಿಕಲ್ ಕಾಲೇಜಿನಲ್ಲಿರುವ ಚಿತ್ರದುರ್ಗ ಜಿಲ್ಲೆಯ 4615 ಶಿಕ್ಷಕರು ಮತದಾನದ ಹಕ್ಕು ಪಡೆದಿದ್ದಾರೆ. ಈ ನಾಲ್ಕುವರೆ ಸಾವಿರ ಮತದಾರರ ನಿತ್ಯದ ನಿರ್ವಹಣೆಗೆ ನೋಟುಗಳ ಕಂತೆ ಕರಗಿ ಹೋಗುತ್ತಿವೆ.ಈಗಾಗಲೇ ಕೋರಿಯರ್ ಸರ್ವಿಸ್‍ನವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ಪಕ್ಷದವರು ಶಿಕ್ಷಕ ಮತದಾರರಿಗೆ ಉಚಿತ ಉಡುಗೊರೆಗಳನ್ನು ಕೋರಿಯರ್, ಪಾರ್ಸೆಲ್ ಕಳುಹಿಸುವುದು ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಉಚಿತ ಉಡುಗೊರೆಗಳನ್ನು ಸ್ವೀಕರಿಸುವುದು ಸಹ ಮಾದರಿ ನೀತಿ ಸಂಹಿತೆ ಉಲ್ಲಂಘನೆ. ಜತೆಗೆ ಸಂಬಂಧಪಟ್ಟವರ ವಿರುದ್ಧ ಅಮಾನತಿಗೆ ಆದೇಶ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಬಿಗಿ ನಿರ್ದೇಶ ನೀಡಿದ್ದಾರೆ. ಹೇಳಿದರು.

ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಹಾಗೂ ಆಗ್ನೇಯ ಶಿಕ್ಷಕರ ಕ್ಷೇತ್ರದ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಶಿಕ್ಷಕ ಮತದಾರರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗವಹಿಸುವಂತಿಲ್ಲ. ಒಂದು ವೇಳೆ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುವುದು ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಶಿಸ್ತುಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ಆದರೆ ಯಾವ ಎಚ್ಚರಿಕೆಗಳೂ ಗಣ್ಯ ಮತದಾರರ ಕಿವಿ ಹತ್ತಿರ ಹೋಗುತ್ತಿಲ್ಲ.

ಈ ಬಾರಿ ಉಡುಗೊರೆಗಳಿಲ್ಲ!

ಪ್ರತಿ ಚುನಾವಣೆಯಲ್ಲಿಯೂ ಮತದಾರರ ಮನವೊಲಿಸಲು ಸಣ್ಣ ಪ್ರಮಾಣದ ಗಿಫ್ಟ್ ಗಳ ಅಭ್ಯರ್ಥಿಗಳು ವಿತರಿಸುತ್ತಿದ್ದರು. ಆದರೆ ಈ ಬಾರಿ ಅಂತಹ ಗಿಫ್ಟ್ ಗಳ ಉಸಾಬರಿಗೆ ಹೋಗಲಾಗಿಲ್ಲ. ಮೂಲಗಳ ಪ್ರಕಾರ ಕವರುಗಳ ಕೊಟ್ಟರಾಯಿತೆಂಬ ಇಂಗಿತ ಅಭ್ಯರ್ಥಿಗಳಲ್ಲಿ ಇದೆ ಎನ್ನಲಾಗಿದೆ. ಆದರೆ ಯಾರು ಎಷ್ಟು ಕೊಡುತ್ತಾರೆ ಎಂಬ ಕುತೂಹಲ ಮಾತ್ರ ಗಣ್ಯ ಮತದಾರರ ಬಳಿ ಇದೆ.

ಬಿಜೆಪಿಯಿಂದ ಈ ಹಿಂದೆ ಮೂರು ಬಾರಿ ಪರಿಷತ್ ಸದಸ್ಯರಾಗಿರುವ ವೈ.ಎ.ನಾರಾಯಣಸ್ವಾಮಿ ಕಣದಲ್ಲಿದ್ದರೆ ಕಾಂಗ್ರೆಸ್ ನಿಂದ ಡಿ.ಟಿ.ಶ್ರೀನಿವಾಸ್ ಸ್ಪರ್ಧಿಸಿದ್ದಾರೆ. ಡಿ.ಟಿ.ಶ್ರೀನಿವಾಸ್ ಪ್ರವೇಶದಿಂದಾಗಿ ಕಣ ರಂಗೇರಿದೆ. ಶಾಲೆಗಳಿಗೆ ರಜೆ ಇರುವುದರಿಂದ ಶಿಕ್ಷಕರೂ ಕೂಡಾ ರಂಗೇರುತ್ತಿದ್ದಾರೆ.