ಸಾರಾಂಶ
ಡೆಂಘೀ ಜ್ವರ ಸೊಳ್ಳೆಗಳ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಇನ್ನೇನು ಮಳೆ ಪ್ರಾರಂಭವಾಗಲಿದ್ದು, ಮನೆಯ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಂಡರೆ ಡೆಂಘೀ ಹರಡುವಿಕೆಯನ್ನು ತಡೆಗಟ್ಟಬಹುದು.
ಕುಮಟಾ: ನೀವು ಇತ್ತೀಚೆಗೆ ಜ್ವರ ಸಂಭವಿಸುವ ಪ್ರದೇಶಕ್ಕೆ ಭೇಟಿ ನೀಡಿದ್ದರೆ, ನಿಮಗೆ ಜ್ವರ ಬಂದಿದ್ದರೆ, ತೀವ್ರವಾದ ಹೊಟ್ಟೆ ನೋವು, ವಾಂತಿ, ಉಸಿರಾಟದ ತೊಂದರೆ ಅಥವಾ ನಿಮ್ಮ ಮೂಗು, ಒಸಡು, ವಾಂತಿ ಅಥವಾ ಮಲದಲ್ಲಿ ರಕ್ತ ಕಂಡುಬಂದರೆ ತಕ್ಷಣ ವೈದ್ಯಕೀಯ ಆರೈಕೆಯನ್ನು ಪಡೆಯುವುದು ಅತ್ಯಗತ್ಯ ಎಂದು ಕಿವಿ, ಮೂಗು, ಗಂಟಲು ತಜ್ಞೆ ಡಾ. ಚೈತ್ರಾ ದೀಪಕ್ ಅಭಿಪ್ರಾಯಪಟ್ಟರು.
ಇಲ್ಲಿಯ ರೋಟರಿ ಕ್ಲಬ್ ಹಮ್ಮಿಕೊಂಡಿದ್ದ ರಾಷ್ಟ್ರೀಯ ಡೆಂಘೀ ದಿನಾಚರಣೆ ನಿಮಿತ್ತ ಡೆಂಘೀ ಜ್ವರದ ಬಗ್ಗೆ ಮುನ್ಸೂಚನೆ ಮತ್ತು ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.ಡೆಂಘೀ ಜ್ವರ ಸೊಳ್ಳೆಗಳ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಇನ್ನೇನು ಮಳೆ ಪ್ರಾರಂಭವಾಗಲಿದ್ದು, ಮನೆಯ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಂಡರೆ ಡೆಂಘೀ ಹರಡುವಿಕೆಯನ್ನು ತಡೆಗಟ್ಟಬಹುದೆಂದರು. ಈ ನಿಟ್ಟಿನಲ್ಲಿ ರೋಟರಿ ಸದಸ್ಯರು ಜಾಗೃತಿ ಅಭಿಯಾನ ಕೈಗೊಂಡು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕೆಂದು ಮನವಿ ಮಾಡಿದರು.ರೋಟರಿ ಅಧ್ಯಕ್ಷ ಎನ್. ಆರ್. ಗಜು ಅವರು, ಡೆಂಘೀ ನಿಯಂತ್ರಣದ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಆರೋಗ್ಯ ಇಲಾಖೆಯ ಜತೆಗೂಡಿ ನಡೆಸಲಾಗುವುದು ಎಂದರಲ್ಲದೇ, ಶಾಲಾ- ಕಾಲೇಜುಗಳಲ್ಲಿ ಡೆಂಘೀ ಲಕ್ಷಣಗಳು, ಕಾರಣ ಮತ್ತು ಚಿಕಿತ್ಸೆಗಳ ಬಗ್ಗೆ ರೋಟರಿ ಪರಿವಾದ ವೈದ್ಯರ ನೆರವಿನಿಂದ ಕಾರ್ಯಕ್ರಮ ಏರ್ಪಡಿಸುವೆವು ಎಂದರು.ರೋಟರಿ ಕಾರ್ಯದರ್ಶಿ ರಾಮದಾಸ ಗುನಗಿ ಸ್ವಾಗತಿಸಿದರು. ಸುರೇಶ್ ಭಟ್ಟ ಪರಿಚಯಿಸಿದರು. ರೋಟರಿ ಅಸಿಸ್ಟಂಟ್ ಗವರ್ನರ್ ವಸಂತ ರಾವ್, ಡಾ. ದೀಪಕ ಡಿ. ನಾಯಕ, ಜಯಶ್ರೀ ಕಾಮತ, ಚೇತನ ಶೇಟ್, ವಸಂತ ಶಾನಭಾಗ, ಪ್ರಾಂಕಿ ಫರ್ನಾಂಡಿಸ್, ಅತುಲ್ ಕಾಮತ, ಕಿರಣ ನಾಯಕ ಮೊದಲಾದವರು ವೈದ್ಯರೊಂದಿಗೆ ಸಂವಾದಿಸಿದರು. ಶೈಲಾ ಗುನಗಿ ವಂದಿಸಿದರು.