ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ತಾವು ಹೇಳಿದ ಮಾರ್ಗದ ಮೂಲಕ ನೀರು ಹರಿಸಲು ಅಧಿಕಾರಿಗಳು ಒಪ್ಪದ ಹಿನ್ನೆಲೆಯಲ್ಲಿ ರೈತರು ಗುರುವಾರ ರಾತ್ರಿ ಸ್ಥಗಿತಗೊಳಿಸಿದ್ದ ಧರಣಿಯನ್ನು ಶುಕ್ರವಾರ ಮತ್ತೆ ಮುಂದುವರಿಸಿದರು.ಜಂಬಗಿ ಕೆರೆಗೆ ನೀರು ಬಿಡುವ ವಿಚಾರವಾಗಿ ಉಪ ವಿಭಾಗಾಧಿಕಾರಿ ಶ್ವೇತಾ ಬೀಡೆಕರ, ತಹಸೀಲ್ದಾರ್ ಕವಿತಾ, ರೈತರು, ರೈತ ಮುಖಂಡರು ಹಾಗೂ ಕೆ.ಬಿ.ಜೆ.ಎನ್.ಎಲ್ ಅಧಿಕಾರಿಗಳೊಡನೆ ತಹಸೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ಸಭೆ ನಡೆಯಿತು. ಈ ವೇಳೆ ರೈತರು ಹಾಗೂ ಅಧಿಕಾರಿಗಳ ನಡುವೆ ಒಮ್ಮತದ ಅಭಿಪ್ರಾಯ ಮೂಡದ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ರೈತರು ಸ್ಥಗಿತಗೊಳಿಸಿದ್ದ ಹೋರಾಟ ಶುಕ್ರವಾರ ಮುಂದುವರಿಸಿದರು.
ಅಧಿಕಾರಿಗಳ ವಾದವೇನು?:ಕಗ್ಗೋಡ ಕೆರೆಯಿಂದ ಹಳ್ಳದ ಮೂಲಕ ನೀರು ಹರಿಸಿ ಕೇವಲ 6-7 ಕಿ.ಮೀ ಅಂತರದಲ್ಲಿ ಜಂಬಗಿ ಕೆರೆ ಇದೆ. ಇದರಿಂದ ಬೇಗನೆ ನೀರು ಹರಿದುಬಂದು ಕೆರೆ ತುಂಬುತ್ತದೆ. ಹೀಗಾಗಿ ಇದೇ ಮಾರ್ಗದಲ್ಲಿ ನೀರು ಹರಿಸುವಂತೆ ರೈತರು, ರೈತ ಮುಖಂಡರು ಒತ್ತಾಯಿಸಿದರು. ಆದರೆ, ಸಭೆಯಲ್ಲಿ ಅಧಿಕಾರಿಗಳು ರಾಂಪೂರ ವಿಭಾಗದಿಂದ ಜಂಬಗಿ ಕೆರೆಗೆ ನೀರು ಹರಿಸಲಾಗುವುದು ಎಂದು ಹೇಳಿದರು. ಆಲಮಟ್ಟಿಯಿಂದ 187 ಕಿಮೀವರೆಗಿನ ಕೆರೆಗಳಿಗೆ ನೀರು ಹರಿಸಬೇಕಾಗುತ್ತದೆ. ಆದರೆ, ಅಷ್ಟೊಂದು ನೀರು ಸಂಗ್ರಹವಿಲ್ಲ ಎಂಬುವುದು ಅಧಿಕಾರಿಗಳ ವಾದ.
ರೈತರು ಹೇಳೋದೇನು?:ಇದಕ್ಕೆ ವಿರೋಧ ವ್ಯಕ್ತಪಡಿಸಿದ ರೈತರು ರಾಂಪೂರ ವಿಭಾಗದಿಂದ ನೀರು ಹರಿಸಿದರೆ ಜಂಬಗಿ ಕೆರೆ ಸಮರ್ಪಕವಾಗಿ ನೀರು ತಲುಪುವುದಿಲ್ಲ. ಹೀಗಾಗಿ ಕಗ್ಗೊಡ ಕೆರೆಯಿಂದ ನೀರು ಹರಿಸಿದರೆ ಶಾಶ್ವತವಾಗಿ ಪರಿಹಾರ ದೊರೆಯುತ್ತದೆ ಎಂದು ಆಗ್ರಹಿಸಿದರು. ಆದರೆ, ಇದಕ್ಕೆ ಅಧಿಕಾರಿಗಳು ಒಪ್ಪದ ಕಾರಣಕ್ಕೆ ರೈತರು ಧರಣಿ ಮುಂದುವರಿಸಿದರು.
ಈ ವೇಳೆ ಮಾತನಾಡಿದ ವಿಜಯಪುರ ತಾಲೂಕು ಉಪಾಧ್ಯಕ್ಷ ಮಹಾದೇವಪ್ಪ ತೇಲಿ, ರಾಂಪೂರ ಕೆಬಿಜೆಎನ್‌ಎಲ್ ವ್ಯಾಪ್ತಿಯ ನಾಗಠಾಣ ಕಾಲುವೆಯಿಂದ ಈ ಬಾರಿ ಕೆರೆ ತುಂಬುವುದು ಅಸಾಧ್ಯ. ಆದರೆ ಸಮೀಪದ ಕಗ್ಗೋಡ ಕೆರೆಯಿಂದ ಹಳ್ಳದ ಮೂಲಕ ನೀರು ಹರಿಸಿದರೆ, ಕೇವಲ 6-7 ಕಿ.ಮೀ ಅಂತರದಲ್ಲಿರುವ ಜಂಬಗಿ ಕೆರೆಗೆ ಸರಾಗವಾಗಿ ನೀರುಬಂದು ಕೆರೆ ತುಂಬುತ್ತದೆ. ಇಳಿಜಾರು ಮಾರ್ಗದಲ್ಲಿ ಹಳ್ಳ ಹರಿಯುವುದರಿಂದ ವಿಶೇಷವಾಗಿ ಯಾವುದೇ ಖರ್ಚಿಲ್ಲದೇ ಜಂಬಗಿ ಕೆರೆ ತುಂಬಬಹುದು ಎಂದರು.ರೈತ ಮುಖಂಡ ಪ್ರಕಾಶ ತೇಲಿ ಮಾತನಾಡಿ, ಕೂಡಲೇ ಜಿಲ್ಲಾಡಳಿತ ಈ ಕುರಿತು ವಿಶೇಷವಾಗಿ ಕಾಳಜಿವಹಿಸಿ ನೀರು ಹರಿಸಬೇಕು. ಭೀಕರ ಬೇಸಿಗೆಯಲ್ಲಿ ಜಿಲ್ಲೆಯ ಹಲವಾರು ಕೆರೆಗಳಿಗೆ 2 ಬಾರಿ ನೀರು ಹರಿಸಿದರೂ, ಜಂಬಗಿ ಕೆರೆಗೆ ಮಾತ್ರ ಒಂದು ಹನಿ ನೀರು ಬಂದಿಲ್ಲ. ಇನ್ನು ಕೆ.ಬಿ.ಜೆ.ಎನ್.ಎಲ್ ಅಧಿಕಾರಿಗಳಿಗೆ ಕೇಳಿದರೆ 187 ಕಿ.ಮೀ ದೂರದವರೆಗೆ ನೀರು ಹರಿಸಬೇಕಾಗುತ್ತದೆ. ಅಷ್ಟು ನೀರು ನಮ್ಮ ರಾಂಪೂರ ವಿಭಾಗಕ್ಕೆ ಇಲ್ಲ ಎಂದು ಹೇಳುತ್ತಿದ್ದಾರೆ. ಆದ್ದರಿಂದ ಕೂಡಲೇ ಜಿಲ್ಲಾಧಿಕಾರಿಗಳು ಹೇಗಾದರೂ ಮಾಡಿ ನೀರು ಹರಿಸಬೇಕು ಎಂಬುದು ನಮ್ಮೆಲ್ಲರ ಬೇಡಿಕೆಯಾಗಿದೆ ಎಂದು ಹೇಳಿದರು.
ಈ ವೇಳೆ ರೈತ ಸಂಘದ ಮುಖಂಡ, ಗ್ರಾಪಂ ಅಧ್ಯಕ್ಷ ಶ್ರೀಶೈಲ ಮಸೂತಿ, ಆಹೇರಿ ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜ ಗಾಣಗೇರ, ಪ್ರಭು ಕಾರಜೋಳ, ಜಯಸಿಂಗ ರಜಪೂತ, ಚನ್ನಪ್ಪ ವಾಡೇದ, ಅನಮೇಶ ಜಮಖಂಡಿ, ನಿಜಲಿಂಗಪ್ಪ ತೇಲಿ, ಬಸನಗೌಡ ಬಿರಾದಾರ, ಮಲ್ಲಿಕಾರ್ಜುನ ನಾಗಠಾಣ, ಬಸವಂತ ತೇಲಿ ಸೇರಿದಂತೆ ಅನೇಕರು ಇದ್ದರು.