ಶಹಾಪುರ ನಗರದ ಖವಾಸಪುರದ ಮಹಮ್ಮದಿಯ ಮಜೀದ್ ಹತ್ತಿರ ಬಾಡಿಗೆ ಮನೆಯಲ್ಲಿ ಸಾದಿಯ ಪರ್ವೀನ್ ಜತೆ ತಾಯಿ ಶಹನಾಜ್‌ ಬೇಗಂ.

ಮಲ್ಲಯ್ಯ ಪೋಲಂಪಲ್ಲಿ

ಕನ್ನಡಪ್ರಭ ವಾರ್ತೆ ಶಹಾಪುರ

ವಾಸಕ್ಕೆ ಮನೆಯಿಲ್ಲ, ಅನಾರೋಗ್ಯಪೀಡಿತ ಗಂಡ, ಜನ್ಮತಃ ವಿಕಲಾಂಗ ಮಗಳ (22 ವರ್ಷ) ಜೋಪಾನ ಮಾಡಬೇಕಾದ ಜವಾಬ್ದಾರಿ, ಸರಿಯಾಗಿ ಕೆಲಸಕ್ಕೆ ಹೋಗದ ಮಗ....

ಇಡೀ ಕುಟುಂಬದ ಜವಾಬ್ದಾರಿ ಹೊತ್ತ ಶಹಾಪುರದ ಶಹನಾಜ್ ಬೇಗಂ ಕಣ್ಣೀರ ಕಥೆಯ ಕಿರು ತಿರುಳಿದು.

ನಗರದ ಖವಾಸಪೂರ ಮಹಮ್ಮದೀಯ ಮಸೀದಿ ಹತ್ತಿರ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಶಹನಾಜ್‌ ಬೇಗಂ ಕುಟುಂಬದ ದುಸ್ಥಿತಿ ಅನೇಕರಿಗೆ ಕಣ್ಣೀರು ತರಿಸುತ್ತದೆ. ಹುಟ್ಟುತ್ತಲೇ ಅಂಗವಿಕಲಳಾಗಿರುವ 22 ವರ್ಷದ ಸಾದಿಯಾ ಪರ್ವೀನ್‌ಗೆ ಎದ್ದು ಕೂಡಲಿಕ್ಕೂ ಆಗದು. ಸ್ಪಷ್ಟ ಮಾತು ಬರುವುದಿಲ್ಲ. ಪತಿ ಕೂಡ ಅನಾರೋಗ್ಯಪೀಡಿತರಾಗಿದ್ದಾರೆ. ಅನುದಾನರಹಿತ ಖಾಸಗಿ ಶಾಲೆಯಲ್ಲಿ ಕಸ ಹೊಡೆಯವ ಕೆಲಸದಿಂದ ಬಂದ ಹಣದಲ್ಲಿ ಮನೆ ಬಾಡಿಗೆ ಸೇರಿ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ ಶಹನಾಜ್‌ಬೇಗಂ. ದುಡಿಮೆ ಬಹುಭಾಗ ಬಾಡಿಗೆಗೆ ಹೋಗುತ್ತದೆ. ಜೀವನ ನಡೆಸುವುದು ದುಸ್ತರವಾಗಿದೆ ಎನ್ನುತ್ತಾರೆ ಅವರು.

ಸರ್ಕಾರದ ನೆರವು ತಮ್ಮ ಪಾಲಿಗೆ ಮರೀಚಿಕೆಯಾಗಿದೆ ಎನ್ನುತ್ತಾರೆ ಶಹನಾಜ್‌ ಬೇಗಂ. ಹಲವು ಬಾರಿ ಕುಟುಂಬದವರು ತಾಲೂಕು, ಜಿಲ್ಲಾಡಳಿತಕ್ಕೆ ಮನವಿ ಮಾಡಿದರೂ ಸಹಿತ ಪ್ರಯೋಜನವಾಗಿಲ್ಲ. ಸರ್ಕಾರ ಒಂದು ಮನೆ ನಿರ್ಮಿಸಿ ಕೊಟ್ಟರೆ ಕುಟುಂಬಕ್ಕೆ ಅನುಕೂಲವಾಗುತ್ತದೆ ಎನ್ನುತ್ತಾರೆ ಸಂಬಂಧಿ ರಜಿಯಾಬೇಗಂ. ಪಿಂಚಣಿಗೆ ಎನ್‌ಪಿಸಿಐ ಅಡ್ಡಿ:

ಮಗಳಿಗೆ ಬರುತ್ತಿದ್ದ ಅಂಗವಿಕಲ ವೇತನ ಕಳೆದ ಎಂಟ್ಹತ್ತು ತಿಂಗಳಿಂದ ನಿಂತಿದ್ದರಿಂದ ತಾಯಿ ಪರಿಸ್ಥಿತಿ ಬಾಣಲಿಯಿಂದ ಬೆಂಕಿಗೆ ಬಿದ್ದಂತಾಗಿದೆ. ಮಗಳಿಗೆ ಆಸ್ಪತ್ರೆ, ಔಷಧಿ ಸಹಕಾರಿಯಾಗಿದ್ದ ಸೌಲಭ್ಯ ನಿಂತಿದ್ದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ತಹಸೀಲ್ದಾರ್ ಕಚೇರಿಗೆ ಹೋಗಿ ಕೇಳಿದರೆ ತಮ್ಮ ಅಕೌಂಟ್ ಇರುವ ಬ್ಯಾಂಕಿಗೆ ಹೋಗಿ ಎನ್‌ಪಿಸಿಐ (ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ) ಮಾಡಿಸಿಕೊಂಡು ಬಂದರೆ ಪಿಂಚಣಿ ಹಣ ನೀಡುವುದಾಗಿ ಹೇಳಿತ್ತಾರೆ. ಬ್ಯಾಂಕಿಗೆ ಹೋಗಿ ಕೇಳಿದರೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ನೀವು ತಹಸೀಲ್ ಗೆ ಹೋಗಿ ಕೇಳಿ ಎಂದು ಹಾರಿಕೆ ಉತ್ತರ ನೀಡುತ್ತಾರೆ ಎಂದು ಶಹನಾಜ್‌ ಬೇಗಂ ಅಸಾಹಯಕತೆ ವ್ಯಕ್ತಪಡಿಸಿದ್ದಾರೆ.

ಸುಮಾರು 20 ವರ್ಷದಿಂದ ಸೂರಿಗಾಗಿ ನಗರಸಭೆ ಅಧಿಕಾರಿಗಳು ಮತ್ತು ರಾಜಕಾರಣಿಗಳನ್ನು ಬೇಡಿಕೊಂಡರೂ ಮನೆ ಭಾಗ್ಯ ದೊರಕಿಲ್ಲ. ನಗರಕ್ಕೆ ಸಾವಿರಾರು ಮನೆಗಳು, ನಿವೇಶನಗಳು ಬಂದಿವೆ. ಆದರೆ ಇವರಿಗೆ ಮಾತ್ರ ದಕ್ಕಿಲ್ಲ.

ಸಚಿವರು ಗಂಭೀರವಾಗಿ ಗಮನಹರಿಸಿ ಬಡ ಶಹನಾಜ್ ಬೇಗಂ ಕುಟುಂಬಕ್ಕೆ ಅಂಗವಿಕಲ ವೇತನ ಮತ್ತು ಸೂರು ಕಲ್ಪಿಸಿ ಕೊಡಬೇಕು ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಜಾವೀದ್ ಹಮ್ಮದ್.