ಖಾಜು ಸಿಂಗೆಗೋಳ

ಕನ್ನಡಪ್ರಭ ವಾರ್ತೆ ಇಂಡಿ

ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿರುವ ಕಸ ವಿಲೇವಾರಿ ಘಟಕ ಅರ್ಧಕ್ಕೆ ನಿಂತಿದ್ದು, ಗ್ರಾಪಂ ಆಡಳಿತದ ನಿರ್ಲಕ್ಷ್ಯದಿಂದ ಘಟಕ ದನಗಳ ಕೊಟ್ಟಿಗೆಯಾಗಿ ಮಾರ್ಪಟ್ಟಿದೆ.

ತಾಲೂಕಿನ ಮಿರಗಿ ಗ್ರಾಮ, ಗ್ರಾಮ ಪಂಚಾಯತಿ ಕೇಂದ್ರ ಸ್ಥಾನ ಹೊಂದಿದೆ. ಸುಮಾರು 4 ಸಾವಿರ ಮತದಾರರನ್ನು ಹೊಂದಿದ್ದು, 9 ಜನ ಗ್ರಾಮ ಪಂಚಾಯತಿ ಸದಸ್ಯ ಸ್ಥಾನ ಹೊಂದಿದೆ. ಗೋಳಸಾರ ಗ್ರಾಮ ಮಿರಗಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುತ್ತದೆ.

ಕಸ ವಿಲೆವಾರಿ ಘಟಕ ಪೂರ್ಣಗೊಳ್ಳದೇ ಇರುವುದರಿಂದ ಅದು ದನಗಳ ಕೊಟ್ಟಿಗೆಯಾಗಿ ಮಾರ್ಪಟ್ಟಿದ್ದು, ಆಸರೆಗಾಗಿ ಎತ್ತು, ದನಗಳನ್ನು ಕಟ್ಟುತ್ತಿದ್ದಾರೆ.


2022-23 ನೇ ಸಾಲಿನ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಸುಮಾರು 10 ಲಕ್ಷ ವೆಚ್ಚದಲ್ಲಿ ಮಿರಗಿ ಗ್ರಾಮದಲ್ಲಿ ಘಟಕ ನಿರ್ಮಿಸಲಾಗಿದೆ.

ಘಟಕದಲ್ಲಿ ಕಸ ಸಂಸ್ಕರಣೆ ನಡೆಯದೇ ಕಸ ಗ್ರಾಮದ ಅಗಸಿ ಮುಂದಿನ ಹಳ್ಳದ ಬದಿಯಲ್ಲಿ ಎಸೆಯಲಾಗುತ್ತದೆ. ಇದರಿಂದಾಗಿ ತ್ಯಾಜ್ಯ ವಿಲೆವಾರಿ ವೈಜ್ಞಾನಿಕವಾಗಿ ನಡೆಯದೇ ಸುತ್ತಲಿನ ಹಲವೆಡೆ ರೋಗಭೀತಿ ಉಂಟಾಗಿದೆ.ಕಸವನ್ನು ವೈಜ್ಞಾನಿಕವಾಗಿ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ವಿಲೇವಾರಿ ಮಾಡುವುದರ ಮೂಲಕ ಕಸದಿಂದ ರಸ ತೆಗೆದು ಲಾಭಮಾಡಿಕೊಳ್ಳುವ ಯೋಜನೆ ಇಲ್ಲಿ ಸಂಪೂರ್ಣ ಹಳ್ಳ ಹಿಡಿದಿದೆ.

ಘನತ್ಯಾಜ್ಯ ವಿಲೇವಾರಿ ಘಟಕ ಕೇವಲ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿದೆ. ಕಸ ವಿಲೆವಾರಿ ವೈಜ್ಞಾನಿಕವಾಗಿ ನಡೆಯದ ಕಾರಣ ಪರಿಸರದ ಮೇಲೆ ಭಾರೀ ಪ್ರಮಾಣದ ದುಷ್ಪಾರಿಣಾಮ ಬೀರುತ್ತಿದೆ.

ಗ್ರಾಮದ ಸುತ್ತಲೂ ರಾಶಿಗಟ್ಟಲೇ ಕಸ ಹರಡಿಕೊಂಡಿದೆ. ಗ್ರಾಮದಿಂದ ಸಂಗ್ರಹಿಸಲಾಗುವ ಕಸವನ್ನು ತಂದು ಹಳ್ಳದ ದಂಡೆಯಲ್ಲಿ ಸುರುವುತ್ತಿರುವುದರಿಂದ ಸೊಳ್ಳೆ ಉತ್ಪತ್ತಿ ತಾಣವಾಗಿದೆ.ತ್ಯಾಜ್ಯದಿಂದ ದುರ್ವಾಸನೆ ಆವರಿಸಿ ಸ್ಥಳೀಯರ ನೆಮ್ಮದಿ ಹಾಳು ಮಾಡುತ್ತಿದೆ.

ಸಂಗ್ರಹವಾಗುವ ಕಸವನ್ನು ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ವಿಲೇವಾರಿ ಮಾಡುತ್ತಿಲ್ಲ ಎನ್ನುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಹಳ್ಳ ಹಿಡಿದ ಯೋಜನೆ: ಗ್ರಾಮದಲ್ಲಿ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ₹10 ಲಕ್ಷ ಖರ್ಚು ಮಾಡಿ ನಿರ್ಮಿಸಿರುವ ಕಸ ವಿಲೇವಾರಿ ಘಟಕ ಪೂರ್ಣಗೊಳ್ಳದೆ ಹಳ್ಳಹಿಡಿದಿದೆ. ಗ್ರಾಮದ ರಸ್ತೆಗಳ ಬದಿ ತ್ಯಾಜ್ಯ ತುಂಬಿ ತುಳುಕುತ್ತಿದೆ.

ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಎಲ್ಲ ಗ್ರಾಮ ಪಂಚಾಯಿತಿಗಳಲ್ಲೂ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸುವ ಯೋಜನೆ ಇದ್ದರೂ ಬಹುತೇಕ ಕಡೆ ಘಟಕಗಳು ಪೂರ್ಣಗೊಂಡಿಲ್ಲ.

ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಘನ ತ್ಯಾಜ್ಯ ನಿರ್ವಹಣೆ ಘಟಕ ಸೇರಿದಂತೆ ವಾಹನ, ತ್ಯಾಜ್ಯ ಸಂಗ್ರಹ ಡಬ್ಬಿಗಳಿಗಾಗಿ ಪಂಚಾಯತ್‌ ರಾಜ್ ಇಲಾಖೆ 2022-23ರಲ್ಲಿ ಹಣ ಬಿಡುಗಡೆ ಮಾಡಿದ್ದು, ಹೆಚ್ಚಿನ ಅನುದಾನಕ್ಕೆ ನರೇಗಾ ಯೋಜನೆ ಬಳಸಿಕೊಂಡು ಘನ ತ್ಯಾಜ್ಯ ಘಟಕ ಸ್ಥಾಪನೆ ಮಾಡಲು ಹಣ ಬಿಡುಗಡೆ ಮಾಡಿದೆ. ಆದರೆ ತಾಲೂಕಿನ ಮಿರಗಿ ಗ್ರಾಪಂನಲ್ಲಿ ಘಟಕ ನಿರ್ಮಾಣ ಅರ್ಧಕ್ಕೆ ನಿಂತಿದೆ.

ಮಿರಗಿ ಗ್ರಾಮ ಪಂಚಾಯತಿಯಿಂದ ನಿರ್ಮಿಸಿದ ಘನತ್ಯಾಜ್ಯ ವಿಲೆವಾರಿ ಘಟಕ ಪೂರ್ಣಗೊಂಡಿಲ್ಲ. ಗ್ರಾಮದಲ್ಲಿನ ಕಸ ಗ್ರಾಮದ ಹೊರಗೆ ಎಲ್ಲೆಂದರಲ್ಲಿ ಬಿಸಾಕುತ್ತಿದ್ದಾರೆ. ಇದರಿಂದ ಗ್ರಾಮದ ಸುತ್ತಲೂ ತ್ಯಾಜ್ಯ ಸಂಗ್ರಹವಾಗಿದೆ. ಕೂಡಲೇ ಕಸ ವಿಲೆವಾರಿ ಘಟಕ ಪೂರ್ಣಗೊಳಿಸಿ, ಗ್ರಾಮದ ತ್ತಾಜ್ಯ ಅದರಲ್ಲಿ ಸಂಗ್ರಹಿಸುವ ಕೆಲಸ ಆಗಬೇಕು.

-ರಮೇಶ ಕನಮಡಿ, ತಾಪಂ ಮಾಜಿ ಸದಸ್ಯ,ಮಿರಗಿ

ಮಿರಗಿ ಗ್ರಾಮದಲ್ಲಿ ಕಸ ವಿಲೆವಾರಿ ಘಟಕ ಪೂರ್ಣಗೊಳ್ಳದ ಬಗ್ಗೆ ಗಮನಕ್ಕೆ ಬಂದಿರುವುದಿಲ್ಲ. ತ್ಯಾಜ್ಯ ವಿಲೆವಾರಿ ಘಟಕ ಪೂರ್ಣಗೊಳಿಸಿ, ಉಪಯೋಗ ಮಾಡುವಂತೆ ಪಿಡಿಒ ಅವರಿಗೆ ಸೂಚಿಸಲಾಗುತ್ತದೆ.

ಮಹಾದೇವಪ್ಪ ಏವೂರ, ಇಒ,ತಾಪಂ ಇಂಡಿ