ಸಿನಿಮಾ ಲೋ ಬಜೆಟ್ ಆಗಿದ್ದರೂ ಕಂಟೆಂಟ್ ಚೆನ್ನಾಗಿದ್ದರೆ ಜನ ಕೈ ಹಿಡಿತಾರೆ. ಇಲ್ಲದಿದ್ದರೆ ಯಾರೂ ಥಿಯೇಟರ್ ಹತ್ತಿರ ಸುಳಿಯಲ್ಲ
ಕೊಪ್ಪಳ: ಜನ ಉತ್ತಮ ಸಿನಿಮಾಗಳನ್ನು ಯಾವತ್ತೂ ಕೈ ಬಿಟ್ಟಿಲ್ಲ. ಆದರೆ ಕನ್ನಡದ ಸಾಕಷ್ಟು ಸಿನಿಮಾ ಇಂದು ಜನರನ್ನು ತಲುಪಲು ವಿಫಲವಾಗುತ್ತಿವೆ. ಇದಕ್ಕೆ ಕಾರಣ ಕಾಟಾಚಾರದ ಸಿನಿಮಾ ನಿರ್ಮಾಣ. ಇಂಥ ಮನೋಭಾವದವರು ಚಿತ್ರರಂಗಕ್ಕೆ ಬರಲೇಬೇಡಿ ಎಂದು ನವನಟ ಜೈದ್ ಖಾನ್ ಹೇಳಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿನಿಮಾ ಲೋ ಬಜೆಟ್ ಆಗಿದ್ದರೂ ಕಂಟೆಂಟ್ ಚೆನ್ನಾಗಿದ್ದರೆ ಜನ ಕೈ ಹಿಡಿತಾರೆ. ಇಲ್ಲದಿದ್ದರೆ ಯಾರೂ ಥಿಯೇಟರ್ ಹತ್ತಿರ ಸುಳಿಯಲ್ಲ. ಆಗ ಸಿನಿಮಾ ನಿರ್ಮಿಸಿದವರೇ ತಮ್ಮ ಮನೆಯಲ್ಲಿ ತಾವೇ ಕುಳಿತು ತಮ್ಮ ಸಿನಿಮಾ ನೋಡಬೇಕಷ್ಟೇ ಎಂದು ಅಭಿಪ್ರಾಯಪಟ್ಟರು.ತಾವು ನಟಿಸಿದ ಕನ್ನಡದ ಮೊದಲ ಸಿನಿಮಾ ಬನಾರಸ್, ಮಿಸ್ಟಿರಿಯಸ್ ಲವ್ ಸ್ಟೋರಿ ಆಗಿತ್ತು. ಜನ ಆ ಸಿನಿಮಾ ಮತ್ತು ಹಾಡು ಇಷ್ಟಪಟ್ಟಿದ್ದರು. ತಮ್ಮ ಎರಡನೇ ಸಿನಿಮಾ ಕಲ್ಟ್ ೨೦೨೬ರ ಜ. ೨೩ರಂದು ಬಿಡುಗಡೆ ಆಗ್ತಿದೆ. ಇದು ಸಹ ಲವ್ ಸ್ಟೋರಿ ಹೊಂದಿದ್ದು ಥ್ರಿಲ್ಲಿಂಗ್ ಅಂಶ ಹೈಲೈಟ್ ಆಗಿದೆ ಎಂದರು.
ಕಲ್ಟ್ ಸಿನಿಮಾದಲ್ಲಿ ಥ್ರಿಲ್ಲಿಂಗ್ ಇದೆ. ವೈಲೆನ್ಸ್ ಇದೆ. ಮೂರು ಭಿನ್ನತೆಗಳಲ್ಲಿ ಕಾಣಿಸಿಕೊಂಡಿದ್ದೇನೆ. ಮೂರು ಹಾಡು ನೋಡಿದರೆ ಗೊತ್ತಾಗುತ್ತೆ. ಮೂರು ಗೆಟಪ್‌ಗಳಲ್ಲಿ ಕಾಣಿಸಿಕೊಂಡಿದ್ದೇನೆ. ಸಿನಿಮಾದ ಪ್ರಮೋಷನ್ ವರ್ಕ್ ಶುರುವಾಗಿದ್ದು ಕೊಪ್ಪಳಕ್ಕೆ ಬಂದಿದ್ದೇನೆ. ಇಲ್ಲಿನ ಜನರ ಪ್ರೀತಿ ಕಂಡು ಮೂಕವಿಸ್ಮಿತನಾಗಿದ್ದೇನೆ ಎಂದು ಹರ್ಷ ವ್ಯಕ್ತಪಡಿಸಿದರು.ಡಿ. ೧೧ಕ್ಕೆ ದರ್ಶನ್ ಅಣ್ಣನ ಸಿನಿಮಾ ಡೆವಿಲ್ ಬಿಡುಗಡೆ ಆಗ್ತಿದೆ. ಎಲ್ಲರೂ ಥಿಯೇಟರ್‌ಗೆ ಹೋಗಿ ಸಿನಿಮಾ ನೋಡಿ ಎಂದು ಮನವಿ ಮಾಡಿದರು.
ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬೆಂಗಳೂರು ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಪ್ರತಿಕ್ರಿಯೆ ಕೊಟ್ಟಿದೀನಿ. ನನ್ನ ದೃಷ್ಟಿಕೋನದಲ್ಲಿ ಅವರು ಸನ್ನೆ ಮಾಡಿದ್ದು ಜನರಿಗಲ್ಲ, ಜತೆಲಿದ್ದ ಸ್ನೇಹಿತರಿಗೆ ಎಂದರು. ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಸನ್ಮಾನಿಸಿ, ಅಭಿನಂದಿಸಿದರು.ಅದ್ಧೂರಿ ಮೆರವಣಿಗೆ: ನಟ ಜೈದ್ ಖಾನ್ ಕೊಪ್ಪಳಕ್ಕೆ ಬರುತ್ತಿದ್ದಂತೆ ನಗರದ ಬಸವೇಶ್ವರ ವೃತ್ತದಲ್ಲಿ ಅವರನ್ನು ಸ್ವಾಗತಿಸಲಾಯಿತು. ಬಸವಣ್ಣ ಮೂರ್ತಿಗೆ ಮಾಲಾರ್ಪಣೆ ಮಾಡಿ ಅಲ್ಲಿಂದ ಅದ್ಧೂರಿ ಮೆರವಣಿಗೆ ಮೂಲಕ ಅಶೋಕ ವೃತ್ತ, ಸಾಹಿತ್ಯ ಭವನ ತಲುಪಲಾಯಿತು.
ಕೊಪ್ಪಳ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಸೇರಿದಂತೆ ಅನೇಕರು ಇದ್ದರು.