ಸೆಕ್ಯುರಿಟಿ ಗಾರ್ಡ್‌ ಉದ್ಯೋಗ ಕೊಡಿಸುತ್ತೇವೆಂದು ಆಮಿಷ ತೋರಿಸಿದ್ದ ಮುಂಬೈ ಮೂಲದ ವಂಚಕರ ಜಾಲದಲ್ಲಿ ಸಿಲುಕಿ ಬಲವಂತವಾಗಿ ರಷ್ಯಾ ವ್ಯಾಗನರ್ ಆರ್ಮಿ(ಖಾಸಗಿ ಸೇನೆ)ಗೆ ಸೇರಿ 9 ತಿಂಗಳು ಜೀವ ಭಯದಲ್ಲೇ ದಿನ ಕಳೆಯುತ್ತಿದ್ದ ಕಲಬುರಗಿ ಮೂಲದ ಮೂವರು ಯುವಕರು ಕೊನೆಗೂ ಸುರಕ್ಷಿತವಾಗಿ ಹುಟ್ಟೂರಿಗೆ ಮರಳಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಸೆಕ್ಯುರಿಟಿ ಗಾರ್ಡ್‌ ಉದ್ಯೋಗ ಕೊಡಿಸುತ್ತೇವೆಂದು ಆಮಿಷ ತೋರಿಸಿದ್ದ ಮುಂಬೈ ಮೂಲದ ವಂಚಕರ ಜಾಲದಲ್ಲಿ ಸಿಲುಕಿ ಬಲವಂತವಾಗಿ ರಷ್ಯಾ ವ್ಯಾಗನರ್ ಆರ್ಮಿ(ಖಾಸಗಿ ಸೇನೆ)ಗೆ ಸೇರಿ 9 ತಿಂಗಳು ಜೀವ ಭಯದಲ್ಲೇ ದಿನ ಕಳೆಯುತ್ತಿದ್ದ ಕಲಬುರಗಿ ಮೂಲದ ಮೂವರು ಯುವಕರು ಕೊನೆಗೂ ಸುರಕ್ಷಿತವಾಗಿ ಹುಟ್ಟೂರಿಗೆ ಮರಳಿದ್ದಾರೆ.

ಜಿಲ್ಲೆಯ ಆಳಂದ ತಾಲೂಕಿನ ನರೋಣಾ ಗ್ರಾಮದ ಸೈಯದ್ ಇಲಿಯಾಸ್ ಹುಸೇನಿ, ಮೊಹಮ್ಮದ್ ಸಮೀರ್ ಅಹಮದ್, ಮೊಹಮ್ಮದ್ ನಯೀಂ ಎಂಬ ಯುವಕರು ನೌಕರಿಗೆಂದು ಹೋದವರು ವಂಚಕರ ಚಾಲಾಕಿತನಕ್ಕೆ ಮೋಸ ಹೋಗಿ ಉಕ್ರೇನ್‌ ವಿರುದ್ಧ ಹೋರಾಡುತ್ತಿರುವ ರಷ್ಯಾದ ಖಾಸಗಿ ಸೇನೆಗೆ ಸೇರ್ಪಡೆಯಾಗಿದ್ದರು. ಬಳಿಕ ರಷ್ಯಾ-ಉಕ್ರೇನ್‌ ಗಡಿಯಲ್ಲಿ ಸೇನೆಯ ಕೆಲಸಕ್ಕೆ ನಿಯೋಜನೆಗೊಂಡಿದ್ದರು.

ಮುಂಬೈ ಮೂಲದ ಬಾಬಾ ಎಂಬ ಎಜೆಂಟ್​ ತಮ್ಮನ್ನು ಅಲ್ಲಿಗೆ ಕಳುಹಿಸಿದ್ದು, ಬಳಿಕ ಸೇನೆ ಕೆಲಸಕ್ಕೆ ಸೇರಿಸಲಾಗಿದೆ ಎಂದು ಅಲ್ಲಿಂದ ವಿಡಿಯೋ ಕಳುಹಿಸಿದ್ದ ಯುವರು ತಮ್ಮ ರಕ್ಷಣೆಗೆ ಕೋರಿ ಪೋಷಕರಿಗೆ ವಿಡಿಯೋ ರವಾನಿಸಿದ್ದರು.

ಈ ಕುರಿತು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಡಾ.ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ, ಅಂದಿನ ಸಂಸದ ಡಾ.ಉಮೇಶ್‌ ಜಾಧವ್‌ ಸೇರಿ ಅನೇಕರು ಕೇಂದ್ರದ ಗಮನ ಸೆಳೆದಿದ್ದರಲ್ಲದೆ, ವಿದೇಶಾಂಗ ಇಲಾಖೆಗೂ ಯುವಕರ ರಕ್ಷಣೆ ಮಾಡುವಂತೆ ಕೋರಿದ್ದರು.

ಅದರಂತೆ ಪ್ರಧಾನಿ ಮೋದಿ, ವಿದೇಶಾಂಗ ಸಚಿವ ಜೈಶಂಕರ್‌ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಹಾಗೂ ಅಲ್ಲಿನ ವಿದೇಶಾಂಗ ಇಲಾಖೆಯ ಜತೆಗೆ ನಡೆಸಿದ ಮಾತುಕತೆಯ ಫಲವಾಗಿ ಯುದ್ಧ ಭೂಮಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಈ ಯುವಕರು ಸುರಕ್ಷಿತವಾಗಿ ಕಲುಬರಗಿಗೆ ಮರಳುವಂತಾಗಿದೆ.

ರಷ್ಯಾ-ಉಕ್ರೇನ್‌ ಗಡಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ ದೇಶದ ಹಲವೆಡೆಯ ಯುವಕರ ಜತೆಗೆ ಕಲಬುರಗಿಯ ಮೂವರನ್ನು ಸುರಕ್ಷಿತವಾಗಿ ಕರೆತಂದ ವಿಮಾನ ಗುರುವಾರ ದಿಲ್ಲಿ ತಲುಪಿತ್ತು. ಬಳಿಕ ಅಲ್ಲಿಂದ ಹೈದ್ರಾಬಾದ್‌ಗೆ ವಿಮಾನದ ಮೂಲಕ ಆಗಮಿಸಿ, ಶುಕ್ರವಾರ ರಾತ್ರಿ 11 ಗಂಟೆಗೆ ಕಲಬುರಗಿಯ ತಮ್ಮ ಮನೆ ಸೇರಿದ್ದಾರೆ.

ದೇವರು ದೊಡ್ಡವನು ನಮ್ಮ ಮಕ್ಕಳು ಸುರಕ್ಷಿತವಾಗಿ ವಾಪಸಾಗಿದ್ದಾರೆ. 2023ರ ಡಿ.28 ರಿಂದ ಮನೆ ಬಿಟ್ಟು ಹೋಗಿದ್ದವರು 9 ತಿಂಗಳ ಕಾಲ ಜೀವ ಕೈಯಲ್ಲಿ ಹಿಡಿದೇ ಉಕ್ರೆನ್‌ ಗಡಿಯಲ್ಲಿದ್ದರು. ನಮ್ಮ ಮಕ್ಕಳು ಸುರಕ್ಷಿತವಾಗಿ ಮನೆ ಸೇರಲು ನೆರವಾದ ಪ್ರಧಾನಿ ಮೋದಿ, ವಿದೇಶಾಂಗ ಸಚಿವ ಜೈಶಂಕರ್‌, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಚಿವ ಪ್ರಿಯಾಂಕ್‌ ಖರ್ಗೆ, ಡಿಸಿ ಫೌಜಿಯಾ ತರನ್ನುಮ್‌ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ.

ನವಾಜ್‌ ಅಲಿ, ಯುವಕ ಸೈಯ್ಯದ್‌ ಇಲಿಯಾಸ್‌ ಅವರ ತಂದೆ