ಸಾರಾಂಶ
ನರಸಿಂಹರಾಜಪುರ, ಸಮುದಾಯದ ಸಂಘಟನೆಯಿಂದ ಸಮಾಜದ ಬದಲಾವಣೆಗೆ ಪ್ರಯತ್ನಿಸಬೇಕು ಎಂದು ಉಡುಪಿ- ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ಬಿ.ಎಚ್.ಕೈಮರದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ 170 ನೇ ಜಯಂತ್ಯೋತ್ಸವ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಸಮುದಾಯದ ಸಂಘಟನೆಯಿಂದ ಸಮಾಜದ ಬದಲಾವಣೆಗೆ ಪ್ರಯತ್ನಿಸಬೇಕು ಎಂದು ಉಡುಪಿ- ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ಶನಿವಾರ ತಾಲೂಕಿನ ಬಿ.ಎಚ್.ಕೈಮರದಲ್ಲಿ ನಾರಾಯಣ ಗುರು ಸಮುದಾಯ ಭವನದಲ್ಲಿ ನಡೆದ ಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮದಲ್ಲಿ ಗುರುಗಳ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ನಮ್ಮ ಸಮುದಾಯದ ಮಕ್ಕಳು ಸ್ವಂತ ದುಡಿಮೆಯಿಂದ ಬದುಕುವಂತಾದರೆ ನಮ್ಮ ಸಮುದಾಯ ಅಭಿವೃದ್ಧಿ ಹೊಂದಿದೆ ಎಂದರ್ಥ. ನಮ್ಮ ದೇಶದ ಸಂವಿಧಾನದಲ್ಲಿ ಒಬ್ಬ ಸೇಂದಿ ಮಾರುವವನ ಮಗಳೂ ಕೂಡ ಎಂಬಿಬಿಎಸ್ ಓದಿ ವೈದ್ಯರಾಗುವ ಅವಕಾಶ ಸಿಕ್ಕಿದೆ. ಶತಮಾನಗಳ ಹಿಂದೆ ನಾರಾಯಣ ಗುರುಗಳು ಅಸ್ಪೃಶ್ಯತೆ ವಿರುದ್ಧ ಸಿಡಿದೆದ್ದಿದ್ದರು. ಮಹಾತ್ಮಾಗಾಂಧಿ ಅವರು ನಾರಾಯಣ ಗುರು ಅವರ ಆಶ್ರಮಕ್ಕೆ ಭೇಟಿ ನೀಡಿದಂತಹ ಸಂದರ್ಭದಲ್ಲಿ ನಾರಾಯಣಗುರು ಒಬ್ಬ ಆಧುನಿಕ ಬ್ರಹ್ಮ ಎಂದು ವರ್ಣನೆ ಮಾಡಿದ್ದರು. ನಾವೆಲ್ಲರೂ ಕೂಡ ಸಮರ್ಪಣಾ ಮನೋಭಾವದಿಂದ, ಸ್ವಾರ್ಥ ರಹಿತ ಸೇವೆ ಸಲ್ಲಿಸಲು ಸಂಘಟಿತ ರಾಗಬೇಕೆಂದು ಕರೆ ನೀಡಿದರು.ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಮಾತನಾಡಿ, ನಮ್ಮ ಸಮುದಾಯದ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬಾರದು. ಶಿಕ್ಷಣದಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಬಲಾಢ್ಯ ರಾಗ ಬೇಕು. ದೇವಸ್ಥಾನಕ್ಕೆ ನಮ್ಮನ್ನು ಪ್ರವೇಶಿಸದಂತೆ ಮಾಡಿದವರ ಸಿದ್ಧಾಂತಗಳಿಗೆ ನಾವು ಇಂದು ಬಲಿಯಾಗುತ್ತಿದ್ದೇವೆ. ನಮ್ಮ ಸಮುದಾಯ ಶೈಕ್ಷಣಿಕ, ರಾಜಕೀಯವಾಗಿ, ಆರ್ಥಿಕ ಸಧೃಢ, ಸಂಘಟಿತರಾಗಬೇಕಾಗಿದೆ. ಕೆಲಸ ಮಾಡಲು ಅಧಿಕಾರವೇ ಬೇಕೆಂದಿಲ್ಲ. ನಾನು ಅಧಿಕಾರವಿಲ್ಲದೇ ಇರುವಾಗಲೇ ಮಾಡಿದ ಕೆಲಸಕಾರ್ಯಗಳನ್ನು, ಅಧಿಕಾರದಲ್ಲಿ ಇರುವವರು ಇನ್ನೂ ಹತ್ತು ವರ್ಷಗಳಾದರೂ ಮಾಡಲು ಸಾಧ್ಯವಿಲ್ಲ. ಡ, ಮಾಡುವ ಮನಸ್ಸಿದ್ದರೆ ಸಾಕು. ಸರ್ಕಾರದ ಸೌಲಭ್ಯ ಸಮಾಜದ ಕಟ್ಟ ಕಡೆಯ ಪಂಕ್ತಿಯಲ್ಲಿರುವ ವ್ಯಕ್ತಿಗೂ ದೊರಕವಂತೆ ಸೇವೆ ಮಾಡುವವರಂತಹವರನ್ನು ಆಯ್ಕೆ ಮಾಡಬೇಕು. ಪಕ್ಷತೀತವಾಗಿ ಕೆಲಸ ಮಾಡುವವರನ್ನು ಆಯ್ಕೆ ಮಾಡಿ ಎಂದು ಸಲಹೆ ನೀಡಿದರು. ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದ ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಮಾತನಾಡಿ, ನಾರಾಯಣಗುರುಗಳ ಜಯಂತಿ ಆಚರಣೆ ಸಂದರ್ಭದಲ್ಲಿ ಅವರು ಪ್ರತಿಪಾಧಿಸಿರುವ ಬಾಂಧವ್ಯ, ಪ್ರೀತಿ, ಒಂದೇ ಜಾತಿ ಒಂದೇ ಧರ್ಮ ಚಿಂತನೆಯಡಿ, ಪ್ರೀತಿಯಿಂದ, ಸೌಹಾರ್ಧತೆಯಿಂದ ಎಲ್ಲರೂ ಸಮಾಜದಲ್ಲಿ ಒಗ್ಗೂಡಿ ಬಾಳುವ ಅವಶ್ಯಕತೆ ಇದೆ. ದಿನ ನಿತ್ಯದ ಜೀವನದಲ್ಲಿ ನಾರಾಯಣಗುರುಗಳ ಚಿಂತನೆ, ಆದರ್ಶ ಅಳವಡಿಸಿಕೊಳ್ಳಬೇಕೆಂದರು.ಶ್ರೀ ನಾರಾಯಣಗುರು ಸಮಾಜದ ತಾಲೂಕು ಅಧ್ಯಕ್ಷ ಪಿ.ಆರ್.ಸದಾಶಿವ ಮಾತನಾಡಿ, ನಮ್ಮ ಸಮುದಾಯಕ್ಕೆ ಶಕ್ತಿ ತುಂಬಿದ ವ್ಯಕ್ತಿ ಎಂದರೆ ಅದು ಬಿ.ಕೆ.ಹರಿಪ್ರಸಾದ್ಅ ವರ ಪರಿಶ್ರಮದಿಂದ ನಮ್ಮ ಸಂಘ ಉತ್ತಮವಾಗಿ ಬೆಳೆಯುತ್ತಿದೆ. ಸುಂದರ ಸಮುದಾಯ ಭವನ ನಿರ್ಮಾಣವಾಗಿದೆ. ಕೇರಳದಲ್ಲಿ ನಾರಾಯಣಗುರುಗಳು ಸಾಮಾಜಿಕ ಕ್ರಾಂತಿಯನ್ನೇ ಮಾಡಿದ್ದರು. ಈಗ ನಮ್ಮ ಹರಿಪ್ರಸಾದ್ ಅವರು ಸಮುದಾಯದ ಏಳ್ಗೆಗೆ ರಾಜಕೀಯ, ಶೈಕ್ಷಣಿಕ, ಧಾರ್ಮಿಕ ಕ್ರಾಂತಿ ಮಾಡುತ್ತಾ ಸಮುದಾಯದ ಬೆನ್ನೆಲುಬಾಗಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಸಾಧಕರಾದ ಡಾ.ಅಶ್ವಿನಿಶಿವ ಹಾಗೂ ಸಂಘದ ಹಿರಿಯ ಸದಸ್ಯ ಪಿ.ರಾಜೀವ, ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ, ಗ್ರಾಪಂಗಳಿಂದ ಆಯ್ಕೆಯಾದ ಸಮುದಾಯದ ಚುನಾಯತ ಜನಪ್ರತಿನಿಧಿಗಳು ಹಾಗೂ ವಿವಿಧ ಸೊಸೈಟಿಗಳಲ್ಲಿ ಚುನಾಯಿತರಾದ ಸಮುದಾಯದ ನಿರ್ದೇಶಕರನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿಯುಸಿ ಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.ಸಮಾರಂಭದಲ್ಲಿ ಪಪಂ ಅಧ್ಯಕ್ಷೆ ಸುರಯ್ಯಭಾನು, ತಹಸೀಲ್ದಾರ್ ತನುಜ.ಟಿ.ಸವದತ್ತಿ, ನಾರಾಯಣಗುರು ಸಮಾಜದ ಉಪಾಧ್ಯಕ್ಷ ಎಂ.ವಿ.ಮೂರ್ತಿ, ನಾರಾಯಣಪೂಜಾರಿ, ಪದಾಧಿಕಾರಿಗಳಾದ ವಾಸುದೇವಕೋಟ್ಯಾನ್, ಸಿ.ಎನ್.ದೇವರಾಜ್, ಮಾಳೂರುದಿಣ್ಣೆರಮೇಶ್,ನಾಗರತ್ನ,ಡಿ.ಶಂಕರ,ಪ್ರೇಮಾ ವಾಸುದೇವಕೋಟ್ಯಾನ್,ರೇಖಾಅಶೋಕ್, ಕುಸುಮಾರಮೇಶ್, ಹಾತೂರುಪ್ರಭಾಕರ್, ನಾಗರಾಜ್,ಎಚ್.ಎಲ್.ಯೋಗೀಶ್‌ರಾವ್,ಶಾಂತಸುಗು ಮತ್ತಿತರರು ಉಪಸ್ಥಿತರಿದ್ದರು.