ಸಾರಾಂಶ
ಸಜಾ ಬಂಧಿಯ ಕೊಠಡಿಯಿಂದ ಕೆಲ ವಸ್ತುಗಳನ್ನು ಸಾಗಿಸಿ ಕಾರಾಗೃಹದ ನಿಯಮ ಉಲ್ಲಂಘಿಸಿದ ಆರೋಪದಡಿ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದ ಜೈಲರ್ ಸೇರಿ ಮೂವರು ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಸಜಾ ಬಂಧಿಯ ಕೊಠಡಿಯಿಂದ ಕೆಲ ವಸ್ತುಗಳನ್ನು ಸಾಗಿಸಿ ಕಾರಾಗೃಹದ ನಿಯಮ ಉಲ್ಲಂಘಿಸಿದ ಆರೋಪದಡಿ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದ ಜೈಲರ್ ಸೇರಿ ಮೂವರು ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.ಕೇಂದ್ರ ಕಾರಾಗೃಹದ ವೀಕ್ಷಕ ಕೆ.ಎಸ್.ಸುದರ್ಶನ್, ಜೈಲರ್ ಪರಮೇಶ್ ನಾಯ್ಕ್ ಲಮಾಣಿ, ಸಹಾಯಕ ಜೈಲರ್ ಕೆ.ಬಿ.ರಾಯಮನೆ ಅಮಾತುಗೊಂಡವರು.
ಆ.24ರಂದು ಕೇಂದ್ರ ಅಪರಾಧ ದಳ(ಸಿಸಿಬಿ) ಪೊಲೀಸರು ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದ ಮೇಲೆ ಅನಿರೀಕ್ಷಿತ ದಾಳಿ ಮಾಡಿ ತಪಾಸಣೆ ನಡೆಸಿದ್ದರು. ಈ ವೇಳೆ ಯಾವುದೇ ನಿಷೇಧಿತ ವಸ್ತುಗಳು ಸಿಕ್ಕಿರಲಿಲ್ಲ. ಆ.23ರ ರಾತ್ರಿ ಕಾರಾಗೃಹದ ಸಿಸಿಟೀವಿ ಕ್ಯಾಮರಾ ದಶ್ಯಾವಳಿ ಪರಿಶೀಲಿಸಿದಾಗ ಕಾರಾಗೃಹ ಭದ್ರತಾ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಬಂಧಿಗಳ ಕೊಠಡಿಯಿಂದ ಕೆಲ ವಸ್ತುಗಳನ್ನು ಸಾಗಿಸುತ್ತಿರುವುದು ಕಂಡು ಬಂದಿದೆ.ಸಜಾ ಬಂಧಿ ಕೊಠಡಿಯಿಂದ ವಸ್ತುಗಳ ಸಾಗಣೆ:
ಆ.23ರ ರಾತ್ರಿ 10.30ರಿಂದ 11.30ರ ನಡುವಿನ ಸಿಸಿಟಿವಿ ದೃಶ್ಯಾವಳಿಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಕಾರಾಗೃಹ ಭದ್ರತಾ ವಿಭಾಗದ ವೀಕ್ಷಕ ಕೆ.ಎಸ್.ಸುದರ್ಶನ್ ಸಜಾ ಬಂಧಿ ಮುಜೀಬ್ ಸಹಾಯದಿಂದ ಕೊಠಡಿಯಿಂದ ಕೆಲ ವಸ್ತುಗಳನ್ನು ಸಾಗಿಸುತ್ತಿರುವುದು ಕಂಡು ಬಂದಿದೆ. ಅಂದು ಜೈಲರ್ ಪರಮೇಶ್ ನಾಯ್ಕ್ ಲಮಾಣಿ ಮತ್ತು ಸಹಾಯಕ ಜೈಲರ್ ಕೆ,ಬಿ.ರಾಯಮನೆ ಕರ್ತವ್ಯ ನಿರ್ವಹಿಸುತ್ತಿದ್ದರು.ಎಫ್ಐಆರ್ ದಾಖಲು:
ಹೀಗಾಗಿ ಕಾರಾಗೃಹದ ನಿಯಮದ ಉಲ್ಲಂಘನೆ ಆರೋಪದಡಿ ಸಜಾ ಬಂಧಿತ ಮುಜೀಬ್, ಕಾರಾಗೃಹದ ವೀಕ್ಷಕ ಕೆ.ಎಸ್.ಸುದರ್ಶನ್, ಜೈಲರ್ ಪರಮೇಶ್ ನಾಯ್ಕ್ ಲಮಾಣಿ, ಸಹಾಯಕ ಜೈಲರ್ ಕೆ.ಬಿ.ರಾಯಮನೆ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕಾರಾಗೃಹ ಇಲಾಖೆ ಡಿಐಜಿ ಎಂ.ಸೋಮಶೇಖರ್ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರು ಪೊಲೀಸರು ಆಧರಿಸಿ ಈ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಇದರ ಬೆನ್ನಲ್ಲೇ ಆರೋಪಿತ ಮೂವರು ಕಾರಾಗೃಹ ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.